FACT CHECK | ಪಾಕ್ ಸೈನಿಕರು ಹಿಂದೂ ಮಗುವಿಗೆ ಚಿತ್ರಹಿಂಸೆ ನೀಡಿದರೆ?

ಪಾಕಿಸ್ತಾನದ ಸೈನಿಕರು ಹಿಂದೂ ಮಕ್ಕಳಿಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಇದು ಪಾಕಿಸ್ತಾನದ ವಿಡಿಯೋ. ಇಸ್ಲಾಂ ಎಂದರೆ ಹೀಗೆಯೇ. ಇದನ್ನೆ ಕಾಂಗ್ರೆಸ್ ಜಾತ್ಯಾತೀತತೆ ಎಂದು ಹೇಳುತ್ತದೆ. ಇಸ್ಲಾಮಿಕ್ ಮದರಸಾ ಜಿಹಾದ್ ಭಯೋತ್ಪಾದನೆಯು ಬಲೂಚ್ ಹಿಂದೂ ಮಗುವನ್ನು ಸರಪಳಿಯಲ್ಲಿ ಕಟ್ಟಿ ಹೇಗೆ ಚಿತ್ರಹಿಂಸೆ ನೀಡುತ್ತಿದೆ. ಅಂತಹ ಭಾರತವನ್ನು ನಿರ್ಮಿಸಲು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ನ ಮೈತ್ರಿಯು ಹಾತೊರೆಯುತ್ತಿದೆ. ಮೋಸ ಹೋಗಬೇಡಿ. ಎಂಬ ಒಕ್ಕಣೆಯೊಂದಿಗೆಮಗುವಿನ ಕುತ್ತಿಗೆಗೆ ಸರಪಳಿ ಸುತ್ತಿ ನೇತುಹಾಕಲಾಗಿದೆ. ನೋವು ತಾಳಲಾರದೆ ಮಗು ಅಳುತ್ತಿರುವ ದೃಶ್ಯವನ್ನು ಎಕ್ಸ್‌  ನಲ್ಲಿ ಹಂಚಿಕೊಳ್ಳಲಾಗಿದೆ.

ಇದೇ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರು ಬಳಕೆದಾರರು ಹಂಚಿಕೊಂಡಿದ್ದು, “ಪಾಕಿಸ್ತಾನಿ ಸೇನೆಯು ಪಾಕಿಸ್ತಾನಿ ಹಿಂದೂ ಮಕ್ಕಳನ್ನು ಕಬ್ಬಿಣದ ಸರಪಳಿಯಲ್ಲಿ ಕಟ್ಟಿ ಬಿಸಿಲಿನಲ್ಲಿ ನೇತುಹಾಕುವ ಮೂಲಕ ಚಿತ್ರಹಿಂಸೆ ನೀಡುತ್ತಿದೆ ಮತ್ತು ಮಗು ನೋವಿನಿಂದ ಅಳುತ್ತಿದೆ. ಇಸ್ಲಾಮೋಫೋಬಿಯಾ ಬಗ್ಗೆ ಬಾಯಿ ಬಡಿದುಕೊಳ್ಳುವವರು ಇಸ್ಲಾಂ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ಅತಿರೇಕದ ಹಿಂದೂಫೋಬಿಯಾ ಬಗ್ಗೆ ತುಟಿ ಬಿಚ್ಚುವುದಿಲ್ಲ. ಮಗು ಈ ರೀತಿ ಅಳುವುದನ್ನು ನೋಡಿ ನನಗೆ ಕಣ್ಣೀರು ಬರುತ್ತದೆ. ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದ ಆರ್ಕೈವ್ ಲಿಂಕ್‌ಅನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ವಿಡಿಯೋದಲ್ಲಿ ಪ್ರತಿಪಾದಿಸಿದಂತೆ ಪಾಕಿಸ್ತಾನದಲ್ಲಿ ಹಿಂದೂ ಮಗುವನ್ನು ಪಾಕ್‌ ಸೈನಿಕರು ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾದ ವಿಡಿಯೋದ ಅಸಲೀಯತ್ತೇನು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ARY News ಎಂಬ ಸುದ್ದಿತಾಣದಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ.

ARY News  ವರದಿಯ ಪ್ರಕಾರ, ಡಕಾಯಿತರ ಗುಂಪಿನ ಸದಸ್ಯರಾದ ಫರೀದ್ ಮಿರಾನಿ ಮತ್ತು ಯಾಕೂಬ್ ಮಿರಾನಿ ಎಂಬುವವರು, ಅಯಾಜ್ ಪಠಾಣ್ ಎಂಬ ಮುಸ್ಲಿಂ ಮಗುವನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ್ದರು. ಅಪಹರಣದ ಇಪ್ಪತ್ತಾರು ದಿನಗಳ ನಂತರ, ಪೊಲೀಸರು ಅವನನ್ನು ರಕ್ಷಿಸಿದರು ಎಂದು ವರದಿಯಾಗಿದೆ.

ಹಲವು ಸುದ್ದಿವಾಹಿನಿಗಳು ಈ ಘಟನೆಯನ್ನು ವರದಿ ಮಾಡಿವೆ. ಮಗುವಿನ ಹೆಸರನ್ನು ಅಯಾಜ್ ಪಠಾಣ್ ಎಂದು ಗುರುತ್ತಿಸಿದ್ದು.  ಡಕಾಯಿತರಿಂದ ಒತ್ತೆಯಾಳಾಗಿರುವ ಮಗುವನ್ನು ಜೋಪಾನವಾಗಿ ಕರೆತರುವಲ್ಲಿ ಪೊಲೀಸರು ವಿಳಂಬ ಮಡುತ್ತಿದ್ದಾರೆ ಎಂದು ಆರೋಪಿಸಿ ಮಗುವಿನ ಸಂಬಂಧಿಕರು ಪ್ರತಿಭಟನೆ ನಡೆಸಿದರು ಎಂದು ವರದಿಯಾಗಿದೆ.

ಅಯಾಜ್ ಅವರ ತಂದೆ ನೂರುಲ್ಲಾ ಖಾನ್ Independent Urdu  ವಾಹಿನಿಗೆ ತನ್ನ ಮಗುವಿನ ಅಪಹರಣದ ಬಗ್ಗೆ ಮಾಹಿತಿ ನೀಡಿದ್ದು, ಈ ಘಟನೆ ನಡೆದಾಗ, ಅವರು ಮನೆಯೊಳಗೆ ಪ್ರಾರ್ಥನೆ ಮಾಡುತ್ತಿದ್ದರು, ಮಗ ಹೊರಗೆ ಆಟವಾಡುತ್ತಿತ್ತು. ಇದ್ದಕ್ಕಿದ್ದಂತೆ ಇಬ್ಬರು ಶಸ್ತ್ರಧಾರಿ ವ್ಯಕ್ತಿಗಳು ಬಂದು ಮಗನನ್ನು ಅಪಹರಿಸಿದರು. ಸಂಜೆ ಅಪಹರಣಕಾರರು ಆತನಿಗೆ ಕರೆ ಮಾಡಿ, ನಿನ್ನ ಮಗು ಬದುಕಿ ಬರಬೇಕೆನ್ನುವ ಆಸೆ ಇದ್ದರೆ  50 ಲಕ್ಷ ರೂ. ನೀಡಬೇಕು ಎಂದು ಬೇಡಿಕೆ ಇಟ್ಟರು ಎಂದಿದ್ದಾರೆ.

ವರದಿಯ ಪ್ರಕಾರ, ಪೊಲೀಸರು ಏಪ್ರಿಲ್ 14 ರಂದು ಎಫ್‌ಐಆರ್ ದಾಖಲಿಸಿದ್ದಾರೆ. ನೂರುಲ್ಲಾ ಖಾನ್ ಮೂಲತಃ ಕ್ವೆಟ್ಟಾ ಎಂಬ ಊರಿನವರು. ಆದರೆ ಚಳಿಗಾಲದ ಅವಧಿಯಲ್ಲಿ ಅವರು ಆರು ತಿಂಗಳ ಕಾಲ ತಮ್ಮ ಕುಟುಂಬದೊಂದಿಗೆ ಕಂಡ್‌ಕೋಟ್‌ಗೆ ತೆರಳುತ್ತಾರೆ. ಅವರಿಗೆ ಮೂವರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ ಎನ್ನಲಾಗಿದೆ.

ಡಕಾಯಿತರಿಂದ ಪಾರಾದ ಮಗುವಿನೊಂದಿಗೆ ಪೊಲೀಸರು
ಡಕಾಯಿತರಿಂದ ಪಾರಾದ ಮಗುವಿನೊಂದಿಗೆ ಪೊಲೀಸರು

 

 

 

 

 

 

 

 

 

ಇಂಡಿಯಾ ಟುಡೆ ಇದನ್ನು ವರದಿ ಮಾಡಿದ್ದು ಈ ಘಟನೆಯಲ್ಲಿ ಅಪಹರಣಕ್ಕೊಳಗಾದ ಮಗು ಹಿಂದೂ ಅಲ್ಲ ಮುಸ್ಲಿಂ ಎಂದು ಪತ್ತೆ ಮಾಡಿದೆ. ಅದನ್ನು ಡೃಢಪಡಿಸಲು, ಪಾಕಿಸ್ತಾನದ ಕಾಶ್ಮೋರ್ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP), ಬಶೀರ್ ಅಹ್ಮದ್ ಬ್ರೋಹಿ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು ಮಗು ಹಿಂದೂ ಅಲ್ಲ ಎಂದಿದ್ದಾರೆ. ಹಾಗೆಯೇ ಇಸ್ಲಾಮಾಬಾದ್ ಮೂಲದ ಪತ್ರಕರ್ತ ಸಾಜಿದ್ ಮಿರ್ ಕೂಡ ಇದನ್ನು ದೃಢಪಡಿಸಿದ್ದು,“ಈ ಘಟನೆಯಲ್ಲಿ ಅಪಹರಣಕ್ಕೊಳಗಾದ ಮಗು ಮುಸ್ಲಿಂ. ಆತನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.” ಎಂದು ಖಚಿತಪಡಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 5 ವರ್ಷದ ಮಗುವನ್ನು ಪಾಕಿಸ್ತಾನದ ಕಚ್ಚಾ ಡಕಾಯಿತರ ಗ್ಯಾಂಗ್ ಅಪಹರಿಸಿ ಚಿತ್ರಹಿಂಸೆ ನೀಡುತ್ತಿರುವ ಮನಕಲಕುವ ವಿಡಿಯೋವನ್ನು, ಪಾಕ್‌ನ ಸೈನಿಕರು ಹಿಂದೂ ಮಗುವಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಂಬೈ ದಾಳಿಯ ರೂವಾರಿ ಅಜ್ಮಲ್‌ ಕಸಬ್‌ ಪರ ವಾದಿಸಿದ್ದ ವಕೀಲರನ್ನು ಎನ್‌ಸಿಪಿ ಪಕ್ಷವು ಸಂಸದರನ್ನಾಗಿ ಮಾಡಿತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights