ಫ್ಯಾಕ್ಟ್‌ಚೆಕ್: ವ್ಯಕ್ತಿಯನ್ನು ಪೊಲೀಸ್‌ ನೆಲಕ್ಕೆ ಹಾಕಿ ತುಳಿಯುತ್ತಿರುವ ದೃಶ್ಯದ ಹಿಂದಿನ ವಾಸ್ತವವೇನು?

ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿಯೂ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕವಾಗಿ ಒದೆಯುತ್ತಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪೊಲೀಸರದು ಅತಿಯಾಗಿದೆ, ಇದು ಪೊಲೀಸ್ ರಾಜ್ಯವಲ್ಲ, ಸಾರ್ವಜನಿಕವಾಗಿ ಹೀಗೆ ಪೊಲೀಸರು ದೌರ್ಜನ್ಯ ಮತ್ತು ಕಿರುಕುಳ ನೀಡಲು ಅವರಿಗೆ ಅಧಿಕಾರ ಕೊಟ್ಟವರು ಯಾರು ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಘಟನೆ ಹಿನ್ನಲೆ ಏನು ? ಹಲ್ಲೆಗೆ ಕಾರಣವಾದರೂ ಏನು ಎಂದು ? ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಗಳನ್ನು ವಾಸ್ತವವಾಗಿ ಪರಿಶೀಲಿಸಿದಾಗ, ಹಿಂದೂಸ್ಥಾನ್ ಟೈಮ್ಸ್‌ ಮಾಡಿದ ವರದಿಯೊಂದು ಲಭ್ಯವಾಗಿದೆ. ವರದಿಯ ಪ್ರಕಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೊಲೀಸ್‌ ದೌರ್ಜನ್ಯದ ವಿಡಿಯೋ ಕ್ಲಿಪ್ ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ ಸಿನಿಮಾದ ಶೂಟಿಂಗ್ ಎಂದು ವರದಿ ಮಾಡಿದೆ.

ಹೊಯ್ಸಳ ಸಿನಿಮಾ ಚಿತ್ರೀಕರಣ ಚೆನ್ನಮ್ಮನ ವೃತ್ತದಲ್ಲಿ ನಡೆದಾಗ, ಪೊಲೀಸ್ ಅಧಿಕಾರಿಯ ಪಾತ್ರಧಾರಿ, ಮತ್ತೋರ್ವ ಪಾತ್ರಧಾರಿಯನ್ನು ತಳ್ಳಿ ಬೂಟುಗಾಲಿನಿಂದ ಒದೆಯುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಚಿತ್ರೀಕರಣ ಸಂದರ್ಭದಲ್ಲಿ ಯಾರೋ ಈ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು, ಇದು ಬೆಳಗಾವಿ ಪೊಲೀಸರ ಕೃತ್ಯವೆಂದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಅದೇ ವಿಡಿಯೊವನ್ನು ಎಲ್ಲರೂ ಹಂಚಿಕೊಂಡಿರುವುದು ಪೊಲೀಸರಿಗೆ ತಲೆನೋವು ತರಿಸಿದೆ. ಈ ಕುರಿತು ಸ್ವತಃ ಪೊಲೀಸ್ ಇಲಾಖೆಯೇ ಸ್ಪಷ್ಟನೆ ನೀಡಿ ಟ್ವಿಟ್‌ಅನ್ನು ಹಂಚಿಕೊಂಡಿದೆ.Image‘ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಹೊಯ್ಸಳ ಸಿನಿಮಾ ಚಿತ್ರೀಕರಣದ ವಿಡಿಯೋ ಕ್ಲಿಪ್ (ಪೊಲೀಸ್ ಅಧಿಕಾರಿ ಒಬ್ಬ ವ್ಯಕ್ತಿಯನ್ನು ಕೆಳಗೆ ತಳ್ಳಿ ಬೂಟುಗಾಲಿನಿಂದ ಒದೆಯುತ್ತಿರುವ ದೃಶ್ಯ) ಅನ್ನು ವೈರಲ್ ಮಾಡಿ, ನೈಜ ಘಟನೆ ಎಂಬಂತೆ ಬಿಂಬಿಸಿ ಪೊಲೀಸ್ ಇಲಾಖೆಯ ಬಗ್ಗೆ ತಪ್ಪು ಸಂದೇಶ ರವಾನಿಸುತ್ತಿದ್ದ ಕಾರಣಕ್ಕೆ ಸ್ಪಷ್ಟನೆ ನೀಡಿರುವ ಪೊಲೀಸ್ ಇಲಾಖೆ ಈ ಬಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳದಂತೆ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್, ಕಾಮೆಂಟ್ಸ್ ಮಾಡದಂತೆ ಸಾರ್ವಜನಿಕರಿಗೆ ಈ ಮೂಲಕ ಕೋರಲಾಗಿದೆ’ .

ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ ಸಿನಿಮಾದ ಶೂಟಿಂಗ್ ಬೆಳಗಾವಿ ಸುತ್ತ ಮುತ್ತ ನಡೆಯುತ್ತಿದೆ. ಧನಂಜಯ್, ರಾಘು ಶಿವಮೊಗ್ಗ, ಅಚ್ಯುತ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಬೆಳಗಾವಿ ಪೊಲೀಸರಿಗೆ ಫಜೀತಿ ತಂದಿಡುವಂತಹ ಕೆಲಸ ನಡೆದಿದೆ. ವಿಡಿಯೋ ನೋಡಿದ ಪ್ರತಿಯೊಬ್ಬರೂ ಬೆಳಗಾವಿ ನಗರ ಪೊಲೀಸ್ ವಿರುದ್ಧ ಕೆಟ್ಟದ್ದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ ತರುವಂತಹ ಚರ್ಚೆಗಳು ಕೂಡ ನಡೆಯುತ್ತಿತ್ತು. ಇದನ್ನು ಗಮನಿಸಿದ ಪೊಲೀಸ್ ಇಲಾಖೆ, ಕೂಡಲೇ ಸಾರ್ವಜನಿಕರ ಗಮನಕ್ಕೆ ಎಂದು ಪತ್ರವೊಂದನ್ನು ಪೋಸ್ಟ್ ಮಾಡಿ, ಸತ್ಯಾಂಶವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾರೆ, ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿದ್ದ ಸಿನಿಮಾವೊಂದರ ಚಿತ್ರೀಕರಣದ ಸಂದರ್ಭದ ಕ್ಲಿಫ್‌ಅನ್ನು ವೈರಲ್ ಮಾಡುವ ಮೂಲಕ ಬೆಳಗಾವಿ ನಗರ ಪೊಲೀಸ್ ವಿರುದ್ಧ ಆರೋಪಗಳು ಬರುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ. ಮತ್ತು ಇದು ಸಿನಿಮಾವೊಂದರ ದೃಶ್ಯಗಳು ಎಂದು ಪೊಲೀಸ್‌ ಇಲಾಖೆ ಸ್ಪಷ್ಟಪಡಿಸಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನಿರ್ಮಲಾ ಸೀತಾರಾಮನ್ ಮಗಳು ಮಿಲಿಟರಿ ಅಧಿಕಾರಿಯೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights