ಬಸವನಾಡಿನ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದಿದೆ ಪೈಪೋಟಿ- ಮನೆಯೊಂದು ಹಲವು ಬಾಗಿಲು

ಬಸವನಾಡಿನ ಬಿಜೆಪಿ ಸಾರಥ್ಯಕ್ಕೆ ಪೈಪೋಟಿ ಶುರವಾಗಿದೆ. ಮನೆಯೊಂದು ಐದು ಬಾಗಿಲು ಎಂಬಂತಾಗಿರುವ ವಿಜಯಪುರ ಬಿಜೆಪಿಗೆ ನೂತನ ನಾಯಕ ನೇಮಕಾತಿ ಹೈಕಮಾಂಡಿಗೂ ಬಿಸಿತುಪ್ಪವಾಗಿದೆ. ಸದಾ ಭಿನ್ನಮತದಿಂದಲೇ ಸುದ್ದಿಯಲ್ಲಿರುವ ವಿಜಯಪುರ ಜಿಲ್ಲಾ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಕಕ್ಕೆ ಈಗಾಗಲೇ ಲಾಬಿ ಶುರವಾಗಿದೆ. ಪಕ್ಷದ ಮೂಲ ನಾಯಕರ ಜೊತೆ, ಮರಳಿ ಬಿಜೆಪಿಗೆ ಬಂದ ನಾಯಕರ ಹೆಸರೂ ಪಟ್ಟಿಯಲ್ಲಿದೆ.

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ವಿಠ್ಠಲ ಧೋಂಡಿಬಾ ಕಟಕಡೊಂದ ಬಿಜೆಪಿ ಬಿಟ್ಟು ಕೈಪಡೆ ಸೇರಿದ ಬಳಿಕ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಖಾಲಿ ಇತ್ತು. ನಂತರದ ದಿನಗಳಲ್ಲಿ ಮಾಜಿ ಅಧ್ಯಕ್ಷ ಮತ್ತು ಆರ್ಎಸ್ಎಸ್ ಕಟ್ಟಾಳು ಚಂದ್ರಶೇಖರ ಕವಟಗಿ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಅವರ ಅಧ್ಯಕ್ಷತೆಯಲ್ಲಿಯೇ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತು. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆಗೂ ಚಾಲನೆ ನೀಡಲಾಗಿದ್ದು, ಈಗಾಗಲೇ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆ ನಡೆಸುತ್ತಿದ್ದಾರೆ. ಬಿಜೆಪಿ ಮಂಡಲ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಜಿಲ್ಲಾಧ್ಯಕ್ಷರ ನೇಮಕಾತಿಗೆ ಚಾಲನೆ ಸಿಕ್ಕಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಡಿ. 20ರೊಳಗೆ ಬಿಜೆಪಿ ನೂತನ ಜಿಲ್ಲಾಧಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ, ಪೌರತ್ವ ಕಾಯಿದೆ ಹೋರಾಟ ಆರಂಭವಾದ ಮೇಲೆ ಈ ಪ್ರಕ್ರಿಯೆಗೆ ಸ್ವಲ್ಪ ಹಿನ್ನೆಡೆಯಾಗಿದ್ದು, ಡಿಸೆಂಬರ್ ಕೊನೆಯ ವಾರ ಅಥವಾ ಜನೇವರಿ ಮೊದಲ ವಾರದಲ್ಲಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ನೇಮಕಾತಿ ಆದೇಶ ಹೊರ ಬೀಳಲಿದೆ.

ಬಿಜೆಪಿಗೆ ವಿಜಯಪುರ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ನೇಮಕಾತಿ ಬಿಸಿತುಪ್ಪವಾಗಿದೆ. ಹಾಲಿ ಅಧ್ಯಕ್ಷ ಚಂದ್ರಶೇಖರ ಕವಟಗಿ ಆರ್ಎಸ್ಎಸ್ ಮನುಷ್ಯ. ಅಲ್ಲದೇ, ಬಿಜೆಪಿಯ ಹಳೆಯ ಕಾರ್ಯಕರ್ತರಾಗಿದ್ದರಿಂದ ಇವರನ್ನೇ ಮುಂದುವರೆಸುವಂತೆ ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಜಯಪುರ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು ಶಿಫಾರಸು ಮಾಡಿದ್ದಾರೆ. ಆದರೆ, ಚಂದ್ರಶೇಖರ ಕವಟಗಿ ತಮ್ಮನ್ನು ಹಾಲಿ ಸ್ಥಾನದಲ್ಲಾದರೂ ಮುಂದುವರೆಸಿ, ಇಲ್ಲವಾದಲ್ಲಿ ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿ ಎಂದು ಕೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಜಿಲ್ಲಾಧ್ಯಕ್ಷ ಮತ್ತು ರಾಜ್ಯ ಮಟ್ಟದಲ್ಲಿ ಯಾವುದೇ ಸ್ಥಾನ ನೀಡದಿದ್ದರೂ ಪರವಾಗಿಲ್ಲ. ಪಕ್ಷದ ಸಾಮಾನ್ಯಕಾರ್ಯಕರ್ತನಾಗಿ ಇರುತ್ತೇನೆ ಎಂದೂ ಬಿಜೆಪಿ ಹೈಕಮಾಂಡಿಗೆ ಸ್ಪಷ್ಪಪಡಿಸಿದ್ದಾರೆ ಎನ್ನಲಾಗಿದೆ.

ವಿಜಯಪುರ ಜಿಲ್ಲಾ ಘಟಕದಿಂದ ನೂತನ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಆರು ಜನರ ಹೆಸರನ್ನು ಶಿಫಾರಸು ಮಾಡಲಾಗಿದ್ದು, ಅವರಲ್ಲಿ ಜಾತಿವಾರು ಲೆಕ್ಕಾಚಾರ, ಅನುಭವ, ಪಕ್ಷ ನಿಷ್ಠೆಯನ್ನುಪರಿಗಣಿಸಿ ಪಟ್ಟಿ ತಯಾರಿಸಲಾಗಿದೆ. ಈ ಪಟ್ಟಿಯಲ್ಲಿ ರವಿ ಬಗಲಿ(ಲಿಂಗಾಯತ ಪಂಚಮಸಾಲಿ), ಆರ್. ಎಸ್. ಪಾಟೀಲ ಕೂಚಬಾಳ(ರೆಡ್ಡಿ), ಅಶೋಕ ಅಲ್ಲಾಪುರ(ಲಿಂಗಾಯತ ಪಂಚಮಸಾಲಿ), ರಾಜು ಮಗಿಮಠ(ವೀರಶೈವ-ಲಿಂಗಾಯತ), ಭೀಮಾಶಂಕರ ಹದನೂರ(ಲಿಂಗಾಯತ ಪಂಚಮಸಾಲಿ) ಮತ್ತು ಸಂಗರಾಜ ದೇಸಾಯಿ(ಗಾಣಿಗ) ಹೆಸರುಗಳಿವೆ.

ನೂತನ ಅಧ್ಯಕ್ಷ ಆಯ್ಕೆಯಲ್ಲಿ ಬಿಜೆಪಿಯಲ್ಲಿ ಪರಸ್ಪರ ಪ್ರತಿಸ್ಪರ್ಧಿಗಳೇ ಆಗಿರುವ ಸಂಸದ ರಮೇಶ ಜಿಗಜಿಣಗಿ ಮತ್ತು ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಹೆಚ್ಚು ಆಸಕ್ತಿ ತೋರಿಸಿಲ್ಲ ಎನ್ನಲಾಗಿದೆ. ಈಗ ವಿಜಯಪುರ ಜಿಲ್ಲೆಯಲ್ಲಿರುವ ಮೂರು ಜನ ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ ಬಿಜೆಪಿ ಸದಸ್ಯರಲ್ಲಿ ಇಬ್ಬರು ಶಾಸಕರು ಎ. ಎಸ್.ಪಾಟೀಲ ನಡಹಳ್ಳಿ ಮತ್ತು ಸೋಮನಗೌಡ ಬಿ. ಪಾಟೀಲ(ಸಾಸನೂರ) ರೆಡ್ಡಿ ಸಮುದಾಯಕ್ಕೆ ಸೇರಿದ್ದಾರೆ. ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಮತ್ತು ವಿಧಾನ ಪರಿಷತ ಸದಸ್ಯ ಹಣಮಂತ ನಿರಾಣಿ ಇಬ್ಬರೂ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದಾರೆ. ಮತ್ತೋರ್ವ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಲಿಂಗಾಯಿತ ಬಣಜಿಗ ಸಮುದಾಯಕ್ಕೆ ಸೇರಿದ್ದಾರೆ. ಹೀಗಾಗಿ ಎಲ್ಲರೂ ಲಿಂಗಾಯಿತ ಸಮುದಾಯಕ್ಕೆ ಸೇರಿದ್ದರಿಂದ ಲಿಂಗಾಯಿತ ಆದಿ ಬಣಜಿಗ ಸಮುದಾಯಕ್ಕೆ ಸೇರಿರುವ ಹಾಲಿ ಅಧ್ಯಕ್ಷ ಚಂದ್ರಶೇಖರ ಕವಟಗಿ ಅವರನ್ನು ಜಿಲ್ಲಾಧ್ಯಕ್ಷರಾಗಿ ಮುಂದುವರೆಸಿದರೂ ಅಚ್ಚರಿಯಿಲ್ಲ ಎಂಬ ಪರಿಸ್ಥಿತಿ ಇದೆ.

ಚಂದ್ರಶೇಖರ ಕವಟಗಿ ಅವರನ್ನು ಬದಲಾವಣೆ ಮಾಡಿದರೆ ರವಿ ಬಗಲಿ ಮತ್ತು ಆರ್. ಎಸ್.ಪಾಟೀಲ ಕೂಚಬಾಳ ಅವರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿವೆ. ಆದರೆ, ಸಧ್ಯಕ್ಕೆ ಜಾಣ ಮೌನ ವಹಿಸಿರುವ ಸಂಸದ ರಮೇಶ ಜಿಗಜಿಣಗಿ ಮತ್ತು ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಈ ನೇಮಕಾತಿಯ ಅಂತಿಮ ಹಂತದಲ್ಲಿ ಯಾವ ಆಟ ಆಡುತ್ತಾರೆ ಎಂಬುದರ ಮೇಲೆ ಬಿಜೆಪಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂಬ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿವೆ.

ಒಟ್ಟಾರೆಯಾಗಿ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ನೂತನ ಅಧ್ಯಕ್ಷ ಆಯ್ಕೆ ವಿಚಾರ ಸಾಕಷ್ಟು ಕುತೂಹಲ ಕೆರಳಿಸಿರುವುದಂತೂ ಸತ್ಯ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights