ಮುಂದುವರೆದ ಮಳೆ ಅಬ್ಬರ; ಧಾರಾಕಾರ ಮಳೆಗೆ ನಲುಗಿದ ಬೆಂಗಳೂರು!

ಕಳೆದ ಒಂದು ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ, ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ ಕೊಂಚ ಬಿಡುವು ನೀಡಿತ್ತು. ಆದರೆ, ಭಾನುವಾರ ರಾತ್ರಿ ಮತ್ತೆ ತನ್ನ ಅಬ್ಬರವನ್ನು ಮುಂದುವರೆಸಿದ ಮಳೆ, ಸಂಜೆ 6 ರಿಂದ 9 ಗಂಟೆಯವರೆಗೆ ಸುರಿದಿದೆ. ನಗರದ ಹಲವು ರಸ್ತೆಗಳು ಮಳೆ ನೀರಿನಿಂದಾಗಿ ತುಂಬಿಹೋಗಿದ್ದು, ಹಲವೆಡೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಪೀಣ್ಯ, 8ನೇ ಮೈಲಿ ರಸ್ತೆಯಲ್ಲಿ ಐದಾರು ಅಡಿಯಷ್ಟು ನೀರು ರಸ್ತೆಯಲ್ಲಿ ಹರಿಯುತ್ತಿತ್ತು. ಪ್ಯಾಲೆಸ್ ರಸ್ತೆ, ಯಲಹಂಕ, ವಿದ್ಯಾರಣ್ಯಪುರ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಇಲ್ಲಿ ರಾತ್ರಿ 12 ಆಗಿದ್ದರೂ ಸಹ ಟ್ರಾಫಿಕ್ ಜಾಮ್ ಕಂಡುಬಂತು. ರಸ್ತೆಯಲ್ಲಿ ಮೊಣಕಾಲು ಮಟ್ಟದವರೆಗೂ ನೀರು ನಿಂತಿದ್ದರಿಂದ ಬಹುತೇಕ ಕಾರು, ಬೈಕ್‌ಗಳು ರಸ್ತೆಯಲ್ಲಿಯೇ ನಿಂತಿದ್ದವು. ಯಲಹಂಕ ಬಳಿ ನಾಲ್ಕೈದು ಬಿಎಂಟಿಸಿ ಬಸ್‌ಗಳು ರಸ್ತೆಯಲ್ಲಿಯೇ ಕೆಟ್ಟು ನಿಂತಿದ್ದವು.

ಧಾರಾಕಾರ ಮಳೆಯಿಂದಾಗಿ ಹಲವೆಡೆ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಜನಜೀವನ ಅಸ್ತವಯಸ್ತವಾಗಿದೆ. ನಗರದ ತಗ್ಗು ಪ್ರದೇಶಗಳಲ್ಲಿ ಮನೆಯೊಳಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿನ ವಸ್ತುಗಳೆಲ್ಲವೂ ಹಾಳಾಗಿವೆ. ರಾತ್ರಿ ಒಂದು ಕಡೆ ಧಾರಾಕಾರ ಮಳೆ, ಮತ್ತೊಂದು ಕಡೆ ಮಲಗಲು ಜಾಗವಿಲ್ಲದೆ ಬಹುತೇಕರು ಜಾಗರಣೆ ಮಾಡಬೇಕಾದಂತಹ ಪರಿಸ್ಥಿತಿ ಇತ್ತು. ವಿದ್ಯಾರಣ್ಯಪುರದ ವೆಂಕಟಸ್ವಾಮಪ್ಪ ಲೇಔಟ್, ಹಾಗೂ ಬಸವ ಸಮಿತಿ ಲೇಔಟ್ ರಸ್ತೆಗಳು ಕೆರೆಯಂತಾಗಿದ್ದವು.

ಬಿಬಿಎಂಪಿ ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ರೀತಿ ಸಮಸ್ಯೆಯಾಗುತ್ತದೆ. ಆದರೆ, ಬಿಬಿಎಂಪಿ ಅಧಿಕಾರಿಗಳು, ಶಾಸಕರು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ, ನಮ್ಮ ಬೇಡಿಕೆಗಳಿಗೆ ಕ್ಯಾರೆ ಎನ್ನುತ್ತಿಲ್ಲ. ಕೇವಲ ಓಟು ಕೇಳುವುದಕ್ಕೆ ಮಾತ್ರ ಬರುತ್ತಾರೆ. ನಮ್ಮ ಜೀವನದ ಬಗ್ಗೆ ಇವರಿಗೆ ಕಾಳಜಿಯೇ ಇಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೋಮು ಗಲಬೆಗೆ ಹುನ್ನಾರ; ಕನ್ನಡ ಪ್ರಭ ಪತ್ರಕರ್ತ ಮತ್ತು ಇಬ್ಬರು ಬಿಜೆಪಿಗರ ವಿರುದ್ದ ಎಫ್‌ಐಆರ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights