ಗಡಿಯಲ್ಲಿ ನೇಪಾಳ ಪೊಲೀಸರ ಗುಂಡಿನ ದಾಳಿ; ಬಿಹಾರ ನಿವಾಸಿಯ ಸಾವು, ನಾಲ್ವರು ಗಂಭೀರ

ಭಾರತ – ನೇಪಾಳ ಗಡಿ ಪ್ರದೇಶವಾದ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನೇಪಾಳ ಪೊಲೀಸರು ನಡೆಸಿರುವ ಗುಂಡಿನ ದಾಳಿಗೆ ಒಬ್ಬ ಬಿಹಾರ ನಿವಾಸಿ ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರ ರಾಜ್ಯದ ಸೀತಾಮರ್ಹಿ ಜಿಲ್ಲೆಯ ಸೋನೆಬರ್ಶ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ರಾ ಪಾರ್ಸೇನ್ ಪಂಚಾಯಿತಿಯ ಲಾಲ್‌ಬಂದಿ-ಜಾಂಕಿ ನಗರ ಗಡಿಯಲ್ಲಿ ಭಾರತೀಯರು ಮತ್ತು ನೇಪಾಳ ಪೊಲೀಸರ ನಡುವೆ ಘರ್ಷಣೆ ನಡೆದ ನಂತರ ಗುಂಡಿನ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯರು ಮತ್ತು ನೇಪಾಳದ ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ನಡುವೆ ಈ ಚಕಮಕಿ ನಡೆದಿದೆ ಎಂದು ಪಾಟ್ನಾ ಗಡಿನಾಡಿನ ಸಶಸ್ತ್ರ ಪಡೆಯ ಇನ್ಸ್‌ಪೆಕ್ಟರ್ ಜನರಲ್ ಸಂಜಯ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

ವಿಕೇಶ್ ಕುಮಾರ್ ರಾಯ್ (25) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಉಮೇಶ್ ರಾಮ್ ಮತ್ತು ಉದಯ್ ಠಾಕೂರ್ ಅವರು ಕೃಷಿ ಕೆಲಸ ಮಾಡುತ್ತಿದ್ದಾಗ ಗುಂಡು ತಗುಲಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ ಲಗಾನ್ ರೈ ಅವರನ್ನು ನೇಪಾಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೀತಾಮರ್ಹಿ ಸದರ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಗಡಿ ದಾಟಲು ಯತ್ನಿಸುತ್ತಿರುವ ಡಜನ್‌ಗಟ್ಟಲೆ ಭಾರತೀಯರನ್ನು ಚದುರಿಸಲು ಮೇ 17 ರಿಂದ ನೇಪಾಳ ಪೊಲೀಸರು ಗಸ್ತು ಸುತ್ತುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಸೀತಮಾರ್ಹಿ ಪೊಲೀಸ್ ವರಿಷ್ಠಾಧಿಕಾರಿ ಧಾವಿಸಿದ್ದಾರೆ.

ನೇಪಾಳವು ಭಾರತದೊಂದಿಗೆ 1,850 ಕಿಲೋಮೀಟರ್ (1,150 ಮೈಲಿ) ಮುಕ್ತ ಗಡಿಯನ್ನು ಹಂಚಿಕೊಂಡಿದೆ ಮತ್ತು ಜನರು ಕೆಲಸಕ್ಕಾಗಿ ಮತ್ತು ಕುಟುಂಬವನ್ನು ಭೇಟಿ ಮಾಡಲು ಗಡಿ ಪ್ರದೇಶದಲ್ಲಿ ಪ್ರಯಾಣಿಸುತ್ತಾರೆ. ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ನೇಪಾಳವು ಮಾರ್ಚ್ 22 ರಂದು ತನ್ನ ಅಂತರರಾಷ್ಟ್ರೀಯ ಗಡಿಗಳನ್ನು ಮುಚ್ಚಿತ್ತು.

ಅಂತರರಾಷ್ಟ್ರೀಯ ಗಡಿಯ ಸಮೀಪವಿರುವ ಪ್ರದೇಶವನ್ನು ಪ್ರವೇಶಿಸುವ ಸೀತಾಮಾರ್ಹಿ ಜಿಲ್ಲೆಯ ಸ್ಥಳೀಯರು ಮತ್ತು ನೇಪಾಳದ ಎಪಿಎಫ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ಶುರುವಾಗಿದೆ. ನಂತರ ಇದು ದೊಡ್ಡ ಗಲಾಟೆಯಾಗಿ ಬದಲಾಗಿದೆ. ಹೀಗಾಗಿ ನೇಪಾಳದ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಭಾರತೀಯ ವ್ಯಕ್ತಿ ಸಾವನ್ನಪ್ಪಿದ್ದರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಪಾಟ್ನಾ ಗಡಿನಾಡಿನ ಸೀಮಾ ಪಡೆ ಭಾಗಿಯಾಗಿಲ್ಲ ಎಂದು ಬಿಹಾರದ ಐಜಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights