ಹತ್ತಾರು ದಿನಗಳ ನಂತರ ಪತ್ರಿಕೆ ಓದಿ “ದೇಶ ಉಳೀಬೇಕಪ್ಪಾ” ಎಂದ ಎಚ್.ಎಸ್. ದೊರೆಸ್ವಾಮಿ!
ಕೊರೊನಾ ಮಣಿಸಿದ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹತ್ತಾರು ದಿನಗಳ ನಂತರ ಪತ್ರಿಕೆ ಓದುವಷ್ಟು ಚೇತರಿಸಿಕೊಂಡಿದ್ದಾರೆ. ಮಾತ್ರವಲ್ಲದೇ ದೇಶ ಉಳೀಬೇಕಪ್ಪಾ ಎನ್ನುತ್ತಿದ್ದಾರೆ.
ಮೂರು ದಿನದ ಹಿಂದಿನ ತನಕ ಅವರ ಪರಿಸ್ಥಿತಿ ಕೆಟ್ಟದಾಗಿತ್ತು. ಆದರೆ ಡಾ.ಸಿ.ಎನ್.ಮಂಜುನಾಥ್’ರವರು ಮುತುವರ್ಜಿ ವಹಿಸಿ ಕೆಲವು ಪರಿಣಿತ ವೈದ್ಯರು ಬಂದು ಸೂಕ್ತ ಚಿಕಿತ್ಸೆ ಮಾಡಿದ ಕಾರಣ ದೊರೆಸ್ವಾಮಿಯವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ನೆನ್ನೆಯಿಂದ ಕೆಮ್ಮು ಸಹ ತಹಬಂದಿಗೆ ಬಂದಿದೆ. ಮನಸ್ಸು ಮತ್ತು ದೇಹಕ್ಕೆ ಒಂದಷ್ಟು ಚೈತನ್ಯ ಬಂದಿದೆ. ನೆನ್ನೆಯಿಂದ ಎಂದಿನಂತೆ ದೇಶದ ಬಗ್ಗೆ ಮಾತನಾಡುತ್ತಿದ್ದಾರೆ.
ನೆನ್ನೆ ರವಿ ಕಷ್ಣಾರೆಡ್ಡಿ ಹೋದ ತಕ್ಷಣ ಅವರ ಬಳಿ ಕುಳ್ಳಿರಿಸಿಕೊಂಡು “ಈಗ ಯಾರೂ ವೈಯಕ್ತಿಕವಾಗಿ ಕೆಲಸ ಮಾಡಬಾರದು. ಎಲ್ಲರೂ ಸಂಘಟಿತವಾಗಿ, ಒಗ್ಗಟ್ಟಾಗಿ ಕೆಲಸ ಮಾಡಿ ದೇಶ ಉಳಿಸಿಕೊಳ್ಳಬೇಕು. ಯಾರೂ ಸ್ವಾರ್ಥವನ್ನು ನೋಡಬಾರದು” ಎಂದು ಹೇಳಿದರು. B H Sureshರವರು ಬಂದಾಗ ಅವರಿಗೂ ಅದನ್ನೇ ಹೇಳಿದರು.
ಸುಂದರ್‌ಲಾಲ್ ಬಹುಗುಣ, ಕೆ.ಆರ್ ಪೇಟೆ ಕೃಷ್ಣ, ಬಾಬಾಗೌಡ ಪಾಟೀಲರ ನಿಧನದ ಕುರಿತು ಮಾತನಾಡಿದರು. ಅವರೆಲ್ಲರನ್ನೂ ನೆನಪಿಸಿಕೊಂಡು ದುಃಖ ಪಟ್ಟಿದ್ದಾರೆ. ಜನರಿಗೆ ವ್ಯಾಕ್ಸಿನ್ ಲಭ್ಯತೆ ಕುರಿತು ಕೇಳಿದರು.
ರವಿ ಕಷ್ಣಾರೆಡ್ಡಿ ಮನೆಯಿಂದ ತಂದಿದ್ದ ರವೆ ಇಡ್ಲಿಯಲ್ಲಿ ಅರ್ಧ ಇಡ್ಲಿ ಮಾತ್ರ ತಿಂದರು. ಸ್ವಲ್ಪ ಹಾಲು ಕುಡಿದರು. ದೇಶದ ಪ್ರಸಕ್ತ ಪರಿಸ್ಥಿತಿಯ ಕುರಿತು ರವಿ ಕಷ್ಣಾರೆಡ್ಡಿ ನೋವು/ತಮಾಷೆಯ ಒಂದು ಕತೆ ಹೇಳಿದರು. ಅದನ್ನ ಕೇಳಿ ಅವರು ಆಯಾಸ ಆಗುವಷ್ಟು ನಕ್ಕರು. (ವೈದ್ಯನೊಬ್ಬ ತನ್ನ ಕಾರನ್ನು ಮೆಕ್ಯಾನಿಕ್ ಬಳಿ ರಿಪೇರಿಗೆ ಬಿಟ್ಟಿರುತ್ತಾನೆ. ಅದನ್ನು ಬಿಚ್ಚಿ ಸರಿ ಮಾಡುತ್ತಿರುವಾಗ ಮೆಕ್ಯಾನಿಕ್ ಸ್ವಲ್ಪ ಅಹಂಕಾರದಿಂದ ವೈದ್ಯನಿಗೆ “ನೋಡಿ ಡಾಕ್ಟ್ರೇ, ನಾನು ಹೇಗೆ ಎಲ್ಲವನ್ನೂ ಬಿಚ್ಚಿ ಮತ್ತೆ ಜೋಡಿಸಿ ಸರಿ ಮಾಡ್ತಿದ್ದೀನಿ. ನಿಮ್ಮ ಕೈಲಿ ಆಗುತ್ತಾ?” ಎನ್ನುತ್ತಾನೆ. ಅದಕ್ಕೆ ವೈದ್ಯ ತುಂಬಾ ತಣ್ಣಗೆ “ಗಾಡಿಯ ಇಂಜಿನ್ ಆನ್ ಮಾಡಿಕೊಂಡು ರಿಪೇರಿ ಮಾಡೋದಿಕ್ಕೆ ಆಗುತ್ತೇನಪ್ಪಾ ನಿನ್ನ ಕೈಲಿ?” ಎನ್ನುತ್ತಾನೆ. ಈಗ ದೇಶದ ಪರಿಸ್ಥಿತಿಯೂ ಹಾಗೆಯೇ ಇದೆ. ಇದನ್ನು ಬದುಕಿಸಿಕೊಂಡೆ ಉಳಿಸಿಕೊಳ್ಳಬೇಕು ಎಂದೆ. ಈ ಕಟುವಾಸ್ತವದ ಜೋಕನ್ನು ಹೇಳಿದಾಗ ಬಾಯಿ ತುಂಬಾ ನಕ್ಕರು.)
ಈಗ ಸ್ವಲ್ಪ ಬೇಸರದಲ್ಲಿ ಕನವರಿಸುತ್ತಾ ನಿದ್ದೆ ಮಾಡಲು ಪ್ರಯತ್ನಿಸುತ್ತಿದ್ದಾರೆ ದೊಡ್ಡ ಚೇತನ.

