ದೇಶದಲ್ಲಿ ಮುಂದುವರೆದ ಕೋವಿಡ್-19 ಕರಿ ನೆರಳು : 10 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಭಾರತದಲ್ಲಿ ದಿನದಿಂದ ದಿನಕ್ಕೆ ಮಾರಕ ಕೋವಿಡ್​​-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 50 ಮಂದಿ ಈ ಕೊರೋನಾಗೆ ಬಲಿಯಾಗಿದ್ದಾರೆ. ಜತೆಗೆ ಸುಮಾರು 796 ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಮೃತರ ಸಂಖ್ಯೆ 324 ಮತ್ತು ಸೋಂಕಿತರ ಸಂಖ್ಯೆ 10000ರ ಗಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಭಾರದಲ್ಲಿ ದೇಶವ್ಯಾಪಿ ಲಾಕ್‌ಡೌನ್ ಆರಂಭದ ದಿನ 498ರಷ್ಟಿದ್ದ ಕೊರೋನ ಸೋಂಕಿತರ ಸಂಖ್ಯೆ ಮುಂದಿನ 20 ದಿನಗಳಲ್ಲಿ 10 ಸಾವಿರಕ್ಕೇರಿದೆ. ಅಂದರೆ 20 ದಿನಗಳಲ್ಲಿ ವೈರಸ್ ಸೋಂಕಿತರ ಸಂಖ್ಯೆ 20 ಪಟ್ಟು ಹೆಚ್ಚಿದಂತಾಗಿದೆ. ಈ ಅವಧಿಯಲ್ಲಿ ಸಾಮಾಜಿಕ ಅಂತರ ಕಾಪಾಡಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿದ್ದರೂ, ಅಂಕಿಅಂಶಗಳಲ್ಲಿ ಆಶಾಕಿರಣವೂ ಇದೆ.

ವಿಶ್ವಾದ್ಯಂತ ಸೋಂಕಿತರಲ್ಲಿ 22ನೇ ದೇಶವಾಗಿ ಭಾರತ ದಾಖಲಾಗಿದೆ. ಪ್ರತಿ 10 ಲಕ್ಷ ಮಂದಿಯ ಪೈಕಿ ಏಳು ಮಂದಿಗಷ್ಟೇ ಸೋಂಕು ತಗುಲಿದೆ. ಆದರೆ ಭಾರತದಲ್ಲಿ ಕೊರೋನ ವೈರಸ್ ಪರೀಕ್ಷೆ ಕೂಡಾ ತೀರಾ ಕಡಿಮೆ ಇದೆ. ಪ್ರತಿ 10 ಲಕ್ಷ ಮಂದಿಯ ಪೈಕಿ 137 ಮಂದಿಗಷ್ಟೇ ಪರೀಕ್ಷೆ ಮಾಡಲಾಗಿದೆ.

ಫ್ರಾನ್ಸ್​, ಜರ್ಮನಿ ಕೂಡ ಈ ವೈರಸ್​ಗೆ ನಲುಗಿವೆ. ಫ್ರಾನ್ಸ್​ನಲ್ಲಿ 13.67 ಲಕ್ಷ ಮಂದಿ ಕೊರೋನಾ ಸೋಂಕಿತರಿದ್ದಾರೆ. 14 ಸಾವಿರ ಮಂದಿ ಕೊರೋನಾಗೆ ಮೃತಪಟ್ಟಿದ್ದಾರೆ. ಜರ್ಮನಿಯಲ್ಲಿ 13 ಸಾವಿರ ಕೊರೋನಾ ಸೋಂಕಿತರಿದ್ದು, 2 ಸಾವಿರ ಜನರು ಮೃತಪಟ್ಟಿದ್ದಾರೆ.

ಅಮೆರಿಕದಲ್ಲಿ ಪ್ರತಿ 10 ಲಕ್ಷ ಮಂದಿಯ ಪೈಕಿ 1,700 ಮಂದಿಗೆ ಸೋಂಕು ಇದ್ದರೆ, ಸ್ಪೇನ್‌ನಲ್ಲಿ ಈ ಪ್ರಮಾಣ 3,500. ಭಾರತದಲ್ಲಿ ಪರೀಕ್ಷೆಯನ್ನು ಕ್ಷಿಪ್ರಗೊಳಿಸಿದರೆ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಆದರೆ ಪ್ರತಿ ಹತ್ತು ಲಕ್ಷ ಮಂದಿಯ ಪೈಕಿ ತೀರಾ ಕಡಿಮೆ ಮಂದಿ ಸೋಂಕಿತರು ಇರುವುದರಿಂದ, ಒಟ್ಟಾರೆ ಚಿತ್ರಣದಲ್ಲಿ ದೊಡ್ಡ ವ್ಯತ್ಯಾಸವಾಗುವ ಸಾಧ್ಯತೆ ಇಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights