ಮೋದಿ ಅಂಡ್ ಎ ಬಿಯರ್: ಕಿರುಚಿತ್ರ ಎತ್ತುವ ಹಲವು ಪ್ರಶ್ನೆಗಳು

ಕೆಲವು ದಿನಗಳ ಹಿಂದೆ ಯುಟ್ಯೂಬ್ ನಲ್ಲಿ ‘ಮೋದಿ ಅಂಡ್ ಎ ಬಿಯರ್’ ಎಂಬ ಕಿರುಚಿತ್ರ ಬಿಡುಗಡೆಯಾಗಿತ್ತು. ಧೀನ ಚಂದ್ರ ಮೋಹನ್ ನಿರ್ದೇಶನದ 23 ನಿಮಿಷಗಳ ಈ ಕಿರುಚಿತ್ರ ಅಸಂಪ್ರದಾಯಿಕ ಶೈಲಿಯಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ಕಿರುಚಿತ್ರ ಎತ್ತಿರುವ ಪ್ರಶ್ನೆಗಳು ಬಿರುಸಾಗಿ ಚರ್ಚೆಗೆ ಒಳಗಾಗಿರುವುದು ಕೂಡ ವಿಶೇಷ.

ಹೋಟೆಲ್ ಒಂದರಲ್ಲಿ ಪ್ರೇಮಿಗಳಿಬ್ಬರು ಕೂತು ನಡೆಸುವ ಚಕಮಕಿಯ ಸಂಭಾಷಣೆಯೇ ಚಿತ್ರಕಥೆ. ಈ ಪ್ರೇಮಿಗಳಿಬ್ಬರು ಪರಸ್ಪರ ತಮ್ಮ ಪೂರ್ವಾಗ್ರಹಗಳನ್ನು ಪ್ರಶ್ನಿಸಿಕೊಳ್ಳುವ ಸಂವಾದವೇ ಚಿತ್ರದ ಜೀವಾಳ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಯುವತಿ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಯುವಕ. ಬೀಫ್ ಬಗ್ಗೆ ಪೂರ್ವಾಗ್ರಹಗಳನ್ನು ಕಳಚಿಕೊಳ್ಳದ ಶೃತಿ, ಅರುಣನ ಕುಡಿತದ ಚಟವನ್ನು ಕೊನೆಮಾಡಲು, ಕೊನೆಯ ಬಿಯರ್ ಕೊಡಿಸಿ ಆಣೆ ಮಾಡಿಸಿಕೊಳ್ಳುತ್ತಿದ್ದಾಳೆ. ಅರುಣನ ಆಹಾರ ಪದ್ಧತಿಯನ್ನು ಬದಲಿಸಲೂ ಪ್ರಯತ್ನ ಮಾಡುತ್ತಿದ್ದಾಳೆ. ವಾಟ್ಸ್ ಆಪ್ ನಲ್ಲಿ ಬರುವ ಮೋದಿ ಬಗೆಗಿನ ಒಂದು ಸಂದೇಶದ ಮಾತಿನ ಚಕಮಕಿಯನ್ನು ತೀವ್ರಗೊಳಿಸುತ್ತದೆ. ಶೃತಿ ಸೇರಿದ ಸಮುದಾಯ ಮತ್ತು ಅವರ ಕುಟುಂಬದವರು ಹೇಗೆ ಒಬ್ಬ ವ್ಯಕ್ತಿಯ ಬಗ್ಗೆ ಕುರುಡು ಭಕ್ತಿ ಹೊಂದಿದ್ದಾರೆ ಎಂಬ ಅಂಶ ಆಕೆಗೆ ಕಸಿವಿಸಿ ಉಂಟುಮಾಡುತ್ತದೆ. ಶೃತಿಯಲ್ಲಿರುವ ಜಾತಿ ಪ್ರತಿಷ್ಟೆಯ ಪ್ರಶ್ನೆಗಳು, ಪೂರ್ವಾಗ್ರಹಗಳು, ಮೀಸಲಾತಿಯ ಬಗ್ಗೆ ತಿಳುವಳಿಕೆಯ ಕೊರತೆ ಇವುಗಳ ಜೊತೆಗೆ ಕೊನೆಗೆ ಅರುಣನಲ್ಲಿ ಇರುವ ಪುರುಷ ಅಹಂಕಾರವನ್ನು ಆ ಮಾತಿನ ಚಕಮಕಿ ಹೊರಹಾಕುತ್ತದೆ. ಕೊನೆಗೆ ಅರುಣ್ ಶೃತಿಯನ್ನು ಅವಮಾನ ಮಾಡುವ ಹಂತಕ್ಕೆ ಹೋಗಿ, ಇಬ್ಬರ ಸಂಬಂಧ ಮುರಿದು ಬೀಳುತ್ತದೆ.

‘ಕಾಲ’ ಸಿನೆಮಾ ನಿರ್ದೇಶಕ ಪ ರಂಜಿತ್ ಅರ್ಪಿಸಿರುವ ಈ ಸಿನೆಮಾ ಪೆರಿಯಾರ್ ಅವರ ಒಂದು ಹೇಳಿಕೆಯಿಂದ ಆರಂಭವಾಗುತ್ತದೆ: “ಉಚ್ಚ ಜಾತಿ ಕೆಳ ಜಾತಿಯನ್ನು ಹಾಗು ಜಮೀನ್ದಾರರು ಕೆಲಸಗಾರರನ್ನು ಕಾಣುವುದಕ್ಕಿಂತಲೂ ಹೀನಾಯವಾಗಿ ಪುರುಷ ಮಹಿಳೆಯನ್ನು ನಡೆಸಿಕೊಳ್ಳುತ್ತಾನೆ. ಈ ಹೇಳಿಕೆಯ ಮೂಲಕ ಸ್ತ್ರೀವಾದಿ ನೆಲೆಯಲ್ಲಿ ಕಥೆ ಹೇಳುತ್ತಿರುವುದಾಗಿ ನಿರ್ದೇಶಕ ಚೌಕಟ್ಟನ್ನು ಸೃಷ್ಟಿ ಮಾಡಿಕೊಂಡಿರುವುದು ಸ್ಪಷ್ಟವಾಗುತ್ತದೆ. ಇದಕ್ಕೆ ಆಯ್ಕೆ ಮಾಡಿಕೊಂಡಿರುವ ಪಾತ್ರಗಳ ಸಾಮಾಜಿಕ ಹಿನ್ನಲೆ, ಪ್ರಶ್ನೆಗಳ ತಾತ್ವಿಕತೆಯನ್ನು ಇನ್ನಷ್ಟು ಹರಿತಗೊಳಿಸುತ್ತದೆ.

ಅರುಣ್ ತಂಗಿಗೆ ಇನ್ನೂ ಕೆಳ ಜಾತಿಯ ಹುಡುಗನ ಜೊತೆಗೆ ಮದುವೆ ಮಾಡುವಾಗ ಅವರ ತಂದೆ ತೋರಿಸಿದ ವಿರೋಧ, ಶೃತಿ ತಂದೆ ತನ್ನ ಮದುವೆಗೆ ತೋರಿಸುವ ವಿರೋಧ ಎರಡೂ ಒಂದೆ ಎಂದು ಶೃತಿ ಹೇಳುವ ಮಾತು ಜಾತಿ ಶೋಷಣೆಗೆ ಒಳಗಾಗಿರುವವರಲ್ಲಿಯೂ, ಇರಬಹುದಾದ ಶೋಷಣೆಯ ಅರೆಪ್ರಜ್ಞೆಯ ಪ್ರಶ್ನೆಯನ್ನು ಎತ್ತಿದ್ದರೆ, ಎರಡೂ ಶೋಷಣೆಗಳಲ್ಲಿ ಇರುವ ವ್ಯತ್ಯಾಸವನ್ನು ಶೃತಿ ಅರ್ಥ ಮಾಡಿಕೊಳ್ಳುವುದಕ್ಕೆ ಸೋತಿರುವ ಅಂಶವನ್ನು ಕೂಡ ಇದು ದಾಖಲಿಸುತ್ತದೆ. ಜಾತಿ ದೌರ್ಜನ್ಯಕ್ಕೆ ತಾತ್ವಿಕ ನೆಲಗಟ್ಟನ್ನು ನಂಬಿ ಪ್ರತಿಪಾದಿಸುವ ಸಮುದಾಯ ಹೇಗೆ ಮೀಸಲಾತಿ ವಿರೋಧಿ ಧೋರಣೆ, ಸರ್ವಾಧಿಕಾರ ಧೋರಣೆಯ ವ್ಯಕ್ತಿಯ ಬಗ್ಗೆ ಭಕ್ತಿಯನ್ನು ತನ್ನದಾಗಿಸಿಕೊಂಡಿದೆ ಎಂಬ ಅಂಶವನ್ನು ಪರಿಣಾಮಕಾರಿಯಾಗಿ ಈ ಕಿರುಚಿತ್ರ ಹಿಡಿಯುತ್ತದೆ. ಅದೇ ಸಮಯದಲ್ಲಿ ಶೋಷಣೆ ಮಾಡುವ ಸಮುದಾಯಕ್ಕೆ ಅದನ್ನು ಅರ್ಥ ಮಾಡಿಸಿ ಅವರಿಗೆ ತಿಳುವು ಮೂಡಿಸಿ ಸರಿ ದಾರಿಗೆ ತರಲು ಪ್ರಗತಿಪರ ಎನಿಸಿಕೊಂಡಿರುವವರಿಗೆ ಸಾಧ್ಯವಾಗುತ್ತಿಲ್ಲವೇಕೆ ಎಂಬ ಪ್ರಶ್ನೆಯನ್ನೂ ಕೂಡ ಅದು ಹಿಡಿದಿಡುತ್ತದೆ. ಯುವಕನ ಪಾತ್ರ ಹಿಂದುಳಿದ ಜಾತಿಗೆ ಸೇರಿದ್ದರೂ, ಒಂದು ಮಟ್ಟಕ್ಕೆ ಪ್ರಬಲ ಜಾತಿಗೆ ಸೇರಿದವನಾಗಿರಬಹುದು ಎಂಬ ಸುಳಿವು ಇದೆ. ಅಂದರೆ ಆತನಲ್ಲಿಯೂ ಶೋಷಣೆ-ಶೋಷಿತರ ಸಮಸ್ಯೆಯ ಬಗ್ಗೆಇನ್ನೂ ಸ್ಪಷ್ಟವಾಗಿರದ ಧೋರಣೆ, ಶೃತಿಗೆ ಆಕೆಯ ಸಮಸ್ಯೆಯನ್ನು ತಿಳಿಹೇಳಲು, ಕನ್ವಿನ್ಸ್ ಮಾಡಲು ಸಾಧ್ಯವಾಗುತ್ತಿಲ್ಲವೇ? ಬರೀ ಅಕ್ರೋಶಭರಿತ ಮಾತುಗಳು ಎದುರುವಾದಿಗಳನ್ನು ಸರಿದಾರಿಗೆ ತರಬಲ್ಲವೇ? ಅಥವಾ ಶೃತಿಯ ಪೂರ್ವಾಗ್ರಹಗಳು ಬದಲಾಯಿಸಲಾಗದಷ್ಟು ಜಡವೇ ಎಂಬಂತಹ ಪ್ರಶ್ನೆಗಳು ಮೂಡಿ, ಪ್ರಶ್ನೆಗಳಿಂದಲೇ ಚಿತ್ರ ಕೊನೆಗೊಳ್ಳುತ್ತದೆ.

ಈ ಕಿರುಚಿತ್ರ ಇಂದು ನಮ್ಮ ಎದುರಿಗಿರುವ ಸಮಾಜಕ್ಕೆ ಹಿಡಿದಿರುವ ಕನ್ನಡಿಯಂತೆ ಕಂಡರೆ ಆಶ್ಚರ್ಯವಾಗದು. ಹಲವು ವಿಷಯಗಳಲ್ಲಿ ಪ್ರಗತಿಪರ ಧೋರಣೆಯುಳ್ಳ ಲೇಖಕರು, ಪತ್ರಕರ್ತರು ಮತ್ತು ಕಲಾವಿದರ ವಿರುದ್ಧ 2019 ರಲ್ಲಿ #ಮಿಟೂ ದೌರ್ಜನ್ಯದ ಆರೋಪಗಳು ಕೇಳಿಬಂದವು. ಕೆಲವರು ಕ್ಷಮೆಯನ್ನೂ ಕೇಳದ ಸಮರ್ಥನೆಗೆ ನಿಂತರು. ಆದುದರಿಂದ ಹೆಣ್ಣಿನ ಮೇಲೆ ಆಗುವ ದೌರ್ಜನ್ಯದ ಬಗ್ಗೆ ನಮ್ಮ ಸಮಾಜ ಒಂದು ರೀತಿಯ ಅವಜ್ಞೆಯನ್ನು ತಳೆದಿದೆಯೇ ಎಂಬ ಪ್ರಶ್ನೆಯನ್ನು ಈ ಕಿರುಚಿತ್ರ ಎತ್ತುತ್ತದೆ. ಅಲ್ಲದೆ ಕೋಮು ದ್ವೇಷದ, ಸುಳ್ಳು ಸುದ್ದಿಗಳ, ಜಾತಿ ಪ್ರತಿಷ್ಟೆಯ, ಪ್ರತಿಗಾಮಿ ಸಂಪ್ರದಾಯಿಕತೆಯ ಪ್ರಪೊಗಾಂಡಕ್ಕೆ ಎಷ್ಟೋ ಯುವಕರು ಮಾರುಹೋಗುತ್ತಿರುವ ಇವತ್ತಿನ ದಿನಗಳಲ್ಲಿ, ಅವರಲ್ಲಿ  ನಿಜಾಂಶಗಳನ್ನು, ಸಮುದಾಯಗಳ ಒಳಿತಿನ ಚಿಂತನೆಯನ್ನು, ಶೋಷಣೆಯ ತಪ್ಪನ್ನು, ಮೌಢ್ಯ ವಿರೋಧವನ್ನು, ಬಹುತ್ವದ ಪಾಠಗಳನ್ನು ಬಿತ್ತುವುದಕ್ಕೆ ಸಮಾಜ ಸೋಲುತ್ತಿರುವುದೇಕೆ ಎಂಬ ಪ್ರಶ್ನೆಯನ್ನೂ ಚಿತ್ರ ಅನ್ವೇಶಿಸಲು ಪ್ರಯತ್ನಿಸಿದೆ.

ಇಬ್ಬರೂ ತಮ್ಮ ಪೂರ್ವಾಗ್ರಹಗಳನ್ನು ತಿದ್ದುಕೊಳ್ಳಲು ಸಿದ್ಧರಾಗದೆ ಬೇರೆ ದಾರಿಗಳನ್ನು ಹಿಡಿಯುವ ಅಂತ್ಯ ಮುಂದಿನ ಭೀಕರ ದಿನಗಳನ್ನು ಸೂಚಿಸುತ್ತಿದೆಯೇ? ಅಥವಾ ನಿರ್ದೇಶಕರು ಒಂದು ಸಂದರ್ಶನದಲ್ಲಿ ಹೇಳಿರುವಂತೆ, ಇದನ್ನು ಪೂರ್ಣಾವಧಿಯ ಫಿಲ್ಮ್ ಆಗಿ ನಿರ್ದೇಶಿಸಿ ಇಬ್ಬರಲ್ಲೂ ತಿಳಿವು ಮೂಡಿಸಿ ಒಂದಾಗುವ ಕಥೆ ಮಾಡುವುದಿದೆ ಎಂದಿರುವುದು ಉತ್ತಮ ಭವಿಷ್ಯದ ಕನಸಿಗೆ ಭರವಸೆ ನೀಡುತ್ತಿದೆಯೇ?

ಒಟ್ಟಿನಲ್ಲಿ ಈ ಕಿರುಚಿತ್ರದ ಚೌಕಟ್ಟಿನ ಸೀಮಿತತೆಯಲ್ಲಿ, ಜಾತಿ-ಆಹಾರ ಸಂಸ್ಕೃತಿ-ಮೀಸಲಾತಿ-ರಾಜಕೀಯದ ಬಗ್ಗೆ ಪ್ರತಿಗಾಮಿ ಪೂರ್ವಾಗ್ರಹಗಳಿಂದ ಕೂಡಿದ ಶೃತಿಗೆ ಒಂದು ಹಂತದ ಮೇಲುಗೈ ಕೊಟ್ಟು ಅರುಣ್ ನನ್ನು ಚಿತ್ರಿಸಿರುವುದು ಇವತ್ತಿಗೆ ಬಹಳ ಅಗತ್ಯವಾದ ಸ್ತ್ರೀವಾದದ ದೃಷ್ಟಿಯಿಂದ ಸರಿ ಎನಿಸಿದರೂ, ದಲಿತರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವ, ಬೀಫ್ ಹೆಸರಿನಲ್ಲಿ ಕೊಲೆಗಳಾಗುವ ಸುದ್ದಿಯ ವರದಿಗಳು ಸರಾಸರಿ ದಿನಕ್ಕೊಂದರಂತೆ ಕಾಣಿಸುತ್ತಿರುವ ದೇಶದಲ್ಲಿ ಜಾತಿ ಶೋಷಣೆ ಮತ್ತು ದೌರ್ಜನ್ಯ ಉಪೇಕ್ಷಿಸುವ ಸಂಗತಿಯಂತೂ ಅಲ್ಲ – ಆಕೆಗೂ ಒಂದು ಕಿಟಕಿ ಬೇಕು ಬದಲಾಗುವುದಕ್ಕೆ ಅನ್ನಿಸದೆ ಇರದು.

ಗುರುಪ್ರಸಾದ್

ಪೂರ್ಣ ಚಿತ್ರವನ್ನು ಇಲ್ಲಿ ವೀಕ್ಷಿಸಬಹುದು..


ಇದನ್ನೂ ಓದಿ: ಹಿಂದಿ ಹೇರಿಕೆಯ ವಿರುದ್ಧ ಹೆಚ್‌ಡಿಕೆ ಆಕ್ರೋಶ! ಆಯುಷ್ ಇಲಾಖೆಯ ಕಾರ್ಯದರ್ಶಿ ವಜಾಗೊಳಿಸಲು ಆಗ್ರಹ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights