ಅಪ್ರಾಪ್ತ ಬಾಲಕಿಯ ಮೇಲೆ ಎರಡು ತಿಂಗಳಿಂದ ನಿರಂತರ ಅತ್ಯಾಚಾರ; ಇಬ್ಬರು ಆರೋಪಿಗಳ ಬಂಧನ
ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕರಿಬ್ಬರು ಕಳೆದ ಎರಡು ತಿಂಗಳುಗಳಿಂದ ನಿರಂತರ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೃತ್ಯ ಎಸಗಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದು, ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಅತ್ಯಾಚಾರ ಎಸಗಿದ್ದ ಆರೋಪಿಗಳನ್ನು ಸಂದೀಪ್ ನಾಯ್ಕ ಹಾಗೂ ವಿಘ್ನೇಶ್ ನಾಯ್ಕ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಬಾಲಕಿಯ ಸಂಬಂಧಿಗಳೇ ಆಗಿದ್ದಾರೆ ಎಂದು ಹೇಳಲಾಗಿದೆ.
ಬಾಲಕಿಯ ತಂದೆ ಹಾಗೂ ತಾಯಿ ದಿನಗೂಲಿ ಕೆಲಸಕ್ಕಾಗಿ ಹೊರ ಹೋಗುತ್ತಿದ್ದರು. ಈ ವೇಳೆ, ಮನೆಯಲ್ಲಿ ಬಾಲಕಿ ಒಬ್ಬಳೇ ಇರುತ್ತಿದ್ದಳು. ಈ ಸಂದರ್ಭದಲ್ಲಿ ಮನೆ ನುಗ್ಗಿದ ಆರೋಪಿಗಳು, ಬಾಲಕಿಯ ತಂದೆ-ತಾಯಿಯನ್ನು ಕೊಲ್ಲುವ ಬೆದರಿಕೆ ಹಾಕಿ, ಎರಡು ತಿಂಗಳಿಂದ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಂದೀಪ್ ನಾಯ್ಕ್ ಎಂಬಾತ ವಿವಾಹಿತ ನಾಗಿದ್ದು, ಪೇಂಟರ್ ಕೆಲಸ ಮಾಡುತ್ತಿದ್ದ, ವಿಘ್ನೇಶ್ ಎಂಬಾತ ಕೂಲಿ ಕೆಲಸ ಮಾಡುತ್ತಿದ್ದ. ಈ ಇಬ್ಬರ ವಿರುದ್ದ ಈ ಹಿಂದೆಯೂ ಹಲವು ಆರೋಪಗಳು ಕೇಳಿ ಬಂದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 12.9k ಬಿಟ್‌ಕಾಯಿನ್‌ಗಳನ್ನು ಕರ್ನಾಟಕದ ರಾಜಕಾರಣಿಗಳು, ಪೊಲೀಸರು ಎನ್‌ಕ್ಯಾಶ್ ಮಾಡಿದ್ದಾರೆ: ಕಾರ್ಯಕರ್ತ