ಏಪ್ರಿಲ್ 14 ರೊಳಗೆ 2.5 ಲಕ್ಷ ಕೊರೊನ ಸೋಂಕು ಪರೀಕ್ಷೆ ನಡೆಸುವ ಗುರಿ: ರಾಜ್ಯಗಳಿಗೆ ಕೇಂದ್ರ ಸೂಚನೆ
21 ದಿನಗಳ ಲಾಕ್ ಡೌನ್ ಏಪ್ರಿಲ್ 14 ರಂದು ಮುಗಿಯಲಿದ್ದು, ಆ ಸಮಯದೊಳಗೆ ಕನಿಷ್ಠ 2.5 ಲಕ್ಷ ಕೊರೊನ ಸೋಂಕು ಪರೀಕ್ಷೆ ನಡೆಸಲು ಸಹಾಯವಾಗುವಂತೆ ಹೆಚ್ಚೆಚ್ಚು ಪರೀಕ್ಷಾ ಸ್ಯಾಂಪಲ್ ಗಳನ್ನು ಸಂಗ್ರಹಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ.
ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳ ಜೊತೆಗೆ ಕೇಂದ್ರ ಆರೋಗ್ಯ ಸಚಿವ ಸಭೆ ನಡೆಸಿದ್ದು, ಇಲ್ಲಿಯವರೆಗೂ ಭಾರತದಲ್ಲಿ 1 ಲಕ್ಷ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಇದನ್ನು ಏಪ್ರಿಲ್ 14ರ ಹೊತ್ತಿಗೆ 2.5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ ಎಂದು ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರಾಜ್ಯಗಳು ನೀಡಿರುವ ಸಲಹೆಗಳಂತೆ ಏಪ್ರಿಲ್ 14ರ ನಂತರವೂ ಸಂಚಾರ ನಿರ್ಬಂಧಗಳು ಉಳಿಯಲಿವೆ ಎನ್ನಲಾಗಿದೆ ಮತ್ತು ಏಪ್ರಿಲ್ 10 ಕ್ಕೆ ಅಂತಿಮ ನಿರ್ದಾರ ತೆಗೆದುಕೊಳ್ಳಲಾಗುವುದು. ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದ್ದು, ಹೊಸ ಯೋಜನೆಯನ್ನು ತಿಳಿಸುವ ಸಾಧ್ಯತೆ ಇದೆ.
ಇಲ್ಲಿಯವರೆಗೂ ದೇಶದಾದ್ಯಂತ ಆರು ಸಾವಿರಕ್ಕೂ ಹೆಚ್ಚು ಜನ ಕೊರೊನ ಸೋಂಕಿಗೆ ಗುರಿಯಾಗಿದ್ದು, 169 ಜನ ಮೃತಪಟ್ಟಿದ್ದಾರೆ. ದೇಶದಾದ್ಯಂತ ಇನ್ನೂ ಹೆಚ್ಚಿನ ಸೋಂಕು ತಗಲಿದವರು ಇರಬಹುದು ಆದುದರಿಂದ ಇನ್ನೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂಬುದು ಆರೋಗ್ಯ ತಜ್ಞರ ಕೂಗಾಗಿತ್ತು.

