ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆ ಭೇದಿಸಲು ಬಿಜೆಪಿ ಕಾರ್ಯತಂತ್ರ!
ಇಡೀ ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಬಿಟ್ಟು ಬೇರಾವ ರಾಜ್ಯಗಳಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಭದ್ರ ಭುನಾದಿಯನ್ನೇ ಹಾಕಿಕೊಳ್ಳುವ ಮಟ್ಟಕ್ಕೆ ಬಿಜೆಪಿ ಬೆಳೆದಿದೆ. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದ ಪ್ರಮುಖ ಜಿಲ್ಲೆಗಳಾದ ಮೈಸೂರು, ಹಾಸನ, ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿ ಈಗಷ್ಟೇ ಚಿಗುರೊಡೆಯಲು ಆರಂಭಿಸಿದೆ. ಈ ಎರಡೂ ಪಕ್ಷಗಳ ಕೋಟೆಯನ್ನು ಭೇದಿಸಲು ಬಿಜೆಪಿ ಮುಂದಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಹುಟ್ಟೂರಾದ ಕೆ.ಆರ್.ಪೇಟೆಯಲ್ಲಿಯೂ ಬಿಜೆಪಿ ಬೆಳೆಸಲು ಸಾಧ್ಯವಾಗಿರಲಿಲ್ಲ. ಕರ್ನಾಟಕದ ರಾಜಕಾರಣದಲ್ಲೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಹಾಗೂ ಹಾಸನ ಕ್ಷೇತ್ರದಲ್ಲಿ ಬಿಜೆಪಿ ತನ್ನ ಖಾತೆಯನ್ನು ತೆರೆದುಕೊಂಡಿದೆ.
ಒಕ್ಕಲಿಗ ಸಮುದಾಯದವರೇ ಹೆಚ್ಚಾಗಿರುವ ಈ ಜಿಲ್ಲೆಗಳಲ್ಲಿ ಕೈ-ತೆನೆ ಪಕ್ಷಗಳ ಕೋಟೆಯನ್ನು ಭೇದಿಸಿ ಕಮಲಕ್ಕೆ ನೀರೆರೆದು ಬೆಳೆಸುವ ಕಾರ್ಯತಂತ್ರ ಬಿಜೆಪಿ ಪಾಳಯ ರೂಪಿಸುತ್ತಿದೆ. ಈ ಭಾಗದಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ.
ಹಳೇ ಮೈಸೂರು ಭಾಗದ ಕೆಲವು ಜಿಲ್ಲೆಗಳಲ್ಲಿ ಬಿಜೆಪಿ ಬೆಳೆದಿದ್ದರೂ, ಕೊಡಗು ಬಿಟ್ಟಂತೆ ಇನ್ನಾವುದೇ ಜಿಲ್ಲೆಯಲ್ಲಿ ಪ್ರಾಭಲ್ಯ ಹೊಂದಿಲ್ಲ. ಅದಕ್ಕಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕರ್ನಾಟಕ ಬಿಜೆಪಿಯಲ್ಲಿ ಆಯ್ಕೆಗೊಂಡಿರುವ ನೂತನ ಪದಾಧಿಕಾರಿಗಳ ಸಭೆಯಲ್ಲಿ ಹಳೇ ಮೈಸೂರು ಭಾಗದ ಬಗ್ಗೆ ಪ್ರಸ್ತಾಪಿಸಿ ವಿಶೇಷ ಗಮನ ನೀಡುವಂತೆ ಸೂಚಿಸಿದ್ದರು.
ಇದರ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನವೀನ್ ಕುಮಾರ್ ಕಟೀಲ್ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿದ್ದು ಹಳೆ ಮೈಸೂರು ಸೇರಿದಂತೆ ಬಿಜೆಪಿ ಶಕ್ತಿ ಕಡಿಮೆಯಿರುವ ಭಾಗಗಳಲ್ಲಿ ಬಿಜೆಪಿ ಬೆಳೆಸಿ ಪ್ರಾಬಲ್ಯ ಸಾಧಿಸಲು ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಭಾಗದ ಘಟಕವನ್ನು ಮರು ರಚನೆ ಮಾಡಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡುವಂತೆ ಹುರಿದುಂಬಿಸಲು ನಾಯಕರು ಮುಂದಾಗಿದ್ದಾರೆ.
ವಿಧಾನ ಪರಿಷತ್ಗೆ ಎಂಎಲ್ಸಿ ಆಗಿ ಆಯ್ಕೆಯಾಗಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಎಂಎಲ್ಎ ಎಲೆಕ್ಷನ್ನಲ್ಲಿ ಸೋತಿದ್ದ ಸಿ.ಪಿ.ಯೋಗೇಶ್ವರ್ಗೆ ಸರ್ಕಾರದಲ್ಲಿ ಉನ್ನತ ಸ್ಥಾನಕೊಟ್ಟು, ಆ ಮೂಲಕವೂ ಪಕ್ಷವನ್ನು ವಿಸ್ತರಿಸುವ ಹಾಗೂ ಒಕ್ಕಲಿಗ ನಾಯಕರಿಗೂ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಿವ ಮತ್ತು ಮೈತ್ರಿ ಸರ್ಕಾರದ ಪತನಕ್ಕೆ ಮುಂದೆ ನಿಂತಿದ್ದ ವಿಶ್ವನಾಥ್ ಹಾಗೂ ನಾರಾಯಣಗೌಡರನ್ನೂ ಬಳಸಿಕೊಳ್ಳುವ ಸೂತ್ರವನ್ನೂ ಬಿಜೆಪಿ ನಾಯಕರು ಎಣೆದಿದ್ದಾರೆ ಎನ್ನಲಾಗಿದೆ.
ಬಿಜೆಪಿಯು ಲೋಕಸಭಾ ಚುನಾವಣೆಯಲ್ಲಿ 2 ಸ್ಥಾನಗಳನ್ನು ಗೆದ್ದಿದ್ದರೂ ಸಹ, ಬಿಜೆಪಿಗೆ ಪಂಚಾಯತ್ ಅಥವಾ ವಾರ್ಡ್ ಮಟ್ಟದಲ್ಲಿ ಪ್ರಾಭಲ್ಯ ಸಾಧಿಸುವಷ್ಟು ಬೆಂಬಲವಿಲ್ಲ. ಹಾಗಾಗಿ, ಈಗಷ್ಟೇ ಬಿಜೆಪಿಯ ಹಿಂದೂತ್ವ ಮತ್ತು ಅಜೆಂಡಾದೊಂದಿಗೆ ಬೆಸೆದುಕೊಳ್ಳುತ್ತಿರುವ ಒಕ್ಕಲಿಗ ಸಮುದಾಯ ಹಾಗೂ ಯುವಜನರನ್ನು ಮತ್ತಷ್ಟು ಪಕ್ಷದತ್ತ ಸೆಳೆಯುವ ಉದ್ದೇಶದಿಂದಾಗಿ ಈ ಪ್ರದೇಶಗಳಲ್ಲಿ ಬಿಜೆಪಿ ಮುಂದಿನ ದಿನಗಳಲ್ಲಿ ಹೆಚ್ಚು ಒತ್ತು ಕೊಡಲು ಮುಂದಾಗಿದ್ದಾರೆ.
ರಾಜ್ಯ ಸರ್ಕಾರದ ಸಂಪುಣ ವಿಸ್ತರಣೆ ಅಥವಾ ಪುನರ್ರಚನೆಯಾದ ಬಳಿಕ ಹಳೇ ಮೈಸೂರು ಭಾಗಕ್ಕೆ ಬಿಜೆಪಿ ರೂಪಿಸುವ ಕಾರ್ಯತಂತ್ರ ಜಾರಿಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್ ಕಾರ್ಯಕರ್ತೆ ವಿರುದ್ಧ ಅಶ್ಲೀಲ ಕಮೆಂಟ್: 07 ಜನರ ವಿರುದ್ಧ FIR ದಾಖಲು
ಇದನ್ನೂ ಓದಿ: ಕಾಂಗ್ರೆಸ್ ತನ್ನ ಅಸ್ತಿತ್ವಕ್ಕಾಗಿ ಹಿಂದೂತ್ವವನ್ನು ಒಪ್ಪಿಕೊಳ್ಳಬೇಕು: ಆರ್ ಧರ್ಮಸೇನಾ

