Fake News – ಕೊರೊನಾ ಅಸಲಿಯತ್ತು : ಯಾವುದು ಸತ್ಯ? ಯಾವುದು ಸುಳ್ಳು?

ಕೊರೊನಾ ವೈರಸ್ ವಿಶ್ವದಲ್ಲೇ ಕಪ್ಪು ಕಾರ್ಮೋಡ ಆವರಿಸುವಂತೆ ಮಾಡಿಬಿಟ್ಟಿದೆ. ಜನರಲ್ಲಿ ಆತಂಕದ ಮನೆಯನ್ನೇ ಸೃಷ್ಟಿ ಮಾಡಿಬಿಟ್ಟಿದೆ. ಇದಕ್ಕೆ ಕಾರಣ ದಿನೇ ದಿನೇ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ. ಇದಕ್ಕೆ ಮದ್ದು ಇಲ್ಲದೇ ಇಲ್ಲದೇ ಇರೋದು. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳು. ಇವತ್ತು ಒಂದೇ ದಿನ 12 ಹೊಸ ಕೊರೊನಾ ಪ್ರಕರಣ ದಾಖಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟು 175 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.  ಹಾಗಾದ್ರೆ ಕೊರೊನಾ ಅಸಲಿಯತ್ತು ಏನು..? ಸೋಂಕಿನ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಯಾವವು? ಇವುಗಳಲ್ಲಿ ಯಾವುದು ಅಸಲಿ? ಯಾವುದು ನಕಲಿ? ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಬೆಳ್ಳುಳ್ಳಿ ಕುದಿಸಿದ ನೀರು ಕುಡಿದ್ರೆ ಕೊರೊನಾ ಹೋಗುತ್ತಾ?

ಕೊರೊನಾ ವೈರಸ್ ಸೋಂಕಿನಿಂದ ಗುಣವಾಗಲು ಯಾವುದೇ ಔಷಧಿ ಇಲ್ಲ. ಆದರೆ ಕೆಲವು ಪುಡಾರಿಗಳು ನೀರುಳ್ಳಿ ತಿನ್ನುವುದರಿಂದ ಹಿಡಿದು ಹೆಸರೇ ಕೇಳಿಲ್ಲದ ಅನಧಿಕೃತ ಮತ್ತು ಅಪ್ರಾಮಾಣಿತ ಚಿಕಿತ್ಸೆಗಳ ಬಗ್ಗೆ ಮಾಹಿತಿ ಹರಿಬಿಡುತ್ತಿದ್ದಾರೆ. ಕೆಲ ವೈದ್ಯರಂತೂ ತಮ್ಮಿಂದ ಮಾತ್ರವೇ ಇದನ್ನು ಗುಣಪಡಿಸಲು ಸಾಧ್ಯ ಎಂಬಂತೆ ಭರ್ಜರಿ ಪ್ರಚಾರ ನೀಡುತ್ತಿದ್ದಾರೆ. ವಾಸ್ತವದಲ್ಲಿ ಈ ವೈರಸ್ಸಿಗೆ ಆಗಲೀ ಸಾಮಾನ್ಯ ಶೀತ ಎದುರಾಗಲು ಕಾರಣವಾಗುವ ವೈರಸ್ಸೇ ಆಗಲಿ, ಇದಕ್ಕೆ ಚಿಕಿತ್ಸೆ ಲಭ್ಯವಿಲ್ಲ. ಲಭ್ಯವಿರುವ ಔಷಧಿಗಳೇನಿದ್ದರೂ ಈಗ ಇರುವ ಸೋಂಕನ್ನು ಇನ್ನಷ್ಟು ಉಲ್ಬಣಿಸಲು ಬಿಡದೇ ತಡೆದು ದೇಹದ ರೋಗ ನಿರೋಧಕ ಶಕ್ತಿಯೇ ಈ ವೈರಸ್ಸಿನ ವಿರುದ್ದ ಪ್ರತಿರೋಧ ಶಕ್ತಿಯನ್ನು ಬೆಳೆಸುವಂತೆ ಮಾಡುವುದು.

ಹೀಗಾಗಿ ನಿಯಮಿತವಾಗಿ ಬೆಳ್ಳುಳ್ಳಿಯನ್ನು ಸೇವಿಸಿದಾಗ  ಬೆಳ್ಳುಳ್ಳಿಯ ಬ್ಯಾಕ್ಟೀರಿಯಾ ನಿವಾರಕ ಮತ್ತು ವೈರಸ್ ನಿವಾರಕ ಗುಣಗಳು ರೋಗ ನಿರೋಧಕ ಶಕ್ತಿಯನ್ನು ಅತಿಯಾಗಿ ಬಲಪಡಿಸುತ್ತವೆ ಹಾಗೂ ಹಲವಾರು ಬಗೆಯ ಸೋಂಕುಗಳಿಂದ ರಕ್ಷಣೆ ಒದಗಿಸುತ್ತವೆ ಹೊರತು ಕೊರೊನಾಕ್ಕೆ ಬೆಳ್ಳುಳ್ಳಿಯೇ ಮದ್ದಲ್ಲ.

ಉಪ್ಪು ಬೆರೆಸಿದ ಬಿಸಿ ನೀರು ಸೇವನೆ-

ಉಪ್ಪು ಮಿಶ್ರಿತ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಕರುಳಿನ ಚಲನೆ ಸುಗಮವಾಗಿ ಪಚನ ಶಕ್ತಿ ವೃದ್ಧಿಗೊಳ್ಳುತ್ತದೆ. ಕರುಳಿನ ಒಳಗಿರುವ ಕೆಲವೊಂದು ವಿಷಕಾರಿ ಜಂತುಗಳು ಮತ್ತು ಪರಾವಲಂಬಿ ಜೀವಿಗಳು ಸಹ ಈ ಪ್ರಕ್ರಿಯೆಯಿಂದ ನಾಶವಾಗುತ್ತವೆ. 2010 ರ ಸಂಶೋಧನೆಯ ಫಲವಾದ ” ಜರ್ನಲ್ ಆಫ್ ಆಲ್ಟರ್ನೇಟಿವ್ ಅಂಡ್ ಕಾಂಪ್ಲಿಮೆಂಟರಿ ಮೆಡಿಸಿನ್ ” ನ ಅಧ್ಯಯನದಲ್ಲಿ ಹೇಳಿರುವ ಪ್ರಕಾರ ವ್ಯಾಯಾಮ ಮಾಡುವವರು ಮತ್ತು ಯೋಗ ಮಾಡುವವರಿಗೆ ಉಪ್ಪು ಸೇರಿಸಿದ ಬಿಸಿ ನೀರಿನ ಸೇವನೆ ಬಹಳಷ್ಟು ಸಹಾಯಕ ಎಂದು ತಿಳಿದುಬಂದಿದೆ. ಆದರೆ ಇದು ಕೊರೊನಾ ವಿರುದ್ಧ ಹೋರಾಡುವುದಿಲ್ಲ. ಅದೆಷ್ಟೋ ಜನ ಇದು ಕೊರೊನಾ ವಿರುದ್ಧ ಕೆಲಸ ಮಾಡುತ್ತದೆ ಎನ್ನುವ ಸುಳ್ಳನ್ನು ನಂಬಿದ್ದಾರೆ.

ಚಹಾ ಕುಡಿದ್ರೆ ಸೋಂಕು ತಟ್ಟಲ್ವಾ?

ಚಹಾ ಕುಡಿದ್ರೆ ಸೋಂಕು ತಡೆಯಬಹುದು ಅನ್ನೋದನ್ನ ವೈದ್ಯರೇ ನಿರಾಕರಿಸಿದ್ದಾರೆ. ಶುಂಠಿ ಚಹಾದಲ್ಲಿ ವಿಟಮಿನ್ ‘ ಸಿ ‘, ಪೊಟ್ಯಾಶಿಯಂ, ಮೆಗ್ನೀಷಿಯಂ ಮತ್ತು ಕಬ್ಬಿಣದ ಅಂಶ ಇದೆ. ಶುಂಠಿ ಚಹಾ ಕುಡಿಯುವುದರಿಂದ ಮನುಷ್ಯನ ದೇಹಕ್ಕೆ ಈ ಎಲ್ಲಾ ಅಂಶಗಳು ಸೇರಿ ಅನೇಕ ರೀತಿಯ ಆರೋಗ್ಯ ಪೂರಕವಾದ ಲಾಭಗಳು ಲಭಿಸುತ್ತವೆ. ಆದರೆ ಕೊರೊನಾ ವೈರಸ್ ವಿರುದ್ಧ ಇದು ಹೋರಾಡುವುದಿಲ್ಲ. ಮನುಷ್ಯನಿಗೆ ಬರುವ ಒಂದೊಂದು ಕಾಯಿಲೆಗಳಿಗೂ ಹೇಗೆ ಒಂದೊಂದು ಚಿಕಿತ್ಸೆ ಇದಿಯೋ ಹಾಗೆ ಕೊರೊನಾಗೂ ಚಿಕಿತ್ಸೆ ಬೇರೆದ್ದೇ ಚಿಕಿತ್ಸೆ ನೀಡಬೇಕು. ಕೊರೊನಾ ನಿವಾರಣೆಗೆ ಯಾವುದೇ ಮದ್ದು ಕಂಡು ಹಿಡಿಯಲಾಗಿಲ್ಲ.

ಆಲ್ಕೋಹಾಲ್ ಸ್ಪ್ರೇ :

ಆಲ್ಕೋಹಾಲ್ ಸ್ಪ್ರೇ ಮಾಡಿದ್ರೆ ಕೊರೊನಾ ಮನೆ ಅಥವಾ ನಾವಿರುವ ಸ್ಥಳವನ್ನು ಪ್ರವೇಶ ಮಾಡುವುದಿಲ್ಲ ಎನ್ನುವ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದು ಶುದ್ಧ ಸುಳ್ಳು. ಹೀಗೊಂದು ವಿಚಾರಕ್ಕೆ ಯಾವುದೇ ಅದ್ಯಾಯನಗಳು ಆಗಿಲ್ಲ. ಹಾಗೊಂದು ವೇಳೆ ಆದರೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಇದು ದೃಢಪಟ್ಟಿರಬೇಕು. ಸುಖಾ ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುವುದನ್ನ ನಂಬಬೇಡಿ.

ಕೊರೊನಾದಿಂದ ಇಂಟರ್ ನೆಟ್ ಕಡಿತಗೊಳ್ಳುತ್ತಾ?

ಇದೊಂದು ಸುಳ್ಳು ಸುದ್ದಿ. ಇಂಟರ್ ನೆಟ್ ಗೂ ಕೊರೊನಾಗೂ ಯಾವುದೇ ಸಂಬಂಧವಿಲ್ಲ. ಸದ್ಯ ಇಂಟರ್ ನೆಟ್ ಯಿಂದಲೇ ಅದೆಷ್ಟೋ ವಿಚಾರಗಳು ತಿಳಿಯುತ್ತಿವೆ. ಇದರಿಂದಲೇ ಅತೀ ಹೆಚ್ಚು ಸುಳ್ಳು ಸುದ್ದಿಗಳು ಹುಟ್ಟಿಕೊಳ್ಳುತ್ತಿವೆ. ಹೀಗಾಗಿ ಕೊರೊನಾ ಬಗ್ಗೆ ಹರಡುವ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕೃತ ವೆಬ್ ಪೇಜ್ ಗೆ ಹೋಗಿ ನಿಖರವಾದ ಮಾಹಿತಿಯನ್ನು ಆ ಮೂಲಕ ತಿಳಿಯಿರಿ.

ಒಟ್ಟಿನಲ್ಲಿ ವೇಗವಾಗಿ ಕೊರೊನಾ ಹರಡುವಂತೆ ಜನರಿಗೆ ಅಷ್ಟೇ ವೇಗವಾಗಿ ಕೊರೊನಾ ಬಗೆಗಿನ ಸುಳ್ಳು ಸುದ್ದಿಗಳು ಹರಡುತ್ತಿವೆ. ಇದಕ್ಕೆ ಜನ ಎಚ್ಚೆತ್ತುಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗೆ ವಿಶ್ವ ಆರೋಗ್ಯ ಸಂಸ್ಥೆ ಅಧಿಕ ವೆಬ್ ಸೈಟ್ ನೋಡಿ. ಅಥವಾ ವೈದ್ಯರನ್ನು ಸಂಪರ್ಕಿಸಿ ಗೊಂದಲಗಳನ್ನು ನಿವಾರಿಸಿಕೊಳ್ಳಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights