ಭಾರತಕ್ಕೆ ನೆರವು ನೀಡಲು ಮುಂದಾದ ಪಾಕಿಸ್ತಾನ; ನಮ್ಮ ಪ್ಯಾಕೆಜ್ ನಿಮ್ಮ ಜಿಡಿಪಿಗಿಂತ ಹೆಚ್ಚು ಎಂದು ನಿರಾಕರಿಸಿದ ಭಾರತ

ನಗದು ವರ್ಗಾವಣೆ ಯೋಜನೆಯ ಅನುಭವವನ್ನು ಭಾರತಕ್ಕೂ ವಿಸ್ತರಿಸಿ ನಗದು ವರ್ಗಾಣೆ ಮಾಡುವ  ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿರುವ ಭಾರತ, ನಮ್ಮ ಕೋವಿಡ್ ಪರಿಹಾರ ಪ್ಯಾಕೇಜ್‌ ನಿಮ್ಮ ದೇಶದ ಜಿಡಿಪಿಗಿಂತ ಡೊಡ್ಡದಿದೆ ಎಂದು ಹೇಳಿದೆ.

ಭಾರತದಲ್ಲಿ ಲಾಕ್‌ಡೌನ್‌ ಸಮಯದಲ್ಲಿ ಜನರು ಬಡತನದಲ್ಲಿ ಹೇಗೆ ಹೋರಾಡುತ್ತಿದ್ದಾರೆ ಎಂಬ ವರದಿಗಳ ನಂತರ ಇಮ್ರಾನ್‌ ಖಾನ್ ಸರಣಿ ಟ್ವೀಟ್‌ ಮಾಡಿದ್ದರು. ಪಾಕಿಸ್ತಾನ ತನ್ನ ಯಶಸ್ವಿ ನಗದು ವರ್ಗಾವಣೆ ಕಾರ್ಯಕ್ರಮವನ್ನು ಜಾರಿಗೆ ತಂದ ಅನುಭವವನ್ನು ಭಾರತಕ್ಕೂ ವಿಸ್ತರಿಸಲು ಸಿದ್ಧರಿದ್ದೇವೆ ಎಂದ ಕೆಲವೇ ಗಂಟೆಗಳಲ್ಲಿ ಭಾರತದ ವಿದೇಶಾಂಗ ಸಚಿವಾಲಯ ಅದನ್ನು ನಿರಾಕರಿಸಿದೆ.

“ಪಾಕಿಸ್ತಾನವು ತನ್ನ ಸ್ವಂತ ಜನರಿಗೆ ಹಣ ನೀಡುವ ಬದಲು ದೇಶದ ಹೊರಗಿನ ಬ್ಯಾಂಕ್ ಖಾತೆಗಳಿಗೆ ನಗದು ವರ್ಗಾವಣೆ ಮಾಡುವಲ್ಲಿ ಹೆಸರುವಾಸಿಯಾಗಿದೆ. ಸ್ಪಷ್ಟವಾಗಿ ಇಮ್ರಾನ್ ಖಾನ್ ಅವರಿಗೆ ಹೊಸ ಸಲಹೆಗಾರರು ಮತ್ತು ಉತ್ತಮ ಮಾಹಿತಿಯ ಅಗತ್ಯವಿದೆ” ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಆನ್‌ಲೈನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

“ಅವರ ಸಾಲದ ಸಮಸ್ಯೆ (ಜಿಡಿಪಿಯ ಸುಮಾರು 90 ಪ್ರತಿಶತ) ಮತ್ತು ಸಾಲ ಪುನರ್ರಚನೆಗಾಗಿ ಅವರು ಎಷ್ಟು ಒತ್ತಡದಲ್ಲಿ ಇದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ಭಾರತವು ಪಾಕಿಸ್ತಾನದ ವಾರ್ಷಿಕ ಜಿಡಿಪಿಗಿಂತ ದೊಡ್ಡ ಉತ್ತೇಜಕ ಪ್ಯಾಕೇಜ್ ಘೋಷಿಸಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಉತ್ತಮ ಎಂದು ಅವರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ದುಷ್ಪರಿಣಾಮವನ್ನು ಎದುರಿಸಲು ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಪ್ರಮುಖ ಕ್ಷೇತ್ರಗಳಿಗೆ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಿಸಿದ್ದರು.

ಬಡವರ ಮೇಲೆ ಕೋವಿಡ್ -19 ನ ಹೊಡೆತವನ್ನು ಎದುರಿಸಲು ತಮ್ಮ ಸರ್ಕಾರವು ಒಂಬತ್ತು ವಾರಗಳಲ್ಲಿ 12 ಸಾವಿರ ಕೋಟಿ ರೂಗಳನ್ನು ಒಂದು ಕೋಟಿಗೂ ಹೆಚ್ಚು ಕುಟುಂಬಗಳಿಗೆ “ಪಾರದರ್ಶಕ ರೀತಿಯಲ್ಲಿ” ಯಶಸ್ವಿಯಾಗಿ ವರ್ಗಾಯಿಸಿದ್ದೇವೆ ಮತ್ತು ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ ಎಂದು ಇಮ್ರಾನ್‌ ಖಾನ್ ಹೇಳಿದ್ದಾರೆ.

ಸಹಾಯವನ್ನು ನೀಡಲು ಮತ್ತು ನಮ್ಮ ಯಶಸ್ವಿ ನಗದು ವರ್ಗಾವಣೆ ಕಾರ್ಯಕ್ರಮವನ್ನು ಹಂಚಿಕೊಳ್ಳಲು ನಾನು ಸಿದ್ಧನಿದ್ದೇನೆ. ಅದರ ವ್ಯಾಪ್ತಿ ಮತ್ತು ಪಾರದರ್ಶಕತೆಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘಿಸಲಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಹೇಳಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights