ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶಾದ್ಯಂತ ಪ್ರಸಂಶೆಗೆ ಪಾತ್ರವಾದ ಕೇರಳ

ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ದೇಶದಲ್ಲಿಯೇ ಕೇರಳ ರಾಜ್ಯವು ಸಧ್ಯಕ್ಕೆ ಮುಂಚೂಣಿಯಲ್ಲಿದ್ದು, ಪ್ರಶಂಸೆಗೆ ಪಾತ್ರವಾಗುತ್ತಿದೆ. ಅದರಲ್ಲೂ ಕಾಸರಗಡು ಜಿಲ್ಲೆಯಲ್ಲಿ ಕೇರಳ ಸರ್ಕಾರ ಕೊರೊನಾವನ್ನು ಎದುರಿಸುತ್ತಿರುವ ರೀತಿ ದೇಶಕ್ಕೆ ಮಾದರಿಯಾಗಿದೆ ಎಂಬುದು ಸಾರ್ವಜನಿಕ ವಲಯದ ಅಭಿಪ್ರಾಯ.

ಅಂದಹಾಗೆ, ಕೊರೊನಾ ಸೋಂಕು ಭಾರತದಲ್ಲಿ ಮೊದಲು ದೃಡಪಟ್ಟಿದ್ದೂ ಕೇರಳದಲ್ಲಿ. ಹಾಗಾಗಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದೂ ಕೇರಳದಲ್ಲಿಯೇ. ಅದಕ್ಕಾಗಿ ಕೇರಳ ಸರ್ಕಾರ ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ವಿಶೇ‍‍ಷವಾದ ರೀತಿಯಲ್ಲಿ ಅರಿವು ಮೂಢಿಸಲು ಆರಂಭಿಸಿತ್ತು. ಸಧ್ಯಕ್ಕೆ 394 ಜನರಲ್ಲಿ ಕೊರೊನಾ ಸೋಂಕು ಪತ್ತಿಯಾಗಿದ್ದು, ಅವರಲ್ಲಿ 245 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೇರಳದ ಈ ತುರ್ತು ಕಾರ್ಯಾಚರಣೆಯಿಂದಾಗಿಯೇ ಇಂದು ಕೇರಳ ಸರ್ಕಾರ ಪ್ರಸಂಶೆಗೆ ಪಾತ್ರವಾಗಿದೆ.

ಕೇರಳ ರಾಜ್ಯದಲ್ಲಿ ದೃಢಪಟ್ಟಿದ್ದ 394 ಪ್ರಕರಣಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿಯೇ ಸುಮಾರು 150ಕ್ಕೂ ಹೆಚ್ಚು ಸೋಂಕಿತರಿದ್ದರು. ಹಾಗಾಗಿ ಕೊರೊನಾ ಪೀಡಿತರ ಹಾಟ್‌ಸ್ಪಾಟ್‌ ಎಂದು ಕೇರಳ ಸರ್ಕಾರ ಘೋಷಿಸಿತ್ತು. ಇದರಿಂದಾಗಿ ಕರ್ನಾಟಕ ಸರ್ಕಾರವು ಕೇರಳ ಮತ್ತು ಕರ್ನಾಟಕ ಗಡಿ ರಸ್ತೆಯನ್ನು ನಿರ್ಬಂಧಿಸಿತ್ತು. ಕರ್ನಾಟಕದ ಮಂಗಳೂರಿಗೆ ನಿರಂತರ ಒಡನಾಟವನ್ನು ಕಾಸರಗೋಡು ಜಿಲ್ಲೆ ಹೊಂದಿತ್ತು. ಅಲ್ಲದೆ, ತುರ್ತು ವೈದ್ಯಕೀಯ ಅಗತ್ಯಗಳಿಗಾಗಿಯೂ ಕಾಸರಗೋಡಿನ ಜನರು ಮಂಗಳೂರಿನ ಆಸ್ಪತ್ರೆಗಳಿಗೇ ಬರಬೇಕಾಗಿತ್ತು. ಆದರೂ, ಕರ್ನಾಟಕದ ಗಡಿ ಬಂದ್‌ ಮಾಡಿದ್ದು ಕಾಸರಗೋಡಿನ ಜನರಿಗೆ ಸಂಕಷ್ಟವನ್ನು ತಂದೊಡ್ಡಿತ್ತು.

ಆ ಕಾರಣಕ್ಕಾಗಿಯೇ ಕಾಸರಗೋಡಿನ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಜಿಲ್ಲೆಯ ಕೊರೊನಾ ಚಿಕಿತ್ಸೆಗಾಗಿ ಕೇರಳ ಸರ್ಕಾರ ಮೀಸಲು ಮಾಡಿ ಆದೇಶಿಸಿತು. ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ 25 ವೈದ್ಯಕೀಯ ಸಿಬ್ಬಂದಿಗಳ ತಂಡವನ್ನು ಕಾಸರಗೋಡು ಆಸ್ಪತ್ರೆಗೆ ಕಳಿಸಿಕೊಟ್ಟಿತ್ತು.

ತಿರುವನಂತಪುರಂ ಎಂಸಿಎಚ್ ಉಪ ಅಧೀಕ್ಷಕ ಎಂ.ಎಸ್.ಸಂತೋಷ್‌ಕುಮಾರ್ ನೇತೃತ್ವದ 10 ವೈದ್ಯರು, 10 ದಾದಿಯರು ಮತ್ತು ಐವರು ನರ್ಸಿಂಗ್ ಸಹಾಯಕರು ಸೇರಿದಂತೆ ತಂಡವು ಕಾಸರಗೋಡಿಗೆ ತೆರಳಿದ್ದು, ಕೊವಿಡ್‌-19 ಸೋಂಕಿನ ಚಿಕಿತ್ಸೆಗೆ ಅಗತ್ಯವಾಗುವಂತೆ ಆಸ್ಪತ್ರೆಯನ್ನು ಸಜ್ಜುಗೊಳಿಸಿ ಚಿಕಿತ್ಸೆ ನೀಡಲು ಆರಂಭಿಸಿತ್ತು.

ವೈದ್ಯಕೀಯ ತಜ್ಞರ ತಂಡವನ್ನು ಕಾಸರಗೋಡಿಗೆ ಕಳಿಸಲಾಗಿದ್ದು, ತಂಡವು ಎರಡು ವಾರಗಳ ಕಾಲ ಅಲ್ಲಿಯೇ ಇರುತ್ತದೆ. ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲು ಹಾಗೂ ಎಲ್ಲಾ ಕ್ಲಿನಿಕಲ್ ಮತ್ತು ಸೋಂಕು ನಿಯಂತ್ರಣ ಪ್ರೋಟೋಕಾಲ್‌ಗಳನ್ನು ಜಾರಿಗೆ ತರಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ತಿಳಿಸಿದ್ದಾರೆ.

ಅಲ್ಲದೆ, ಪ್ರತಿ ಜಿಲ್ಲೆಗೆ ಮೀಸಲಾದ COVID-19 ಚಿಕಿತ್ಸಾ ಕೇಂದ್ರವನ್ನು ಹೊಂದಿರುವ ಸರ್ಕಾರವು ಹೊಸ ವೈದ್ಯಕೀಯ ಕಾಲೇಜುಗಳನ್ನು 200 ಹಾಸಿಗೆಗಳು ಮತ್ತು ಪ್ರತ್ಯೇಕ ವಾರ್ಡ್‌ಗಳೊಂದಿಗೆ ಕ್ಲಿನಿಕಲ್ ಕೇರ್ ಸೌಲಭ್ಯವಾಗಿ ಪರಿವರ್ತಿಸಲು ಅವಕಾಶ ಮಾಡಿಕೊಟ್ಟಿದೆ. ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ 28 ಆಸ್ಪತ್ರೆಗಳನ್ನು ಕೋವಿಡ್-19 ಚಿಕಿತ್ಸೆಗಾಗಿ ವಿಶೇಷ ಆಸ್ಪತ್ರೆಗಳಾಗಿ ನೇಮಿಸಿದೆ ಮತ್ತು ರಾಜ್ಯದಾದ್ಯಂತ ಶಂಕಿತ ವ್ಯಕ್ತಿಗಳನ್ನು ಮತ್ತು ಹೆಚ್ಚಿನ ಅಪಾಯದ ವರ್ಗವನ್ನು ಪ್ರತ್ಯೇಕಿಸಲು 636 ಕರೋನಾ ಕೇರ್ ಹೋಂಗಳನ್ನು ಸ್ಥಾಪಿಸಿದೆ.

ಸಮುದಾಯದಲ್ಲಿ ಸೋಂಕು ಹರಡುವುದನ್ನು ತಪ್ಪಿಸಲು ಕಣ್ಗಾವಲು ಹೆಚ್ಚಿಸುವಂತೆ ಕೇರಳ ಸರ್ಕಾರ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿತ್ತು. ಹಾಗಾಗಿ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಈಗಾಗಲೇ ರಾಜ್ಯದ ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ಸಾರ್ವಜನಿಕ ರಸ್ತೆಗಳು ಮತ್ತು ಸಮುದಾಯ ಕಟ್ಟಡಗಳನ್ನು ಸ್ಯಾನಿಟೈಸರ್‌ ಸಿಂಪಡಿಸಿ ಸೋಂಕುರಹಿತಗೊಳಿಸುವಲ್ಲ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ.

394 ಸೋಂಕಿತರನ್ನು ಹೊಂದಿದ್ದ ಕೇರಳ ರಾಜ್ಯದಲ್ಲಿ ಸಧ್ಯಕ್ಕೆ 147 ಜನರಷ್ಟೇ ಇನ್ನೂ ಸೋಂಕಿನಿಂದ ಬಳಲುತ್ತಿದ್ದು, ಶೀಘ್ರಗತಿಯ ಚಿಕಿತ್ಸೆತಿಂದಾಗಿ 245 ಜನರು ಗುಣಮುಖರಾಗಿದ್ದು… ಕೊರೊನಾ ಚಿಕಿತ್ಸೆ ನೀಡುವಲ್ಲಿ ದೇಶಕ್ಕೆ ಮಾದರಿಯಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights