Rajastan : ಕೋಟಾದಲ್ಲಿ 100 ಕ್ಕೂ ಹೆಚ್ಚು ಮಕ್ಕಳ ಸಾವು – ಮುಖ್ಯಮಂತ್ರಿ ಬೇಜವಾಬ್ದಾರಿ ಹೇಳಿಕೆ..

ರಾಜಸ್ಥಾನದ ಕೋಟಾದಲ್ಲಿ 100 ಕ್ಕೂ ಹೆಚ್ಚು ಮಕ್ಕಳ ಸಾವಿನ ಬಗ್ಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. “ಪ್ರತಿ ವರ್ಷ ಸಾವುಗಳು ಸಂಭವಿಸುತ್ತವೆ, ಜೈಪುರದಲ್ಲಿಯೂ ಸಂಭವಿಸುತ್ತವೆ ಇದರಲ್ಲಿ ಹೊಸತೇನೂ ಇಲ್ಲ” ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ರಾಜಸ್ಥಾನದ ಕೋಟಾದ ಜೆಕೆ ಲೋನ್ ಆಸ್ಪತ್ರೆಯೊಂದರಲ್ಲಿಯೇ ಸುಮಾರು 100ಕ್ಕೂ ಹೆಚ್ಚು ಮಕ್ಕಳು ಕಳೆದ ತಿಂಗಳು ಸಾವನ್ನಪ್ಪಿದ್ದರು. ಈ ಕುರಿತು ರಾಜಸ್ಥಾನದ ಕಾಂಗ್ರೆಸ್ ಇನ್‌ಚಾರ್ಜ್ ಆಗಿರುವ ಅವಿನಾಶ್ ಪಾಂಡೆಯವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ವರದಿ ನೀಡಿದ್ದರು. ಸೋನಿಯಾ ಗಾಂಧಿ ಕೂಡ ಈ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದ್ದರು.

ಆದರೆ ಇದರ ಕುರಿತು ಕ್ರಮ ತೆಗೆದುಕೊಳ್ಳಬೇಕಾದ ಮುಖ್ಯಮಂತ್ರಿಗಳು ಉಡಾಫೆಯ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಆರೋಗ್ಯ ಸಚಿವ ಡಾ.ರಘು ಶರ್ಮಾ ಸೇರಿದಂತೆ ಹಲವರು ಕೋಟಾದಲ್ಲಿ ಮಕ್ಕಳ ಸಾವಿಗೆ ರಾಜ್ಯದ ಆಸ್ಪತ್ರೆಗಳಲ್ಲಿನ ಯಂತ್ರೋಪಕರಣಗಳ ಕೊರತೆ ಮತ್ತು ವೈದ್ಯರ ನಿರ್ಲಕ್ಷ್ಯವನ್ನು ನಿರಾಕರಿಸಿದ್ದಾರೆ.

ರಾಜ್ಯ ಆರೋಗ್ಯ ಸಚಿವ ಡಾ.ರಘು ಶರ್ಮಾ ಅವರು ಟ್ವೀಟ್‌ ಮಾಡಿ “ರಾಜ್ಯದಲ್ಲಿ ಮಕ್ಕಳಿಗಾಗಿ ಮೊದಲ ಐಸಿಯು ಅನ್ನು 2003 ರಲ್ಲಿ ನಮ್ಮ ಸರ್ಕಾರವು ಸ್ಥಾಪಿಸಿತು. ಕೋಟಾದಲ್ಲಿಯೂ ಸಹ, ನಾವು 2011 ರಲ್ಲಿ ಐಸಿಯು ಸ್ಥಾಪಿಸಿದ್ದೇವೆ. ಸರ್ಕಾರ ಈ ಬಗ್ಗೆ ಸೂಕ್ಷ್ಮವಾಗಿದೆ. ಜೆ.ಕೆ.ಲೋನ್ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣಕ್ಕಾಗಿ ಶಿಶುಗಳ ಸಾವಿನ ಈ ವಿಷಯವನ್ನು ರಾಜಕೀಯಗೊಳಿಸಬಾರದು” ಎಂದು ತಿಳಿಸಿದ್ದಾರೆ.

2014 ರಿಂದ 2019ರ ಅವಧಿಯಲ್ಲಿನ ಸಾವುಗಳನ್ನು ಪರಿಶೀಲಿಸಿದರೆ 2019 ರಲ್ಲಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ ತೀರಾ ಕಡಿಮೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. (ಗೆಹ್ಲೋಟ್ ಸರ್ಕಾರವನ್ನು ಡಿಸೆಂಬರ್ 2018 ರಲ್ಲಿ ರಚಿಸಲಾಯಿತು).

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, “ಕೆಲವರು ಕೋಟಾದ ಪರಿಸ್ಥಿತಿಗೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ಅಥವಾ ತಿಳಿಯದೆ ಕಿಡಿಗೇಡಿತನದಲ್ಲಿ ತೊಡಗಿದ್ದಾರೆ. ನಾನು ಇಂದು ಕೇಂದ್ರ ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ ಮತ್ತು 5 ರಿಂದ 6 ವರ್ಷಗಳಲ್ಲಿನ ಸಾವಿನ ಸಂಖ್ಯೆ ನೋಡಿದರೆ 2019 ರಲ್ಲಿ ಕಡಿಮೆ ಸಂಖ್ಯೆಯನ್ನು ಕಂಡಿದ್ದೇನೆ ಎಂದಿದ್ದಾರೆ”

ಮತ್ತೊಂದೆಡೆ, ಕೋಟಾದಲ್ಲಿ ಮಕ್ಕಳ ಸಾವಿನ ಬಗ್ಗೆ ನೈತಿಕ ಆಧಾರದ ಮೇಲೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದೆ. ಮಂಗಳವಾರ, ಬಿಜೆಪಿ ತನ್ನ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿರ್ದೇಶನದ ಮೇರೆಗೆ ತನ್ನ ಸಂಸದರ ಮೂರು ಸದಸ್ಯರ ಸಮಿತಿಯನ್ನು ಕೋಟಾದ ಜೆ.ಕೆ.ಲೋನ್ ಆಸ್ಪತ್ರೆಗೆ ಕಳುಹಿಸಿ ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿತ್ತು. ರಾಜ್ಯಸಭಾ ಸಂಸದ ಕಾಂತಾ ಕರ್ದಂ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಆಸ್ಪತ್ರೆಯಲ್ಲಿ ಸಿಬ್ಬಂದಿ ಮತ್ತು ವೈದ್ಯರ ವರ್ತನೆ ಅತ್ಯಂತ ಕೆಟ್ಟದಾಗಿದೆ” ಎಂದು ಹೇಳಿದ್ದಾರೆ.

ಬಿಜೆಪಿ ಸಂಸದರು ಅಶೋಕ್ ಗೆಹ್ಲೋಟ್ ಸರ್ಕಾರ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಮತ್ತು ವೈದ್ಯಕೀಯ ಸೌಲಭ್ಯಗಳ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದ್ದಾರೆ.

ಅಲ್ಲಿನ ಮಕ್ಕಳ ಪೋಷಕರು ತೀವ್ರತರವಾದ ಸಿಬ್ಬಂದಿ ಕೊರತೆ, ವೈದ್ಯಕೀಯ ಸಲಕರಣೆಗಳ ಕೊರತೆ ಮತ್ತು ವೈದ್ಯರು ಸಮಯೋಚಿತವಾಗಿ ಸ್ಪಂದಿಸದಿರುವುದು, ಸರ್ಕಾರಿ ಆಸ್ಪತ್ರೆಯಲ್ಲಿನ ಕಳಪೆ ಸ್ಥಿತಿಯ ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಆರೊಪಿಸಿದ್ದಾರೆ. ಇಲ್ಲಿ ಶುಚಿತ್ವದ ವಾತವಾರಣವಿಲ್ಲ ಹಾಗಾಗಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಹಲವರು ತಿಳಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಧೃವ್‌ ರಾಠೀ “ನೂರಕ್ಕೂ ಹೆಚ್ಚು ಮಕ್ಕಳು ಸಾವನಪ್ಪಿರುವ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ. ಮುಂದಿನ ಸಲ ಕಾಂಗ್ರೆಸ್‌ ಸರ್ಕಾರವನ್ನು ಜನರು ಕಿತ್ತೊಗೆಯಲಿದ್ದಾರೆ” ಎಂದು ಟ್ವೀಟ್‌ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights