ಕೊರೊನಾ ಆತಂಕವನ್ನೂ ಮೀರಿಸಿದ ವಿದ್ಯುತ್‌ ಬಿಲ್‌ : ಬಿಲ್ ಸರಿಯಾಗಿದೆ ಎಂದ ಬೆಸ್ಕಾಂ!

ರಾಜ್ಯದಲ್ಲಿ  ಕೊರೊನಾ ಆರ್ಥಿಕ ಸಂಕಷ್ಟದ ಜೊತೆಗೆ ವಿದ್ಯುತ್ ಬಿಲ್ ನ ಶಾಕ್ ಗ್ರಾಹಕರಿಗೆ ತಟ್ಟಿದ್ದು, ಕರೆಂಟ್ ಬಿಲ್ ಗ್ರಾಹಕರ ಕೈ ಸುಡುತ್ತಿದೆ.

ಲಾಕ್ ಡೌನ್ ನಿಂದಾಗಿ ಬಿಲ್ ಪಾವತಿಯಾಗದೇ ಸದ್ಯ ಒಂದೇ ಬಾರಿ ವಿದ್ಯುತ್ ಬಿಲ್ ನೋಡಿದ ಜನ ಶಾಕ್ ಆಗಿದ್ದಾರೆ. ಎಂದಿಗಿಂತ ವಿದ್ಯುತ್ ಬಿಲ್ ಮೂರು ಪಟ್ಟು ಹೆಚ್ಚಾಗಿದ್ದು, ಜನ ಆಶ್ಚರ್ಯಗೊಂಡಿದ್ದಾರೆ. ಕೆಲವರ ವಿದ್ಯುತ್‌ ಮೀಟರ್‌ಗಳಂತೂ ಆಟೊ ಮೀಟರ್‌ಗಳಂತೆಯೇ ಓಡಿವೆ. ಕೆಲವೆಡೆ ರೀಡಿಂಗ್‌ ಮೀಟರ್‌ನ ಸಾಫ್ಟ್‌ವೇರ್‌ ಅಪ್‌ಡೇಟ್‌ ಆಗದೇ ಗೊಂದಲ ಸೃಷ್ಟಿಯಾಗಿರಬಹುದು ಎನ್ನುವ ಅಭಿಪ್ರಾಯವೂ ಇದೆ. ಲಾಕ್‌ಡೌನ್‌ನಿಂದ ಆದಾಯ, ಸಂಬಳ ಇಲ್ಲದೇ ತತ್ತರಿಸಿರುವ ಜನರ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ.  ಅನೇಕರು ಪತ್ರಿಕಾ ಕಚೇರಿಗಳಿಗೆ ತಮ್ಮ ಬಿಲ್‌ನ ಇಮೇಜ್‌ ಕಳಿಸಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ.  ಹೀಗಾಗಿ ಗ್ರಾಹಕರಿಗೆ ಸಾಕಷ್ಟು ಗೊಂದಲಗಳಿದ್ದು, ಖಜಾನೆ ಭರ್ತಿಗೆ ಹೆಚ್ಚು ಬಿಲ್ ನೀಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಅಷ್ಟಕ್ಕೂ ಆಗಿದ್ದೇನು..?
ಮಾರ್ಚ್-ಏಪ್ರಿಲ್‌ನ ಎರಡು ತಿಂಗಳ ಒಟ್ಟು ಬಿಲ್‌ ಆದರೂ ಅಸಹಜ ಅನ್ನಿಸುವ ಮಟ್ಟಿಗೆ ಏರಿಕೆಯಾಗಿವೆ ಎಂದು ರಾಜ್ಯದ ನಾನಾ ಜಿಲ್ಲೆಗಳಲ್ಲಿ ಜನ ದೂರುತ್ತಿದ್ದಾರೆ.  ಮಾಸಿಕ 300-350 ರೂ. ಸರಾಸರಿ ಶುಲ್ಕ ಕಟ್ಟುತ್ತಿದ್ದ ಬಹುತೇಕ ಗ್ರಾಹಕರು, ಎರಡು ತಿಂಗಳ ಶುಲ್ಕ 600-650 ರೂ. ಬರುತ್ತದೆ ಎಂದು ಭಾವಿಸಿದ್ದರು. ಆದರೆ, ಎರಡು ತಿಂಗಳ ಶುಲ್ಕ ಒಟ್ಟು 1,100ರಿಂದ 1,250 ರೂ. ಬಂದಿದೆ. ಕೆಲವರ ಬಿಲ್‌ ಮೂರು ಪಟ್ಟು ಏರಿಕೆಯಾಗಿದೆ. ಗದಗ ಜಿಲ್ಲೆಯಲ್ಲಿ ಏಪ್ರಿಲ್‌ ತಿಂಗಳು ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆಯದಿದ್ದರೂ, ಕರೆಂಟ್‌ ಬಿಲ್‌ ಮಾತ್ರ 1 ಸಾವಿರದಿಂದ 3,500 ರೂ. ತನಕ ಬಂದಿದೆ. 100-200 ರೂ. ಬರುತ್ತಿದ್ದ ಬಿಲ್‌ ಅಂಗಡಿ ಬಾಗಿಲು ತೆರೆಯದಿದ್ದರೂ ಇಷ್ಟೊಂದು ಏರಿಕೆಯಾಗಿದ್ದು ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ವಿದ್ಯುತ್‌ ಸರಬರಾಜು ಕಂಪನಿ ಹೇಳುವುದೇನು..?

ಇದಕ್ಕೆ ಸ್ಪಷ್ಟೀಕರಣ ನೀಡಿದ ವಿದ್ಯುತ್‌ ಸರಬರಾಜು ಕಂಪನಿ ”ಲಾಕ್‌ಡೌನ್‌ನಿಂದಾಗಿ ಜನ ಮನೆಯಲ್ಲೇ ಉಳಿದಿದ್ದು, ಹೆಚ್ಚು ಕರೆಂಟ್‌ ಬಳಸಿದ್ದಾರೆ. ವಾಸ್ತವ ಒಪ್ಪಿಕೊಳ್ಳಲು ಕೆಲವರಿಗೆ ಕಷ್ಟವಾಗುತ್ತಿದೆ,” ಎಂದಿದೆ.

”ಸ್ಪ್ಯಾಬ್‌ಗಳ ಬಗ್ಗೆ ಗೊಂದಲ ಬೇಡ. ಉದಾಹರಣೆಗೆ ಗೃಹ ಬಳಕೆಯಲ್ಲಿ ಸಾಮಾನ್ಯವಾಗಿ ಪ್ರತಿ ತಿಂಗಳಿನ ಮೊದಲ 30 ಯೂನಿಟ್‌ಗಳಿಗೆ 1 ಸ್ಪ್ಯಾಬ್‌ ದರ ಅನ್ವಯವಾದರೆ, ಮೇ ತಿಂಗಳಿನಲ್ಲಿ ನೀಡುವ ಎರಡು ತಿಂಗಳ ಬಿಲ್‌ನಲ್ಲಿ 30 ಯೂನಿಟ್‌ಗಳ ಬದಲಾಗಿ ಒಟ್ಟು 60 ಯುನಿಟ್‌ಗಳಿಗೆ ಮೊದಲ ಸ್ಪ್ಯಾಬ್‌ ದರ ಅನ್ವಯವಾಗುತ್ತದೆ. ಅದರಂತೆಯೇ ಉಳಿದ ರೇಟ್‌ ಸ್ಪ್ಯಾಬ್‌ಗಳೂ 2ನೇ ಸ್ಪ್ಯಾಬ್‌ 70 ಯೂನಿಟ್‌ ಬದಲಾಗಿ 140, 3ನೇ ಸ್ಪ್ಯಾಬ್‌ 100 ಯೂನಿಟ್‌ ಬದಲಾಗಿ 200 ಯೂನಿಟ್‌ ಎರಡು ತಿಂಗಳಿನ ಲೆಕ್ಕದಲ್ಲಿಯೇ ಅನ್ವಯವಾಗುವುದರಿಂದ ಗ್ರಾಹಕರಿಗೆ ಯಾವುದೇ ತರಹದ ನಷ್ಟವಾಗುವುದಿಲ್ಲ,” ಎಂದು ಬೆಸ್ಕಾಂ ವಿವರಣೆ ನೀಡುತ್ತಿದೆ.

ಒಟ್ಟಿನಲ್ಲಿ ಗ್ರಾಹಕರು ಬೆಸ್ಕಾಂ ನೀಡುವ ಸಮಜಾಯಿಸಿಯನ್ನು ಒಪ್ಪಿಕೊಳ್ಳಲೂ ಆಗದೇ ಬಿಡಲೂ ಆಗದೇ ಸಕಾಷ್ಟು ಗೊಂದಲಕ್ಕೊಳಗಾಗಿದ್ದಾರೆ. ಈ ರೀತಿ ವಿದ್ಯುತ್ ಬಿಲ್ ಏರಿಕೆಯಾಗುವ ಕಲ್ಪನೆಯೂ ಇರದ ಜನ ಸದ್ಯ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights