ಕೇರಳ ಚುನಾವಣೆ: LDF & UDFಗೆ ಭರ್ಜರಿ ಗೆಲುವು; ಬಿಜೆಪಿಗೆ ಮುಖಭಂಗ!
ಕೇರಳದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎಡ ಡೆಮಾಕ್ರಟಿಕ್ ಫ್ರಂಟ್ (LDF) ಒಕ್ಕೂಟವು ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ.
945 ಗ್ರಾಮ ಪಂಚಾಯಿತಿ ಸ್ಥಾನಗಳಲ್ಲಿ 520 ಸ್ಥಾನಗಳನ್ನು ಎಲ್ಡಿಎಫ್ ಮತ್ತು 371 ಸ್ಥಾನಗಳನ್ನು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಯುಡಿಎಫ್ ಗೆಲುವು ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್ಡಿಎ 22 ಸ್ಥಾನಗಳಿಗಷ್ಟೇ ಸೀಮಿತವಾಗಿದೆ.
ರಾಜ್ಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, 14 ಜಿಲ್ಲಾ ಪಂಚಾಯಿತಿಗಳಲ್ಲಿ ಎಲ್ಡಿಎಫ್ 10 ಅನ್ನು ಗೆದ್ದಿದೆ ಮತ್ತು 152 ಬ್ಲಾಕ್ ಪಂಚಾಯಿತಿ ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆದ್ದಿದೆ. ನಾಲ್ಕು ಜಿಲ್ಲಾ ಪಂಚಾಯಿತಿಗಳಲ್ಲಿ ಯುಡಿಎಫ್ ಗೆಲುವು ಸಾಧಿಸಿದೆ. ಬಿಜೆಪಿ ಜಿಲ್ಲಾ ಪಂಚಾಯತ್ಗಳಲ್ಲಿ ಅಧಿಕಾರ ಹಿಡಿಯಲು ವಿಫಲವಾಗಿದೆ.
ಅಲ್ಲದೆ, ಪುರಸಭೆಯ 86 ಸ್ಥಾನಗಳ ಪೈಕಿ 45 ಸ್ಥಾನಗಳನ್ನು ಯುಡಿಎಫ್ ಗೆದ್ದಿದೆ ಮತ್ತು ಎಲ್ಡಿಎಫ್ 35 ಸ್ಥಾನಗಳನ್ನು ಗೆದ್ದಿದೆ.
ಕೇರಳ ರಾಜಧಾನಿ ತಿರುವನಂತಪುರಂ ಪಾಲಿಕೆಯ 100 ಸ್ಥಾನಗಳಲ್ಲಿ ಎಲ್ಡಿಎಫ್ 51 ಸ್ಥಾನಗಳನ್ನು ಗೆದ್ದಿದ್ದು, ಪಾಲಿಕೆಯ ಅಧಿಕಾರವನ್ನು ಉಳಿಸಿಕೊಂಡಿದೆ. ಬಿಜೆಪಿ 34 ಸ್ಥಾನಗಳನ್ನು ಗೆದ್ದಿದೆ ಮತ್ತು ಯುಡಿಎಫ್ ಮೂರನೇ ಸ್ಥಾನಕ್ಕೆ ಕುಸಿದೆದೆ. 2015 ಚುನಾವಣೆಗೆ ಹೋಲಿಸಿದರೆ, ಎಲ್ಡಿಎಫ್ ತನ್ನ ಸ್ಥಾನಗಳನ್ನು ಹೆಚ್ಚುಸಿಕೊಳ್ಳುವಲ್ಲಿ ಸಫಲವಾಗಿದೆ. ಅದು 2015ರಲ್ಲಿ 42 ಸ್ಥಾನಗಳನ್ನು ಗೆದ್ದಿತ್ತು.

2015 ರಲ್ಲಿ, ಎಲ್ಡಿಎಫ್ ಹೆಚ್ಚಿನ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿತ್ತು. ಜಿಲ್ಲಾ ಪಂಚಾಯಿತಿಗಳಲ್ಲಿ ಯುಡಿಎಫ್ ಮತ್ತು ಎಲ್ಡಿಎಫ್ ತಲಾ ಏಳು ಸ್ಥಾನದಲ್ಲಿದ್ದವು.
ಕಣ್ಣೂರು ನಿಗಮದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿದಿದ್ದು, ಬಿಜೆಪಿ ಮೈತ್ರಿಕೂಟವು ಗ್ರಾಮ ಪಂಚಾಯಿತಿಗಳು ಮತ್ತು ಪುರಸಭೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ.
941 ಗ್ರಾಮ ಪಂಚಾಯಿತಿಗಳು, 152 ಬ್ಲಾಕ್ ಪಂಚಾಯಿತಿಗಳು, 14 ಜಿಲ್ಲಾ ಪಂಚಾಯಿತಿಗಳು, 86 ಪುರಸಭೆಗಳು ಮತ್ತು ಆರು ನಿಗಮಗಳಲ್ಲಿ ಸ್ಥಾನಕ್ಕಾಗಿ ಈ ತಿಂಗಳ ಆರಂಭದಲ್ಲಿ ಮೂರು ಸುತ್ತುಗಳಲ್ಲಿ ಮತದಾನ ನಡೆದಿತ್ತು.
ಇದನ್ನೂ ಓದಿ: ರೈತ ವಿರೋಧಿ ಶಾಸನಗಳು: ಬಿಜೆಪಿಯ ಹತ್ತು ಸುಳ್ಳುಗಳು!

