ಫ್ಯಾಕ್ಟ್‌ಚೆಕ್ : ಈ ದೃಶ್ಯಗಳು ತಿರುಪತಿ ದೇವಸ್ಥಾನದ ಪುರೋಹಿತನ ಮನೆಯಲ್ಲಿ ಸಿಕ್ಕ ಚಿನ್ನಾಭರಣಗಳ ದೃಶ್ಯಗಳಲ್ಲ! ಹಾಗಿದ್ದರೆ ಈ ದೃಶ್ಯ ಯಾವುದು?
ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಪುರೋಹಿತರೊಬ್ಬರ ಮನೆಗೆ ಆದಾಯ ತೆರಿಗೆ(ಐಟಿ) ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದಾಗ ಸಿಕ್ಕಿರುವ ಹಣ, ಚಿನ್ನದ ಒಡವೆ ಹಾಗೂ ವಜ್ರದ ದೃಶ್ಯಗಳು ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದು ಹರಿದಾಡುತ್ತಿದೆ. ವಿಡಿಯೊದಲ್ಲಿ, ಚಿನ್ನಾಭರಣಗಳನ್ನು ಸಾಲಾಗಿ ಜೋಡಿಸಿಟ್ಟಿರುವುದು ಮತ್ತು ಒಂದಷ್ಟು ಜನರು ಪೊಲೀಸ್ ಯೂನಿಫಾರ್ಮ್‌ನಲ್ಲಿ ಇರುವುದು ಕಾಣಬಹುದಾಗಿದೆ.
“ತಿರುಪತಿ ತಿಮ್ಮಪ್ಪನ ಸೇವೆ ಮಾಡುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಇನ್‌ಕಮ್ ಟ್ಯಾಕ್ಸ್ ವಿಭಾಗದ ಅಧಿಕಾರಿಗಳು ರೈಡ್ ಮಾಡಿದಾಗ ಸಿಕ್ಕಿರುವ ಹಣ, ಚಿನ್ನದ ಒಡವೆ ಹಾಗೂ ವಜ್ರ ಎಷ್ಟು ಗೊತ್ತಾ? 128 ಕೆಜಿ ಚಿನ್ನ , 150 ಕೋಟಿ ಕ್ಯಾಶ್, 70 ಕೋಟಿ ಬೆಲೆಯ ವಜ್ರ” ಎಂದು ವಾಟ್ಸಪ್‌ನಲ್ಲಿ ಸತತವಾಗಿ ವಿಡಿಯೊ ಹರಿದಾಡುತ್ತಿದೆ. ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡುವಂತೆ ಏನ್‌ಸುದ್ದಿ.ಕಾಂಗೆ ಸಂದೇಶಗಳು ಬಂದಿವೆ.

ವಿಡಿಯೊ ಫೇಸ್‌ಬುಕ್‌ನಲ್ಲಿ ಕೂಡಾ ಹರಿದಾಡುತ್ತಿದ್ದು, ನೂರಾರು ಜನರು ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಅಲ್ಲಿ ಕೂಡಾ ವಿಡಿಯೊ ಜೊತೆಗಿನ ಸಂದೇಶವು ವಾಟ್ಸಪ್‌ನಲ್ಲಿ ಹರಿದಾಡುತ್ತಿದ್ದಂತೆ ತಿರುಪತಿ ದೇವಸ್ಥಾನದ ಪುರೋಹಿತರ ಮನೆಯಲ್ಲಿ ಸಿಕ್ಕ ಆಭರಣಗಳು ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ.

ಹಾಗಿದ್ದರೆ ಈ ವೈರಲ್ ಪೋಸ್ಟ್‌ಗಳಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಕೀವರ್ಡ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್ ಮೂಲಕ ಸರ್ಚ್ ಮಾಡಡಿದಾಗ, ತಮಿಳುನಾಡಿನಲ್ಲಿ ನಡೆದ ಚಿನ್ನಾಭರಣಗಳ ಅಂಗಡಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಚಿನ್ನಾಭರಣಗಳ ದೃಶ್ಯಗಳು ಎಂದು ತಮಿಳು ಮಾಧ್ಯಮ ಜಯಾ ಪ್ಲಸ್ ಡಿಸೆಂಬರ್ 22, 2021 ರಂದು ವರದಿ ಮಾಡಿತ್ತು.
ವರದಿಯ ಪ್ರಕಾರ, ತಮಿಳುನಾಡಿನ ವೆಲ್ಲೂರಿನಲ್ಲಿ ಇರುವ ಜೋಸ್ ಅಲುಕ್ಕಾಸ್ ಶೋರೂಂನಿಂದ ಈ ದರೋಡೆ ನಡೆದಿತ್ತು. ಚಿನ್ನಾಭರಣಗಳನ್ನು ದರೋಡೆಕೋರದಿಂದ ಪೊಲೀಸರು ವಶಪಡಿಸಿಕೊಂಡಿರುವ ವಿಡಿಯೊ ಇದಾಗಿದೆ. ಇದನ್ನು ಹಲವಾರು ತಮಿಳು ಸುದ್ದಿ ವೆಬ್‌ಸೈಟ್‌ಗಳು ತಮ್ಮ ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ದರೋಡೆಯ ಘಟನೆಯು ಡಿಸೆಂಬರ್ 14, 2021 ರ ಮಧ್ಯರಾತ್ರಿ ವೆಲ್ಲೂರಿನ ಜೋಸ್ ಅಲುಕ್ಕಾಸ್ ಶೋರೂಮ್‌ನಲ್ಲಿ ನಡೆದಿತ್ತು. 15 ಕೆಜಿ ಚಿನ್ನ ಮತ್ತು ಸುಮಾರು 500 ಗ್ರಾಂ ವಜ್ರಗಳನ್ನು ದರೋಡೆ ಮಾಡಲಾಗಿತ್ತು. ತನಿಖೆಯ ನಂತರ ವೆಲ್ಲೂರು ಪೊಲೀಸರು ವೆಲ್ಲೂರಿನ ಧರೋಡೆಕೋರರಿಂದ ಸ್ಮಶಾನದಲ್ಲಿ ಹೂತಿಟ್ಟಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಜೋಸ್ ಅಲುಕ್ಕಾಸ್ ಶೋರೂಂನಿಂದ ಚಿನ್ನ ಮತ್ತು ವಜ್ರಗಳನ್ನು ದರೋಡೆ ಮಾಡಿದ್ದ ಆರೋಪಿ ಡೀಕಾರಾಮನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಹೀಗಾಗಿ ಈ ವಿಡಿಯೊಗೂ ತಿರುಪತಿ ದೇವಾಲಯಕ್ಕೂ ಯಾವುದೆ ಸಂಬಂಧವಿಲ್ಲ. ಆದರೆ 2016ರಲ್ಲಿ ತಿರುಪತಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿದ್ದ ಜೆ. ಶೇಕರ್ ರೆಡ್ಡಿ ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ₹100 ಕೋಟಿ ನಗದು ಹಾಗೂ 120 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಈ ಐಟಿ ದಾಳಿಗಳ ನಂತರ ಆಂಧ್ರಪ್ರದೇಶ ಸರ್ಕಾರ ಸೇಕರ್ ರೆಡ್ಡಿ ಅವರನ್ನು ಟಿಟಿಡಿ ಸದಸ್ಯತ್ವದಿಂದ ತೆಗೆದುಹಾಕಿತ್ತು.
ಆದರೆ, ಸಾಕ್ಷ್ಯಾಧಾರಗಳ ಕೊರತೆಯ ಆಧಾರದ ಮೇಲೆ 2020 ರ ಸೆಪ್ಟೆಂಬರ್‌ನಲ್ಲಿ ಶೇಕರ್ ರೆಡ್ಡಿ ವಿರುದ್ಧ ಸಿಬಿಐ ದಾಖಲಿಸಿದ ಪ್ರಕರಣವನ್ನು ವಿಶೇಷ ನ್ಯಾಯಾಲಯವು ವಜಾಗೊಳಿಸಿತ್ತು. ಪ್ರಕರಣವನ್ನು ವಜಾ ಮಾಡಿದ ನಂತರ ಶೇಕರ್ ರೆಡ್ಡಿ ಮತ್ತೆ ತಿರುಪತಿ ಆಡಳಿತ ಮಂಡಳಿಗೆ ಸೇರಿದ್ದರು. ಆದಾಗ್ಯೂ, ಆಗಸ್ಟ್ 2021 ರಲ್ಲಿ ರಚಿತವಾದ ಹೊಸ ಮಂಡಳಿಯಲ್ಲಿ ಅವರನ್ನು ಸೇರಿಸಲಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೊಗೂ, ತಿರುಪತಿ ದೇವಸ್ಥಾನಕ್ಕೂ ಯಾವುದೆ ಸಂಬಂಧವಿಲ್ಲ. ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ, ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದ ದರೋಡೆಗೆ ಸಂಬಂಧಪಟ್ಟದ್ದಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾತನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕಾಂಗ್ರೆಸ್ ಸರ್ಕಾರವಿರುವ ರಾಜಸ್ಥಾನದಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲವೆ? ಪೊಲೀಸರಿಗೆ ಹೊಡೆಯುತ್ತಿರುವುದು ಮುಸ್ಲಿಮರೇ?