Ranaji Cricket : ಬರೋಡಾ 85, ಕರ್ನಾಟಕ 165/7 -ಕರ್ನಾಟಕಕ್ಕೆ ಮಹತ್ವದ ಮುನ್ನಡೆ..
ಬೌಲರುಗಳ ಪಾಲಿಗೆ ಚಿನ್ನದ ಗಣಿಯಂತಿದ್ದ ಚಿನ್ನಸ್ವಾಮಿ ಮೈದಾನದ ಸಂಪುರ್ಣ ಲಾಭ ಪಡೆದ ಕರ್ನಾಟಕದ ದಾಳಿಕಾರರು ಮಹತ್ವದ ರಣಜಿ ಪಂದ್ಯದಲ್ಲಿ ಬರೋಡಾ ಮೇಲೆ ಮುಗಿಬೀಳುವ ಮೂಲಕ ಆತಿಥೇಯರು ಮೊದಲ ದಿನವೇ ಮೊದಲ ಸರದಿ ಮುನ್ನಡೆ ಪಡೆಯಲು ನೆರವಾಗಿದ್ದಾರೆ.
ಬುಧವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟ್ ಮಾಡಲು ಬರೋಡಾಕ್ಕೆ ವೀಳ್ಯ ನೀಡಿತು. ಕರ್ನಾಟಕದ ನಿರಂತರ ದಾಳಿಗೆ ನಲುಗಿದ ಬರೋಡಾ ಕೇವಲ 33.5 ಓವರುಗಳಲ್ಲಿ 85 ರನ್ನುಗಳಿಗೆ ಸರ್ವಪತನ ಕಂಡಿತು. ಮಿಥುನ್ ಹಾಗೂ ಗೌತಮ್ ತಲಾ ಮುರು ವಿಕೆಟ್ ಕಿತ್ತರು.
ಕ್ವಾರ್ಟರ್ ಫೈನಲ್ ಹಂತಕ್ಕೇರಲು ಈ ಪಂದ್ಯದಲ್ಲಿ ಕನಿಷ್ಟ ಮುರು ಅಂಕ ಗಳಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿರುವ ಕರ್ನಾಟಕವು ತನ್ನ ಮೊದಲ ಸರದಿಯಲ್ಲಿ ದಿನದಾಟದ ಅಂತ್ಯದ ವೇಳೆಗೆ ತನ್ನ 7 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿ ಒಟ್ಟಾರೆಯಾಗಿ 80 ರನ್ನುಗಳ ಮುನ್ನಡೆ ಸಾಧಿಸಿತು.
ಭಾರೀ ಮೊತ್ತ ಗಳಿಸಿ ಬರೋಡಾ ಮೇಲೆ ತೀವ್ರ ಒತ್ತಡ ಹಾಕುವ ಅವಕಾಶವನ್ನು ಕರ್ನಾಟಕ ಹಾಳು ಮಾಡಿಕೊಂಡಿತು. ನಾಯಕ ಕರುಣ್ ನಾಯರ್ 47, ಸಿದ್ಧಾರ್ಥ್ 29 ಹಾಗೂ ಗೌತಮ್ 27 ರನ್ ಗಳಿಸಿದರೇ ಉಳಿದ ದಾಂಡಿಗರು ವಿಫಲರಾದರು.