JNU ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ ಜಿಲ್ಲೆಗಳಲ್ಲಿ ಪ್ರತಿಭಟನೆ…
JNU ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆದಿದೆ. ಆ ಮೂಲಕ ಜೆಎನ್‌ಯು ವಿದ್ಯಾರ್ಥಿಗಳ ಪರ ನಾವಿದ್ದೇವೆ ಎಂದು ಸಂದೇಶ ಸಾರಿದ್ದಾರೆ.
ಬೆಂಗಳೂರು
SFI, AISF, AIDSO, KVS ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಲಾಯಿತು.
ಸಾಮಾಜಿಕ ಚಿಂತಕರಾದ ಬಿ.ಶ್ರೀಪಾದ್ ಭಟ್ ಮಾತನಾಡಿ “ಈಗಿರುವ ಕೇಂದ್ರ ಸರ್ಕಾರ ಜೆಎನ್‌ಯುವನ್ನು ಇತರ ಸಂಸ್ಥೆಗಳ ರೀತಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಈ ಕಬ್ಜಕ್ಕೆ ಜೆಎನ್‌ಯು ಒಳಗಾಗದೇ ಪ್ರತಿರೋಧಿಸುತ್ತಿದೆ. ಹಾಗಾಗಿ ಜೆಎನ್‌ಯು ನಾಶಕ್ಕೆ ಕೇಂದ್ರ ಮುಂದಾಗಿದೆ ಎಂದರು.
94 ಸಾವಿರ ಕೋಟಿ ಶಿಕ್ಷಣ ಸೆಸ್ ಸಂಗ್ರಹವಾಗಿದೆ. ಸಂಶೋಧನೆ ಮತ್ತು ಅಭಿವೃದ್ದಿಗಾಗಿ ಎಂಟು ಸಾವಿರ ಕೋಟಿ ರೂ ಸಂಗ್ರಹಿಸಲಾಗಿದೆ. ಈ ಹಣವೆಲ್ಲ ಎಲ್ಲಿ ಹೋಯಿತು ಎಂದು ನಾವು ಕೇಂದ್ರ ಸರ್ಕಾರವನ್ನು ಪ್ರಶ್ನಿಸಬೇಕಾಗಿದೆ. ಪ್ರತಿವರ್ಷ ಒಂದು ಸಾವಿರದಷ್ಟು ಸಂಶೋಧನಾ ಪ್ರಬಂಧಗಳು ಜೆಎನ್‌ಯುವಿನಿಂದ ಹೊರಬರುತ್ತವೆ. 8 ಸಾವಿರ ವಿದ್ಯಾರ್ಥಿಗಳು ಅಲ್ಲಿ ಓದುತ್ತಿದ್ದು ವಾರ್ಷಿಕ ಸುಮಾರು 500 ಕೋಟಿಯಷ್ಟೇ ಖರ್ಚಾಗುತ್ತಿದೆ. ಹೀಗಿರುವಾಗ ಒಂದು ವರ್ಷಕ್ಕೆ ತನ್ನ ಪ್ರಚಾರಕ್ಕಾಗಿ 2000 ಸಾವಿರ ಕೋಟಿಗೂ ಅಧಿಕ ಖರ್ಚು ಮಾಡುವ ಕೇಂದ್ರ ಸರ್ಕಾರ ಈ ವಿದ್ಯಾರ್ಥಿಗಳ ಮೇಲೆ ಶುಲ್ಕ ಹೆಚ್ಚಿಸುವುದು ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು.
ಬನಾರಸ್ ವಿ.ವಿಯಲ್ಲಿ ಫಿರೋಜ್ ಖಾನ್ ಎಂಬ ಸಂಸ್ಕೃತ ಶಿಕ್ಷಕ ಪಾಠ ಮಾಡಬಾರದೆಂದು ಪ್ರತಿಭಟನೆ ನಡೆದರೆ ಅದಕ್ಕೆ ಪೊಲೀಸರ ಸರ್ಕಾರದ ಬೆಂಬಲವಿದೆ. ವಿದ್ಯಾರ್ಥಿಗಳು ಯಜ್ಞ ಮಾಡಿ ತೊಂದರೆ ಕೊಡುತ್ತಿದ್ದಾರೆ. ಇದು ಸ್ವತಃ ನರೇಂದ್ರ ಮೋದಿಯವರ ಕ್ಷೇತ್ರವಾಗಿದ್ದು ಅವರು ಸಹ ಬಾಯಿ ಬಿಟ್ಟಿಲ್ಲ. ಆದರೆ ಇಲ್ಲಿ ಜೆಎನ್‌ಯುನಲ್ಲಿ ಪ್ರಜಾತಂತ್ರದ ಉಳಿವಿಗಾಗಿ ವಿದ್ಯಾರ್ಥಿಗಳ ಹೋರಾಟ ನಡೆಸಿದರೆ ಅವರ ಮೇಲೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯುಜಿಸಿ ರದ್ದು ಮಾಡಿ ಆ ಮೂಲಕ ಉನ್ನತ ಶಿಕ್ಷಣಕ್ಕೆ ನೀಡುವ ಅನುದಾನವನ್ನು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಲು ಕೇಂದ್ರ ನಿರ್ಧರಿಸಿದೆ. ಈ ಜೆಎನ್‌ಯು ಶುಲ್ಕ ಹೆಚ್ಚಳದ ಹಿಂದೆಯೂ ಇದೇ ಹುನ್ನಾರವಿದೆ ಎಂದು ಕಿಡಿಕಾರಿದರು.
ಎಸ್‌ಎಫ್‌ಐ ವಿ.ಅಂಬರೀಶ್, ಗುರುರಾಜ ದೇಸಾಯಿ, ಎಐಎಸ್‌ಎಫ್‌ನ ಜ್ಯೋತಿ, ಎಐಡಿಎಸ್‌ಓನ ಅಶ್ವಿನಿ ಕೆ.ಎಸ್, ಅಜಯ್‌ಕಾಮತ್, ಕೆವಿಎಸ್‌ನ ಸರೋವರ್ ಬೆಂಕಿಕೆರೆ, ಗುರುಮೂರ್ತಿ ಮತ್ತಿತರರು ಭಾಗವಹಿಸಿದ್ದರು.
ರಾಯಚೂರು
ಹೊಸ ಶಿಕ್ಷಣ ನೀತಿ ಮತ್ತು ಶಿಕ್ಷಣ ಖಾಸಗಿಕರಣದ ಭಾಗವಾಗಿ JNU ವಿದ್ಯಾರ್ಥಿಗಳ ಶುಲ್ಕ ಹೆಚ್ಚಳವನ್ನು ವಿರೋಧಿಸಿ ರಾಯಚೂರಿನಲ್ಲಿ KVS, SFI ಮತ್ತು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟಿನೆ ನಡೆಯಿತು.
ವಿದ್ಯಾರ್ಥಿಗಳು ಶಾಂತಿಯುತವಾಗಿ ಸಂಸತ್ತಿಗೆ ಪ್ರತಿಭಟನೆ ಮೆರವಣಿಗೆ ಹೋಗುವಾಗ ರಕ್ಷಣೆ ಮಾಡುವಂಥ ಪೋಲೀಸರೇ ಕೇಂದ್ರ ಸರ್ಕಾರದ ಕುಮ್ಮಕ್ಕುನಿಂದ ಜೆಎನ್ಯೂ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಜಲ ಪ್ರಹಾರ ಮಾಡಿರುವ ಕ್ರೌರ್ಯವನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಸಿಂಧನೂರು
JNU ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಆರ್ಥಿಕ ಹಾಗೂ ದೈಹಿಕ ಹಲ್ಲೆ ಖಂಡಿಸಿ ಸಿಂಧನೂರಿನಲ್ಲಿ ಪ್ರತಿಭಟನೆ ನಡೆಯಿತು.
ಸಿಂಧನೂರಿನ ತಾಲ್ಲೂಕು ಕಚೇರಿ ಎದುರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಸಮದ್ ಚೌದ್ರಿ, ನಾಗರಾಜ್ ಪುಜಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ದಾವಣಗೆರೆ
JNU ವಿದ್ಯಾರ್ಥಿ ಗಳ ಮೇಲಿನ ದಾಳಿಯನ್ನು ಖಂಡಿಸಿ ಅವರ ಹೋರಾಟಕ್ಕೆ ಬೆಂಬಲಿಸಿ ಇಂದು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆ ನಡೆಯಿತು. AISF ನ ವೀಣಾ ಮತ್ತು SFI ಮುಖಂಡರು ಹಾಜರಿದ್ದರು
ಕಲಬುರಗಿ
ಕಲಬರುಗಿಯಲ್ಲಿ ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಮೆರವಣಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಚಿಂತಕಿ, ಹೋರಾಟಗಾರ್ತಿ, ಕೆ.ನೀಲಾ, ಕೆವಿಎಸ್‌ನ ರಾಜೇಂದ್ರ ರಾಜವಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.