ಕೋಮು ಗಲಬೆಗೆ ಹುನ್ನಾರ; ಕನ್ನಡ ಪ್ರಭ ಪತ್ರಕರ್ತ ಮತ್ತು ಇಬ್ಬರು ಬಿಜೆಪಿಗರ ವಿರುದ್ದ ಎಫ್‌ಐಆರ್‌!

ಬುರ್ಖಾಧಾರಿ ಮಹಿಳೆಯರು ಇತ್ತೀಚೆಗೆ ಕೊಡಗು ಜಿಲ್ಲೆಯ ಶನಿವಾರಸಂತೆ ಪೊಲೀಸ್‌ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅವರು ‘ಅಂಬೇಡ್ಕರ್ ಝಿಂದಾಬಾದ್’ ಎಂದು ಕೋಗಿದ್ದ ಘೋಷಣೆಯನ್ನು, ದುಷ್ಕರ್ಮಿಗಳು ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ತಿರುಚಿ, ‘‘ಮುಸ್ಲಿಂ ಮಹಿಳೆಯರು ಪೊಲೀಸ್‌ ಠಾಣೆಯ ಮುಂದೆಯೇ ‘ಪಾಕಿಸ್ತಾನ್ ಝಿಂದಾಬಾದ್’ ಕೂಗಿದ್ದಾರೆ” ಎಂದು ವೈರಲ್ ಮಾಡಿದ್ದರು. ಇದೀಗ, ವಿಡಿಯೋ ತಿರುಚಿದ ಪ್ರಕರಣದಲ್ಲಿ ಸ್ಥಳೀಯ ಬಿಜೆಪಿ ನಾಯಕ ಗಿರೀಶ್‌, ಕನ್ನಡ ಪ್ರಭ ಪತ್ರಕರ್ತ ಹರೀಶ್‌ ಹಾಗೂ ಮತ್ತೊಬ್ಬ ಸ್ಥಳೀಯ ರಾಜಕೀಯ ನಾಯಕ ರಘು ಎಂಬವರ ವಿರುದ್ದ ಶನಿವಾರಸಂತೆ ಠಾಣಾ ಪೊಲೀಸರು ಸ್ವಯಂ ಪ್ರೇರಿತ FIR ದಾಖಲಿಸಿದ್ದಾರೆ.

ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ಬುರ್ಖಾದಾರಿ ಮಹಿಳೆಯರು ಶನಿವಾರಸಂತೆ ಪೊಲೀಸ್ ಠಾಣೆಯ ಮುಂದೆ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅವರು ಅಂಬೇಡ್ಕರ್‌ ಝಿಂದಾಬಾದ್ ಎಂದು ಕೂಗಿದ್ದರು.

ನಂತರ ಈ ವಿಡಿಯೊವನ್ನು ಶನಿವಾರಸಂತೆಯ ಗ್ರಾಮ ಪಂಚಾಯತ್‌ ಸದಸ್ಯರಾದ ಎಸ್‌.ಎನ್‌. ರಘು ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯ, ಕನ್ನಡ ಪ್ರಭ ಪತ್ರಿಕೆಯ ಪತ್ರಕರ್ತ ಹಾಗೂ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವ ಹರೀಶ್‌ ಅವರು, ಕೋಮು ಸೌಹಾರ್ದತೆಯನ್ನು ಕದಡುವ ದುರುದ್ದೇಶದಿಂದ, ಶನಿವಾರಸಂತೆ ಪೊಲೀಸ್ ಠಾಣೆಯ ಮುಂದೆ ಮುಸ್ಲಿಂ ಮಹಿಳೆಯರು ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದು, ಇದನ್ನು ವಿರೋಧಿಸಿ ಶನಿವಾರ ಸಂತೆ ಬಂದ್ ಮಾಡಿ ಪ್ರತಿಭಟಿಸುವಂತೆ ಕರೆ ನೀಡಿದ್ದರು.

ಇದನ್ನೂ ಓದಿ: ರೈತ ಹೋರಾಟ: ಸರ್ವಾಧಿಕಾರಿ ಎಷ್ಟೇ ಬಲಶಾಲಿಯಾಗಿದ್ದರೂ, ಜನಶಕ್ತಿಗೆ ಮಣಿಯಲೇಬೇಕು: ಸಿದ್ದರಾಮಯ್ಯ

ಹರೀಶ್‌ ಮತ್ತು ರಘು ಅವರ ಮಾತುಗಳಿಂದ ಪ್ರಚೋದನೆಗೆ ಒಳಗಾಗಿದ್ದ ಮತ್ತೊಬ್ಬ ಆರೋಪಿ ಗಿರೀಶ್ ವಾಟ್ಸಪ್‌‌ನಿಂದ ಮುಸ್ಲಿಂ ಮಹಿಳೆಯರು ಪಾಕಿಸ್ತಾನ್ ಝಿಂದಾಬಾದ್ ಕೂಗಿದ್ದಾರೆ ಎಂದು ಸುಳ್ಳು ಬರೆದು ಎಲ್ಲೆಡೆ ವಿಡಿಯೊವನ್ನು ಹರಿಯಬಿಟ್ಟಿದ್ದಾರೆ.

ವಾಟ್ಸಪ್‌ನ ಈ ಸಂದೇಶವು ಸಮಾಜದ ಕೋಮು ಸೌಹಾರ್ಧತೆ ಕದಡುವಂತೆ ಮಾಡಿದೆ ಎಂದು ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ದೂರಿದ್ದಾರೆ. “ಈ ಎಲ್ಲಾ ಹೇಳಿಕೆಗಳು ಹಾಗೂ ವಿಡಿಯೊಗಳಿಂದಾಗಿ ಸಮಾಜದಲ್ಲಿ ಶಾಂತಿ ಕದಡಿ, ಠಾಣಾ ವ್ಯಾಪ್ತಿಯಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗುವ ಸಂಭವವಿರುತ್ತದೆ, ಜೊತೆಗೆ ಕೋಮು ಸೌಹಾರ್ದತೆಯನ್ನು ಕದಡುವ ದುರುದ್ದೇಶ ಈ ವಾಟ್ಸಪ್‌ ಸಂದೇಶ ಹೊಂದಿದೆ” ಎಂದು ಪೊಲೀಸ್ ಎಫ್‌ಐಆರ್‌ ಆರೋಪಿಸಿದೆ.

ಶನಿವಾರಸಂತೆ ಪೊಲೀಸರು, ಕನ್ನಡ ಪ್ರಭ ಪತ್ರಿಕೆಯ ವರದಿಗಾರ, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್‌ ಮತ್ತು ಸ್ಥಳೀಯ ಬಿಜೆಪಿ ಮುಖಂಡರಾಗಿರುವ ರಘು ಮತ್ತು ಗಿರೀಶ್ ಎನ್ನುವವರ ವಿರುದ್ದ ಎಫ್‌ಐಆರ್‌ ದಾಖಲಿಸಿದ್ದಾರೆ.

ಈ ನಡುವೆ, ‘ಪಾಕಿಸ್ತಾನ್‌ ಝಿಂದಾಬಾದ್‌‌’ ಕೂಗಿದ್ದಾರೆ ಎಂದು ಆರೋಪಿಸಿ ಶನಿವಾರಸಂತೆ ಬಂದ್‌ ಕರೆ ನೀಡಿದ್ದರ ಹಿನ್ನಲೆಯಲ್ಲಿ, ಪೊಲೀಸರು 144 ಸೆಕ್ಷನ್ ಜಾರಿ ಮಾಡಿದ್ದರು. ಆದರೂ, ಸೆಕ್ಷನ್‌ ಉಲ್ಲಂಘಿಸಿ, ಘೋಷಣೆ ಕೂಗುತ್ತಾ ಮೆರವಣಿಗೆ ನಡೆದಿದೆ ಎಂದು ಹೇಳಲಾಗಿದೆ. ಆದರೆ ಪೊಲೀಸರು ಸೆಕ್ಷನ್ ಉಲ್ಲಂಘನೆ ಮಾಡಿದವರ ವಿರುದ್ದ ಇದುವರೆಗೂ ಯಾವುದೆ ಪ್ರಕರಣ ದಾಖಲಿಸಿಲ್ಲ ಎಂದು ಮೂಲವೊಂದು ತಿಳಿಸಿದೆ.

ಇದನ್ನೂ ಓದಿ: ಒಡಿಶಾ: ತನಿಖೆಗೆ ತೆರಳಿದ್ದ ಸಿಬಿಐ ಅಧಿಕಾರಗಳ ಮೇಲೆ ಗ್ರಾಮಸ್ಥರಿಂದ ಹಲ್ಲೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights