I am Not Your Negro: ಆಳವಾಗಿ ನೆಲೆಯೂರಿರುವ ವರ್ಣಬೇಧವನ್ನು ತೋರಿಸುವ ಸಾಕ್ಷ್ಯಚಿತ್ರ

ಅಮೇರಿಕಾದ ಆಫ್ರೋ-ಅಮೇರಿಕನ್ ಪ್ರಾಯ್ಡ್ ಅವರನ್ನು ಬಿಳಿಯ ಪೊಲೀಸರು ಹತ್ಯೆ ಮಾಡಿದ ಪ್ರಕರಣ ಅಮೇರಿಕಾದಲ್ಲಿ ಇನ್ನು ಜ್ವಲಂತ ವಾಗಿರುವ ವರ್ಣಬೇಧವನ್ನು ಎತ್ತಿತೋರಿಸಿದೆಯಷ್ಟೆ…

ಅಮೇರಿಕಾದ ಈ ವರ್ಣಬೇಧಕ್ಕೆ 400 ವರ್ಷಗಳ ಇತಿಹಾಸವಿದ್ದಂತೆ ಅದರ ವಿರುದ್ಧದ ಬಂಡಾಯಗಳಿಗೂ ಅಷ್ಟೇ ದೀರ್ಘ ಇತಿಹಾಸವಿದೆ.

ಅದರಲ್ಲೂ , 20 ನೇ ಶತಮಾನದಲ್ಲಿ ಅಮೇರಿಕಾದ ಮೂವರು ಮಹಾನ್ ನಾಯಕರಾದ ಮಾರ್ಟಿನ್ ಲೂಥರ್ ಕಿಂಗ್, ಮಡ್ಗರ್ ಇವರೀಸ್ ಹಾಗೂ ಮಾಲ್ಕಮ್ ಎಕ್ಸ್ – ಮೂರೂ ಭಿನ್ನ ದಾರಿಗಳಲ್ಲಿ ಅಮೆರಿಕನ್ ಸಮಾಜದಲ್ಲಿ ಬೇರುಬಿಟ್ಟಿರುವ ರೇಸಿಸಂ ವಿರುದ್ಧ ರಾಜಿರಹಿತ ಸಂಘರ್ಷ ಮಾಡಿದರು.

ಈ ಮೂವರು ನಾಯಕರನ್ನು 1963-68 ರ ನಡುವಿನ ಕೇವಲ ಐದು ವರ್ಷಗಳ ಅವಧಿಯಲ್ಲಿ ಬಿಳಿಯ ಜನಾಂಗೀಯವಾದಿಗಳು ಭೀಕರವಾಗಿ ಕೊಂದುಹಾಕಿದರು.

ಇವರೆಲ್ಲರಿಗೂ ಆತ್ಮೀಯ ಸ್ನೇಹಿತರಾಗಿದ್ದ ಚಿಂತಕ ಜೇಮ್ಸ್ ಬಾಲ್ಡ್ವಿನ್ ಅವರು ತನ್ನ ಈ ಮೂವರು ಸ್ನೇಹಿತರ ಹೋರಾಟ ಹಾಗೂ ಹತ್ಯೆಗಳ ಬಗ್ಗೆ “Remember This House”ಎಂಬ ಪುಸ್ತಕವನ್ನು ಬರೆಯಲು ಹೊರಟಿದ್ದರು. ಆದರೆ 1987ರಲ್ಲಿ ಬಾಲ್ಡ್ವಿನ್ ಅವರು ನಿಧನರಾಗುವ ವೇಳೆಗೆ ಅವರು ಕೇವಲ 30 ಪುಟಗಳನ್ನೂ ಮಾತ್ರ ಬರೆದಿದ್ದರು.

ಈ ಮೂಲ ಬರಹವನ್ನು ಆಧರಿಸಿ 2018 ರಲ್ಲಿ ರಾವಲ್ ಪೆಕ್ ಎಂಬ ನಿರ್ದೇಶಕರು UNREST ಎಂಬ 1.30 ಗಂಟೆಗಳ ಒಂದು ಅತ್ಯುತ್ತಮ ಡಾಕ್ಯುಮೆಂಟರಿಯನ್ನು ನಿರ್ಮಿಸಿದರು. ಅದು I am Not Your Negro ಎಂಬ ಬದಲಾದ ಶೀರ್ಷಿಕೆಯಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ಕೂಡಾ ಲಭ್ಯವಿದೆ.

“I am Not Your Negro” ದ ಒಂದು ಸ್ಕ್ರೀನ್ ಶಾಟ್ ಚಿತ್ರವನ್ನು ಮೇಲೆ ಗಮನಿಸಬಹುದು.

ಅದು 1965 ರಲ್ಲಿ ಅಮೇರಿಕಾದ ಕರಿಯ ಬಾಹುಳ್ಯ ಪ್ರದೇಶವಾದ ಬರ್ಮಿಂಗ್ಹ್ಯಾಮ್ ನಗರದ ಮಾರುಕಟ್ಟೆಯಲ್ಲಿ ಬಿಳಿಯ ಪೊಲೀಸರು ಕರಿಯ ಮಹಿಳೆಯ ಕತ್ತಿನ ಮೇಲೆ ಮೊಣಕಾಲೂರಿ ಉಸಿರುಗಟ್ಟಿಸಿರುವ ಚಿತ್ರ.

ಅದಾಗಿ 55 ವರ್ಷ ಕಳೆದ ನಂತರ ಈಗ ಪ್ರಾಯ್ಡ್ ಅವರನ್ನು ಅದೇ ರೀತಿಯಲ್ಲಿ ಕೊಂದುಹಾಕಲಾಗಿದೆ. ಇದು ಅಮೇರಿಕಾದಲ್ಲಿ ಆಳವಾಗಿ ಬೇರುಬಿಟ್ಟಿರುವ ರೇಸಿಸಂಗೆ ಒಂದು ಚಿತ್ರಸಾಕ್ಷಿಯಾಗಿದೆ.

ಭಾರತದಲ್ಲಿ ವರ್ಣಬೇಧಕ್ಕಿಂತ ಹೀನಾಯವಾದ ಜಾತಿ ವ್ಯವಸ್ಥೆಯು ಹಲವು ರೂಪಾಂತರಗಳೊಂದಿಗೆ ತಾರತಮ್ಯ ಹಾಗೂ ಕ್ರೌರ್ಯಗಳನ್ನು ನಿರಂತರವಾಗಿ ಮುಂದುವರೆಸಿದೆ. ಹಾಗೂ ಜನಾಂಗೀಯವಾದಿಗಳು ಜಾತಿವಾದಿಗಳು ಜಾಗತಿಕವಾಗಿ ಒಂದಾಗಿದ್ದಾರೆ.

ಆದರೆ ಎರಡೂ ಭಿನ್ನಲೋಕದ ದಮನಿತರು ಮಾತ್ರ ಇನ್ನು ಪರಸ್ಪರರ ಹೋರಾಟಗಳಿಗೆ ಬಹುಪಾಲು ಅಪರಿಚಿತರಾಗಿದ್ದೇವೆ.

ಆದರೆ ಅಂಬೇಡ್ಕರ್ ಅವರು 1940-50ರ ದಶಕದಲ್ಲೇ ಅಮೇರಿಕಾದ ಮಹಾನ್ ನಾಗರಿಕ ಹಕ್ಕು ಮತ್ತು ಕರಿಯ ವಿಮೋಚನಾ ಹೋರಾಟಗಾರ ಹಾಗು ಚಿಂತಕ WB ಡುಬಾಯ್ಸ್ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದರು. ಎರಡನೇ ಮಹಾಯುದ್ಧದ ನಂತರದಲ್ಲಿ ರಚಿಸಲಾದ ವಿಶ್ವಸಂಸ್ಥೆಯ ಎದಿರು ಡುಬಾಯ್ಸ್ ಕರಿಯರ ವಿಮೋಚನೆಯ ಮೆಮೊರಾಂಡಮ್ ಒಂದನ್ನು ಮಂಡಿಸುತ್ತಿರುವುದನ್ನು ತಿಳಿದುಕೊಂಡ ಅಂಬೇಡ್ಕರ್, ಆಗಲೇ ಅವರ ಜೊತೆ ಪತ್ರ ವ್ಯವಹಾರವನ್ನು ಮಾಡಿ ಭಾರತದ ದಲಿತರ ಸಮಸ್ಯೆಯನ್ನು ವಿಶ್ವಸಂಸ್ಥೆಯ ಮುಂದಿಡುವ ಪ್ರಯತ್ನಗಳನ್ನು ಮಾಡಿದ್ದರು.

ದಮನಿತರ ಈ ಅಂತರರಾಷ್ಟ್ರೀಯತೆ ಈಗ ಹಿಂದೆಂದಿಗಿಂತಲೂ ಅಗತ್ಯವಿದೆ.

ಈ ಕಾರಣದಿಂದಾಗಿಯೂ ಅಮೇರಿಕವನ್ನು ಅಲುಗಾಡಿಸುತ್ತಿರುವ ಪ್ರಾಯ್ಡ್ ವಿದ್ಯಮಾನವನ್ನು ಭಾರತದ ದಮನಿತರು ಇನ್ನು ಹತ್ತಿರದಿಂದ ಗಮನಿಸುವ ಅಗತ್ಯವಿದೆ.

ಆ ವಿದ್ಯಮಾನವನ್ನು ಇನ್ನು ಆಳವಾಗಿ ಅರ್ಥಮಾಡಿಕೊಳ್ಳಲು “I am Not Your Negro” ಸಹಾಯ ಮಾಡುತ್ತದೆ .

–  ಶಿವಸುಂದರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights