FACT CHECK | ಕರಾಚಿಯ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ದಾಳಿ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಪಾಕಿಸ್ತಾನದ ಕರಾಚಿಯ ಮೇಲೆ ಭಾರತ ನಡೆಸಿದ ದಾಳಿಯಿಂದ ಉಂಟಾದ ವಿನಾಶವನ್ನು ತೋರಿಸುವ ದೃಶ್ಯಗಳು ಎಂದು ಹೇಳಿಕೆಯೊಂದಿಗೆ ರಸ್ತೆಯಾದ್ಯಂತ ಅವಶೇಷಗಳು ಚಲ್ಲಾಪಿಪ್ಪಿ ಆಗಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಾಕಿಸ್ತಾನದ ಕರಾಚಿ ಏರ್ಪೋರ್ಟ್’’ ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರ ಇದೇ ವೀಡಿಯೊವನ್ನು ಹಂಚಿಕೊಂಡು, ‘‘ಲಾಹೋರ್‌ನ ಜಿನ್ನಾ ಮಾರುಕಟ್ಟೆ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಕರಾಚಿ ಬಂದರಿನಲ್ಲಿ 12 ಭಾರಿ ಸ್ಫೋಟಗಳು ಸಂಭವಿಸಿವೆ ಮತ್ತು ಹಡಗುಗಳು ಧಗಧಗ’’ ಎಂದು ಬರೆದುಕೊಂಡಿದ್ದಾರೆ.

ಇದೇ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲುಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಫೆಬ್ರವರಿ 1, 2025 ರಂದು ಹಕನ್ ತುಲುಹಾನ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ವೀಡಿಯೊದ ದೀರ್ಘ ಆವೃತ್ತಿ ಲಭ್ಯವಾಗಿದೆ. ಇದಕ್ಕೆ “ಫಿಲಡೆಲ್ಫಿಯಾದಲ್ಲಿ ಅಪಘಾತಕ್ಕೀಡಾದ ವಿಮಾನದ ಕುರಿತು ಹೊಸ ಅಪ್ಡೇಟ್! ಏನು ನಡೆಯುತ್ತಿದೆ?” ಎಂಬ ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊದಲ್ಲಿ 28 ಸೆಕೆಂಡ್​ಗಳ ನಂತರ ವೈರಲ್ ಕ್ಲಿಪ್ ಅನ್ನು ನೋಡಬಹುದು.

The Normal News ಎಂಬ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಫೆಬ್ರವರಿ 1, 2025 ರಂದು ವೈರಲ್ ವೀಡಿಯೊದ ದೀರ್ಘ ಆವೃತ್ತಿಯನ್ನು ಹಂಚಿಕೊಳ್ಳಲಾಗಿದ್ದು, ‘‘ಇಂದು ಸಂಜೆ ಫಿಲಡೆಲ್ಫಿಯಾದಲ್ಲಿ ಲಿಯರ್‌ಜೆಟ್ ವಿಮಾನ ಅಪಘಾತಕ್ಕೀಡಾಗಿ, ಹಲವಾರು ಮನೆಗಳಿಗೆ ಡಿಕ್ಕಿ ಹೊಡೆದಿದೆ. ಈ ವಿಮಾನವು ವೈದ್ಯಕೀಯ ವಿಮಾನವಾಗಿದ್ದು, ರೋಗಿ, ವೈದ್ಯರು ಮತ್ತು ರೋಗಿಯ ಕುಟುಂಬ ಸದಸ್ಯರು ಸೇರಿದಂತೆ ಹಲವಾರು ಜನರನ್ನು ಹೊತ್ತೊಯ್ಯುತ್ತಿತ್ತು. ಇದರಿಂದ ಹೆಚ್ಚುವರಿ ಸಾವುನೋವುಗಳು ವರದಿಯಾಗಿವೆ. ಲಿಯರ್‌ಜೆಟ್‌ನಲ್ಲಿ 6 ಜನರು ಇದ್ದರು ಎಂದು ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ದೃಢಪಡಿಸಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.

ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ, The Economic Times ಫೆಬ್ರವರಿ 1, 2025 ವೈರಲ್ ವೀಡಿಯೊಕ್ಕೆ ಹೋಲುವ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದ್ದು, ಶುಕ್ರವಾರ ರಾತ್ರಿ ಈಶಾನ್ಯ ಫಿಲಡೆಲ್ಫಿಯಾದ ಶಾಪಿಂಗ್ ಸೆಂಟರ್ ಬಳಿ ಆರು ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವೈದ್ಯಕೀಯ ವಿಮಾನವೊಂದು ಪತನಗೊಂಡು, ಯಾರೂ ಬದುಕುಳಿದಿಲ್ಲ ಎಂದು ಹೇಳಿದೆ. ಜೆಟ್ ರೆಸ್ಕ್ಯೂ ಏರ್ ಆಂಬ್ಯುಲೆನ್ಸ್ ನಿರ್ವಹಿಸುವ ಲಿಯರ್‌ಜೆಟ್ 55 ಅನ್ನು ಒಳಗೊಂಡ ಈ ದುರಂತ ಘಟನೆಯು ಜನವರಿ 31, 2025 ರಂದು ಈಶಾನ್ಯ ಫಿಲಡೆಲ್ಫಿಯಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಸಂಭವಿಸಿದೆ. ಈ ದುರಂತ ಘಟನೆಯು ಹಡಗಿನಲ್ಲಿದ್ದ ಆರು ಜನರ ಸಾವಿಗೆ ಕಾರಣವಾಯಿತು ಮತ್ತು ನೆಲದ ಮೇಲೆ ಗಮನಾರ್ಹ ಹಾನಿಯನ್ನುಂಟುಮಾಡಿತು ಎಂಬ ಮಾಹಿತಿ ಇದರಲ್ಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕರಾಚಿಯ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ದಾಳಿಯಿಂದ ಉಂಟಾದ ವಿನಾಶ ಎಂದು ಅಮೆರಿಕದ ಫಿಲಡೆಲ್ಫಿಯಾದಲ್ಲಿ ಸಂಭವಿಸಿದ ಲಿಯರ್‌ಜೆಟ್ ವಿಮಾನ ಅಪಘಾತದ ದೃಶ್ಯವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಋಷಿಕೇಶದಲ್ಲಿ ಬಂಗೀ ಜಂಪಿಂಗ್ ಪ್ಲಾಟ್‌ಫಾರ್ಮ್ ಮುರಿದು ಬೀಳುವ ವಿಡಿಯೋ ಎಂದು AI ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights