ರಾಮನಗರದಲ್ಲಿ ಬಂಡವಾಳ ಶಾಹಿಗಳ ಭಾರೀ ಪ್ರಮಾಣದ ಗಣಿಗಾರಿಕೆ…!
ಉತ್ತರ ಕನ್ನಡ ಜಿಲ್ಲೆಯ ರಾಮನಗರದ ಜನರ ಮುಗ್ಧತೆ ಅರಿತ ಬಂಡವಾಳ ಶಾಹಿಗಳು ಬಾರೀ ಪ್ರಮಾಣದ ಗಣಿಗಾರಿಕೆ ನಡೆಸುತ್ತಿದ್ದಾರೆ. ಒಂದಲ್ಲ.. ಎರಡಲ್ಲ. ಹಲವು ವರ್ಷಗಳಿಂದ ಇಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು ಇತ್ತೀಚಿನ ದಿನಗಳಲ್ಲಿ ಉಂಟಾಗುತ್ತಿರುವ ಶಬ್ದಮಾಲಿನ್ಯ ಮತ್ತು ವಾಯು ಮಾಲಿನ್ಯದಿಂದಾಗಿ ಜನ ಬೀದಿಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ….
ಒಂದು ಕಡೆ ಎಲ್ಲೆಂದರಲ್ಲಿ ಕಾಣುತ್ತಿರುವ ಗಣಿಗಾರಿಕೆ ಪ್ರದೇಶದ ದೃಶ್ಯ… ಇನ್ನೊಂದೆಡೆ ಇನ್ನು ಸ್ಟೋಟಗೊಳಿಸಲು ಸಿದ್ದವಾಗಿರುವ ಬೋರವೆಲ್ ಗಾತ್ರದ ಹೋಲ್ಗಳು. ಮತ್ತೊಂದೆಡೆ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿರುವ ನಾಗರಿಕರು. ಹೌದು. ಇದು ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ದುಃಸ್ಥಿತಿ. ಹೆಸರಿಗೆ ಮಾತ್ರ ರಾಮನಗರ ಚೆಂದವಾಗಿದೆ. ಆದ್ರೆ ಇಲ್ಲಿ ನಡೆಯುತ್ತಿರೋದೆಲ್ಲಾ ಅಕ್ರಮ ಗಣಿಗಾರಿಕೆ. ಇಲ್ಲಿನ ಆಡಾಳಿ ಮಜಿರೆಯಲ್ಲಿ ಕೆಲ ಉದ್ಯಮಿಗಳು ಇಲ್ಲಿ ಕಾನೂನುಬಾಹೀರವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಹಿಂದೆ ಇದ್ದ ಕೃಷಿ ಜಮೀನು ಈಗ ಗಣಿಗಾರಿಕೆಯ ಪ್ರದೇಶವಾಗಿ ಮಾರ್ಪಟ್ಟಿದೆ. ಇಲ್ಲಿನ ಜನರ ಮುಗ್ದತೆ ಅರಿತ ಬಂಡವಾಳಶಾಹಿಗಳು ಕೃಷಿ ಜಮೀನನ್ನ ಖರೀದಿಸಿ ತಮ್ಮ ಅಕ್ರಮ ಚಟುವಟಿಕೆ ನಡೆಸ್ತಿದ್ದಾರೆ. ಈ ಭಾಗಕ್ಕೆ ಕಾಲಿಟ್ಟರೇ ಬಳ್ಳಾರಿಯ ಗಣಿ ಪ್ರದೇಶವನ್ನ ಮೀರಿಸುವಂತೆ ದೃಶ್ಯ ಕಾಣಿಸುತ್ತಿದೆ. ನೂರಾರು ಎಕರೆ ಪ್ರದೇಶವೀಗ ಗಣಿಗಾರಿಕೆ ತಾಣವಾಗಿದೆ. ಹಗಲು ರಾತ್ರಿ ರಾಜಾರೋಷವಾಗಿ ನಡೆಸುತ್ತಿರುವ ಗಣಿಗಾರಿಕೆಯಿಂದ ಜನತೆ ನಲುಗಿ ಹೋಗಿದ್ದಾರೆ..
ಒಂದು ಮಾಹಿತಿಯಂತೆ ಆಡಳಿ ಭಾಗದಲ್ಲಿ ಎಂಟು ಜನ ಉದ್ಯಮಿಗಳು ಗಣಿಗಾರಿಕೆ ನಡೆಸ್ತಿದ್ದಾರೆ. ಗ್ರಾಮಪಂಚಾಯತ್ ವತಿಯಿಂದ ದಿಲೀಪ್ ಬಿಲ್ಡ್ ಕಾನ್ ಕಂಪನಿ ಸೇರಿ ಕೆಲವೇ ಕೆಲವು ಜನರು ಮಾತ್ರ ಎನ್ಓಸಿ ಪಡೆದುಕೊಂಡಿದ್ದಾರೆ. ಆದ್ರೆ ನಿಯಮಗಳನ್ನ ಗಾಳಿಗೆ ತೂರಿ ಗಣಿಗಾರಿಕೆ ನಡೆಸ್ತಿರೋದ್ರಿಂದ ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ. ಒಂದೇ ಸಮನೆ 40ರಿಂದ 50 ಕುಳಿಗಳನ್ನ ತೋಡಿ ಸ್ಪೋಟಕಗಳನ್ನ ಬಳಸಿ ಶಿಲೆ ಕ್ವಾರಿ ಸ್ಪೋಟಗೊಳಿಸಲಾಗುತ್ತದೆ. ಸ್ಪೋಟದ ರಭಸಕ್ಕೆ ಕಲ್ಲುಗಳು ಮನೆಗಳತ್ತ ಸಿಡಿದುಬೀಳುತ್ತವೆ. ಈಗಾಗಲೇ ಅನೇಕ ಮನೆಗಳ, ದೇವಾಲಯಗಳ ಗೋಡೆಗಳು ಬಿರುಕುಬಿಟ್ಟಿವೆ. ಅಲ್ಲದೇ ಇಡೀ ರಾಮನಗರದ ಸುತ್ತಲೂ ಶಬ್ಬಮಾಲಿನ್ಯ ಉಂಟಾಗುತ್ತಿದೆ ಎಂಬುದು ನಾಗರಿಕರ ಆರೋಪವಾಗಿದೆ.ಅಲ್ಲದೇ ಇಲ್ಲಿ ಕ್ವಾರಿ ಸಮೀಪವೇ ಕ್ರಶರ್ ಇರೋದ್ರಿಂದ ಧೂಳುಗಳು ಮನೆಗಳನ್ನ ಮುತ್ತಿಕೊಳ್ಳುತ್ತದೆ. ಸಾಮಾನ್ಯವಾಗಿ ಜನವಸತಿ ಪ್ರದೇಶದಿಂದ ಬಹು ದೂರದಲ್ಲಿ ಮಾತ್ರ ಗಣಿಗಾರಿಕೆಗೆ ಅನುಮತಿ ನೀಡಬೇಕು. ಆದ್ರೆ ಇಲ್ಲಿ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆ ಕಣ್ಣಿದ್ದು ಕುರುಡಾಗಿದೆ ಎಂದು ಇಲ್ಲಿನವರು ಆಕ್ರೋಶ ವ್ಯಕ್ತಪಡಿಸ್ತಾರೆ. ಇಲ್ಲಿ ಎರಡು ಎಕರೆಯಲ್ಲಿ ಗಣಿಗಾರಿಕೆ ಮಾಡಲು ಅಧಿಕೃತವಾಗಿ ಪರವಾನಿಗೆ ನೀಡಲಾಗಿತ್ತು ಆದ್ರೆ ಈಗ ಸುಮಾರು 40ಎಕರೆ ಜಾಗದಲ್ಲಿ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ..
ಕಾನೂನು ಬಾಹೀರವಾಗಿ ನಡೆಸುತ್ತಿರುವ ಗಣಿಗಾರಿಕೆಯಿಂದ ಸಾಮಾನ್ಯ ನಾಗರಿಕರು ತೊಂದರೆ ಅನುಭವಿಸಿದ್ದಾರೆ.ಜನವಸತಿ ಪ್ರದೇಶಗಳಲ್ಲಿ ನಡೆಸುತ್ತಿರುವ ಗಣಿಗಾರಿಕೆಯನ್ನ ಸಂಪೂರ್ಣ ಬಂದ್ ಮಾಡಬೇಕೆಂದು ನಾಗರಿಕರು ಒತ್ತಾಯಿಸ್ತಾರೆ. ಅಧಿಕಾರಿಗಳು ಇಲ್ಲಿ ಭೇಟಿಕೊಟ್ಟು ಸೂಕ್ತ ಪರಿಶೀಲನೆ ನಡೆಸಿ ಸ್ಥಳೀಯರಿಗೆ ನೆಮ್ಮದಿ ನೀಡುವ ಕೆಲಸ ಮಾಡಬೇಕಾಗಿದೆ.

