Look down : ಲಾಕ್‌ಡೌನ್ ಅವಧಿ ಹೆಚ್ಚಾದರೇ ಹಸಿವಿನಿಂದ ಸಾಯುತ್ತಾರೆ – ನಾರಾಯಣ ಮೂರ್ತಿ..
ಕೊರೋನಾ ವಿರುದ್ಧದ ಲಾಕ್‌ಡೌನ್ ಅನ್ನು ಇನ್ನಷಟು ದೀರ್ಘ ಅವಧಿಗೆ ವಿಸ್ತರಣೆ ಮಾಡುವುದಕ್ಕೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೊರೋನಾ ಹರಡುವಿಕೆ ತಡೆಯವ ಉದ್ದೇಶದಿಂದ ಲಾಕ್‌ಡೌನ್ ವಿಸ್ತರಿಸುತ್ತಾ ಹೋದರೇ ಅದರಿಂದ ಬೇರೆ ರೀತಿಯ ಅಪಾಯವನ್ನು ದೇಶ ಎದುರಿಸಬೇಕಾದೀತು ಎಂದು ನಾರಾಯಣ ಮೂರ್ತಿ ಎಚ್ಚರಿಸಿದ್ದಾರೆ.
ಈಗಾಗಲೇ ಲಾಕ್‌ಡೌನ್ ಪರಿಣಾಮ ನೋಡುತ್ತಿದ್ದೇವೆ. ಇದು ಇನ್ನಷ್ಟು ಕಾಲ ಹೀಗೆಯೇ ಮುಂದುವರಿದರೇ ಜನ ಹಸಿವಿನಿಂದ ಸಾಯುವುದನ್ನು ನೋಡಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೊರೋನಾ ವೈರಾಣುವಿನಿಂದ ಹಿರಿಯ ಚೇತನಗಳನ್ನು ರಕ್ಷಿಸುವುದರ ಜೊತೆಗೇ ದುಡಿಯುವ ಕೈಗಳಿಗೆ ಕೆಲಸ ನೀಡಬೇಕಿದೆ. ಕೊರೋನಾದೊಂದಿಗೇ ಬದುಕಲು ಆರಂಭಿಸಬೇಕಿದೆ.
ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೇ ಭಾರತದಲ್ಲಿ ಸೋಂಕಿತರು ಮತ್ತು ಮೃತಪಟ್ಟವರ ಸಂಖ್ಯೆ ತೀರಾ ಕಡಿಮೆ ಇದೆ ಎಂಬುದನ್ನು ಗಮನದಲ್ಲಿಡಬೇಕು ಎಂದು ಅವರು ಹೇಳಿದ್ದಾರೆ. ಕೊರೋನಾಗಿಂತ ಇತರ ಕಾರಣಗಳಿಗೆ ದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ. ಹೀಗಿರುವಾಗ ಕೋರೋನಾ ಸಂಬಂಧಿ ಭೀತಿಯನ್ನು ದೂರ ಮಾಡುವುದು ಒಳಿತು ಎಂದು ಅವರು ಕಿವಿಮಾತು ಹೇಳಿದ್ದಾರೆ.
ದೇಶದಲ್ಲಿ ಸುಮಾರು 19 ಕೋಟಿ ಜನ ನಾನಾ ಉದ್ಯೋಗಗಳಲ್ಲಿದ್ದಾರೆ. ಆದರೆ ಲಾಕ್‌ಡೌನಿನಿಂದಾಗಿ ಇದರಲ್ಲಿ ಹಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದು ಹೀಗೆಯೇ ಮುಂದುವರಿದರೇ ದುಡಿಯುವ ಕೈಗಳು ಮತ್ತಷ್ಟು ಸೊರಗಲಿವೆ ಎಂದಿದ್ದಾರೆ.
ಹಲವಾರು ಉದ್ದಿಮೆಗಳು/ಕೈಗಾರಿಕೆಗಳು ಈವರೆಗಿನ ಲಾಕ್‌ಡೌನಿನಿಂದಾಗಿ 15-20 ಶೇ. ನಷ್ಟ ಅನುಭವಿಸಿವೆ. ಇದರಿಂದಾಗಿ ತೆರಿಗೆ ಆದಾಯವೂ ಕುಗ್ಗಿ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ವೈರಾಣು ದೇಶಕ್ಕೆ ಅದರಲ್ಲಿಯೂ ರಾಜ್ಯಕ್ಕೆ ಕಾಲಿಟ್ಟ ಘಳಿಗೆಯಿಂದ ಐಟಿ ಉದ್ಯೋಗಿಗಳು ಹೆಚ್ಚಿನಂಶ ಮನೆಮುಖಿಗಳಾಗಿದ್ದಾರೆ.ಹೌದು ವೈರಾಣು ಸೋಂಕಿನ ಭೀತಿ ಹಾಗೂ ಅದರ ಹರಡುವಿಕೆ ತಡೆಯಲು ದೇಶಾದ್ಯಂತ ಜಾರಿಯಾಗಿರುವ ಲಾಕ್‌ಡೌನ್ ಪರಿಣಾಮವಾಗಿ ಈಗ ಐಟಿ ಕ್ಷೇತ್ರ ಐಷಾರಾಮಿ ಕಚೇರಿಗಳಿಂದ ಮನೆಯಂಗಳಕ್ಕೆ ಶಿಫ್ಟ್ ಆಗಿದೆ.
ಐಟಿ ಕ್ಷೇತ್ರದ ಆಗುಹೋಗುಗಳನ್ನು ಅಧ್ಯಯನ ಮಾಡುವ ಸಂಸ್ಥೆಗಳ ಅಂದಾಜಿನ ಪ್ರಕಾರ ಈಗ ಸುಮಾರು 10 ಲಕ್ಷ ಮಂದಿ ಐಟಿ ಉದ್ಯೋಗಿಗಳ ಪಾಲಿಗೆ ಮನೆಯೇ ಕಾರ್‍ಯಾಲಯವಾಗಿದೆ.ಇದೇ ಅಂದಾಜಿನ ಪ್ರಕಾರ ಸದ್ಯ ಬೆಂಗಳೂರೂ ಸೇರಿದಂತೆ ರಾಜ್ಯದ ಐಟಿ ವಲಯದಲ್ಲಿ ಹೆಚ್ಚೆಂದರೆ ಸುಮಾರು 40 ಸಾವಿರ ಮಂದಿಯಷ್ಟೇ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.