ಲಾಕ್‌ಡೌನ್‌ನಲ್ಲೂ ಪುತ್ತೂರಿನ ಹಳ್ಳಿಯಲ್ಲಿ ತಯಾರಾದ ಲಾರಿ, ಬಸ್ಸು! ಏನಿದು ಸೀಕ್ರೆಟ್
ದೇಶದಲ್ಲಿ ಲಾಕ್‌ಡೌನ್ ಹೇರಲಾಗಿದ್ದು ಎಲ್ಲಾ ಕಂಪನಿಗಳು, ಕಾರ್ಖಾನೆಗಳು ಬಾಗಿಲು ಮುಚ್ಚಿ ಮನೆಯಲ್ಲಿರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಒಂದು ಹೊಸ ಕಂಪನಿ ಆರಂಭಗೊಂಡಿತ್ತು. ಅಲ್ಲಿ ಕೆಎಸ್‌ಆರ್‌ಟಿಸಿ, ಐರಾವತ ಬಸ್ಸುಗಳು, ಲಾರಿ ಹಾಗೂ ಮಿನಿ ಟೆಂಪೋಗಳು ರೆಡಿಯಾಗಿವೆ.
ಆದರೆ, ಈ ವಾಹನಗಳು ಸಂಚಾರಕ್ಕಾಗಿ ರೆಡಿಯಾದವುಗಳಲ್ಲ. ಬದಲಾಗಿ ಮಿಥುನ್ ಅವರ ಕಲಾ ಕೈಚಳಕದಲ್ಲಿ ಮೂಡಿದ ವಾಹನಗಳ ಮಾದರಿಗಳು. ಮುಂಬೈನಲ್ಲಿ ಉದ್ಯೋಗ ಮಾಡುತ್ತಿದ್ದ ಮಿಥುನ್ ಲಾಕ್‌ಡೌನ್ ಘೋಷಣೆಯಾಗುವ ಮೊದಲೇ ಊರಿಗೆ ಬಂದಿದ್ದರು. ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಕುಳಿತು ಏನು ಮಾಡೋದು ಎಂದು ಚಿಂತಿಸುತ್ತಿದ್ದ ಆತನಿಗೆ ವಾಹನಗಳನ್ನು ತಯಾರಿಸುವ ಐಡಿಯಾ ಬಂದು ಶುರುಮಾಡಿದ್ದರು.

ಶಾಲಾ ದಿನಗಳಿಂದಲೂ ಕಲೆಯಲ್ಲಿ ವಿಶೇಷ ಆಸಕ್ತಿ ಇದ್ದ ಮಿಥುನ್, ಲಾಕ್‌ಡೌನ್ ಸಂದರ್ಭ ಮನೆಯಲ್ಲಿಯೇ ಇದ್ದ ಹಳೆಯ ವಸ್ತುಗಳಿಂದ ಈ ಎಲ್ಲಾ ಮಾಡೆಲ್ಗಳನ್ನು ತಯಾರು ಮಾಡಿದ್ದಾರೆ. ಮನೆಯಲ್ಲೇ ಇರುವ ಹಳೆಯ ಡೋರ್, ಪ್ಲೈವುಡ್, ಹಳೆಯ ಪೊಟೋ ಪ್ರೆಮ್, ಪಾತ್ರೆ ರಬ್ಬರ್ ಶೀಟ್, ರಟ್ಟು ಮುಂತಾದಗಳನ್ನು ಇದಕ್ಕಾಗಿ ಬಳಕೆ ಮಾಡಿದ್ದಾರೆ.
ಸಾಮಾನ್ಯವಾಗಿ ವಾಹನದಲ್ಲಿ ಇರುವ ಎಲ್ಲಾ ವಸ್ತುಗಳೂ ಈ ಮಾಡೆಲ್ಗಳಲ್ಲೂ ಇರುವುದು ವಿಶೇಷ. ಕುಳಿತುಕೊಳ್ಳುವ ಆಸನ, ಲೈಟ್, ಡೋರ್‌ಗಳು ಹೀಗೆ ಎಲ್ಲವೂ ಇದೆ. ಮಾಡೆಲ್ ನೋಡಿದ್ರೆ ಯಾರಿಗೂ ಇದು ವಾಹನವಾ ಅಥವಾ ಮಾಡೆಲಾ ಎಂದು ಗೊತ್ತೇ ಆಗದಷ್ಟು ನಾಜೂಕಾಗಿ ಇದನ್ನು ತಯಾರು ಮಾಡಿದ್ದಾರೆ.
ಮಿಥುನ್ ಅವರ ಕಲಾಕುಸುರಿಗೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಲಾಕ್‌ಡೌನ್ ಅಂತ ಮನೆಯಲ್ಲೇ ಕುಳಿತು ಸಮಯ ವ್ಯರ್ಥ ಮಾಡುವ ಬದಲು ಸಮಯವನ್ನು ಒಳ್ಳೆಯ ಕಾರ್ಯಕ್ಕೆ ಸದುಪಯೋಗ ಮಾಡಿ ಗುರುತಿಸಿಕೊಳ್ಳಬಹುದು ಎಂಬುದಕ್ಕೆ ಈ ಮಾಡೆಲ್‌ಗಳೇ ಸಾಕ್ಷಿಯಾಗಿದೆ. ಮಿಥುನ್ ಅವರ ಮಾಡೆಲ್ ನೋಡಲೆಂದೇ ಸಾಕಷ್ಟು ಮಂದಿ ದಿನನಿತ್ಯ ಭೇಟಿ ನೀಡುತ್ತಿದ್ದಾರೆ.
ಒಟ್ಟಾರೆ ಲಾಕ್ ಡೌನ್ ಕೆಲವರಿಗೆ ಟೈಮ್ ಪಾಸ್ ಮಾಡಲು ಪ್ರಯಾಸವಾಗಿದ್ದರೆ, ಮಿಥುನ್ ಅಂಥ ಹಲವರಿಗೆ ತಮ್ಮ ಪ್ರತಿಭೆಗಳಿಗೆ ನೀರೆರೆಯಲು ಸಮಯ ಕೊಟ್ಟಿದೆ. ಚಿಕ್ಕಂದಿನಿಂದಲೂ ಅದಮ್ಯವಾಗಿದ್ದ, ನಿರಂತರ ಕೆಲಸದೊತ್ತಡದ ಮಧ್ಯೆ ಹುದುಗಿಹೋಗಿದ್ದ ಹವ್ಯಾಸಗಳನ್ನ ಅನಾವರಣಗೊಳಿಸಲು ಇತರ ಯುವ ಮನಸುಗಳಿಗೆ ಮಿಥುನ್ ಮಾಡೆಲ್ ಆಗಿದ್ದಾರೆ.

