ಅಂತಿಮ ವರದಿ ಸಲ್ಲಿಸಲು ಪೊಲೀಸರ ವಿಳಂಬ; ಅಮೂಲ್ಯಗೆ ಜಾಮೀನು

ಪೋಲೀಸರು 90 ದಿನಗಳ ಒಳಗೆ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸದೆ ಇದ್ದುದರಿಂದ, ಮ್ಯಾಜೆಸ್ಟ್ರೆಟ್ ನ್ಯಾಯಾಲಯ ಯುವತಿ ಅಮೂಲ್ಯ ಲಿಯೋನ್ ಅವರಿಗೆೆ ನೆನ್ನೆ ಜಾಮೀನು ಮಂಜೂರು ಮಾಡಿದೆ. ಫೆಬ್ರವರಿಯಲ್ಲಿ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಸಿ ಎ ಎ ವಿರೋಧಿ ಕಾರ್ಯಕ್ರಮವೊಂದರಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಕ್ಕೆ ದೇಶದ್ರೋಹದ ಆರೋಪವನ್ನು ಅಮೂಲ್ಯ ಎದುರಿಸುತ್ತಿದ್ದರು. ಕೆಲವು ದಾಖಲೆಗಳ ಪರಿಶೀಲನೆ ನಂತರ ಅಮೂಲ್ಯ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ನೆನ್ನೆ ಮತ್ತೊಂದು ಕೋರ್ಟ್ ನಲ್ಲಿ ಜಾಮೀನು ವಿಚಾರಣೆಯ ವೇಳೆ ಅಮೂಲ್ಯ ಅವರಿಗೆ ಜಾಮೀನನ್ನು ಸಿವಿಲ್ ಮತ್ತು ಸೆಶನ್ಸ್ ಕೋರ್ಟ್ ನಿರಾಕರಿಸಿತ್ತು.

ಬಿಡುಗಡೆಯಾದರೆ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿ ಜಾಮೀನು ನೀಡಲು ಸಾಧ್ಯವಿಲ್ಲವೆಂದಿದೆ ಕೋರ್ಟ್.

ವಿದ್ಯಾರ್ಥಿಯಾಗಿರುವ 19 ವರ್ಷದ ಅಮೂಲ್ಯ ಅವರಿಗೆ ಜಾಮೀನು ನೀಡಿದರೆ “ಶಾಂತಿ ಕದಡಬಲ್ಲ ಇಂತಹ ಅಪರಾಧಗಳಲ್ಲಿ ಮತ್ತೆ ಭಾಗಿಯಾಗುವ ಸಾಧ್ಯತೆ ಇದೆ” ಎಂದು ಕೂಡ ಕೋರ್ಟ್ ಹೇಳಿದೆ.

ಜಾಮೀನು ಅರ್ಜಿ ತಿರಸ್ಕರಿಸಿದ 60ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವಿದ್ಯಾಧರ್ ಶಿರಹಟ್ಟಿ ಅವರು “ಜಾಮೀನು ನೀಡಿದರೆ ಆಕೆ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ. ಆದುದರಿಂದ ಅರ್ಜಿದಾರರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ” ಎಂದು ಆದೇಶಿಸಿದ್ದಾರೆ.

ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಸಿಎಎ ಮತ್ತು ಎನ್ ಆರ್ ಸಿ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅಮೂಲ್ಯ ಅವರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದಾಕ್ಷಣ ‘ಹಿಂದೂಸ್ತಾನ್ ಜಿಂದಾಬಾದ್’ ಎಂದು ಕೂಗಿದ್ದು ಕೂಡ ವಿಡಿಯೋದಲ್ಲಿ ಕಂಡುಬಂದಿತ್ತು. ಎಲ್ಲಾ ರಾಷ್ಟ್ರಗಳೂ ಒಂದೇ ಎಂದು ಹೇಳುವಷ್ಟರಲ್ಲಿ ಅವರಿಂದ ಮೈಕ್ರೋಫೋನ್ ಕಿತ್ತುಕೊಂಡಿದ್ದು ಕೂಡ ವಿಡಿಯೋದಲ್ಲಿ ಕಂಡುಬಂದಿತ್ತು.

ಲಾಕ್ ಡೌನ್ ನಿಂದಾಗಿ ಬೆಂಗಳೂರು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವುದು ತಡವಾಗಿದ್ದರಿಂದ ಅಮೂಲ್ಯ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರುವುದು ತಡವಾಗಿತ್ತು. ಈಗ 90 ದಿನದ ಅವಧಿ ಮೀರಿ 98ನೆಯ ದಿನ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಈ ಆಧಾರದಲ್ಲಿ ಮ್ಯಾಜೆಸ್ಟ್ರೆಟ್ ನ್ಯಾಯಲಯದಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆಯಲ್ಲಿ ಅಮೂಲ್ಯ ಅವರಿಗೆ ಜಾಮೀನು ದೊರಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights