ವಲಸೆ ಕಾರ್ಮಿಕರನ್ನು 15 ದಿನಗಳಲ್ಲಿ ಅವರ ಊರುಗಳಿಗೆ ತಲುಪಿಸಿ; ಉದ್ಯೋಗಖಾತ್ರಿ ಘೋ‍‍‍ಷಿಸಿ: ಸುಪ್ರೀಂ ಕೋರ್ಟ್‌

ಲಾಕ್‌ಡೌನ್‌ ಬಿಕ್ಕಟ್ಟಿನಿಂದಾಗಿ ತಮ್ಮೂರುಗಳಿಗೆ ಹೋಗಲಾಗದೇ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಎಲ್ಲಾ ವಲಸೆ ಕಾರ್ಮಿಕರನ್ನು 15 ದಿನಗಳೊಳಗಾಗಿ ಅವರವರ ತವರು ರಾಜ್ಯಗಳಿಗೆ ಕಳುಹಿಸಿ ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ವಲಸೆ ಕಾರ್ಮಿಕರ ಸಂಕಷ್ಟ ಕುರಿತಂತೆ  ನ್ಯಾಯಮೂರ್ತಿ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಹಾಗೂ ಎಂ.ಆರ್. ಶಾ ಅವರನ್ನೊಳಗೊಂಡ ಸುಪ್ರೀಂಕೋರ್ಟ್’ನ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿದೆ.

ಮಂಗಳವಾರ ವಿಚಾರಣೆ ನಡೆಸಿದ ಪೀಠವು 15 ದಿನಗಳೊಳಗಾಗಿ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕಳುಹಿಸಿಕೊಡಬೇಕು ಹಾಗೂ ಕೊರೋನಾ ಲಾಕ್’ಡೌನ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ್ದಾರೆಂದು ವಲಸೆ ಕಾರ್ಮಿಕರ ಮೇಲೆ ದಾಖಲು ಮಾಡಿರುವ ಎಲ್ಲಾ ಪ್ರಕರಣಗಳನ್ನು ಕೈಬಿಡಬೇಕು ಎಂದು ಸೂಚಿಸಿದೆ.

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ವಲಸೆ ಕಾರ್ಮಿಕರು ಅವರ ರಾಜ್ಯಗಳಿಗೆ ತಲುಪಿದ ಕೂಡಲೇ ಕಾರ್ಮಿಕರ ಸಂಪೂರ್ಣ ಮಾಹಿತಿಯುಳ್ಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಲಾಕ್’ಡೌನ್’ಗೂ ಮೊದಲು ಅವರು ತೊಡಗಿಕೊಂಡಿದ್ದ ಕೆಲಸಗಳ ಕುರಿತು ಮಾಹಿತಿ ಸಂಗ್ರಹಿಸಿರಬೇಕು. ಲಾಕ್’ಡೌನ್ ಬಳಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರ ಉದ್ಯೋಗಕ್ಕಾಗಿ ಯೋಜನೆಗಳನ್ನು ಘೋಷಣೆ ಮಾಡಬೇಕು. ಅವರ ಕೌಶಲ್ಯಕ್ಕನುಗುಣವಾಗಿ ಉದ್ಯೋಗ ನೀಡುವ ಕೆಲಸಗಳಾಗಬೇಕು ಎಂದು ಸುಪ್ರೀಂ ಆದೇಶಿಸಿದೆ.

ತವರಿಗೆ ಹೋಗಲು ಇಚ್ಛಿಸುವ ವಲಸೆ ಕಾರ್ಮಿಕರಿಗೆ ಕೌನ್ಸಿಲಿಂಗ್ ಅತ್ಯಗತ್ಯವಾಗಿ ನೀಡಬೇಕು. ಅಲ್ಲದೆ, ಕಾರ್ಮಿಕರು ತವರು ರಾಜ್ಯಗಳಿಗೆ ಹೋಗುವ ಕುರಿತು ಬೇಡಿಕೆ ಹೆಚ್ಚಾದಂತೆ ಆಯಾ ರಾಜ್ಯ ರೈಲ್ವೇ ಇಲಾಖೆಗಳು 24 ಗಂಟೆಗಳೊಳಗೆ ಹೆಚ್ಚುವರಿ ವಿಶೇಷ ರೈಲುಗಳನ್ನು ಒದಗಿಸಬೇಕು ಎಂದು ಸೂಚಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights