ಗಡಿ ವಿವಾದ, ಪೆಟ್ರೋಲ್ ಬೆಲೆ ಏರಿಕೆ, ಕೊರೋನಾ; ಚರ್ಚಿಸಲು ವರ್ಚ್ಯುಯಲ್ ಸಂಸತ್ ಅಧಿವೇಶನಕ್ಕೆ ಕಾಂಗ್ರೆಸ್ ಒತ್ತಾಯ
ಭಾರತ-ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣ, ಕೋವಿಡ್-19 ದೇಶದಾದ್ಯಂತ ಹರಡುತ್ತಿರುವ ಪರಿಸ್ಥಿತಿ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಲು ಈ ಕೂಡಲೇ ಸಂಸತ್ತಿನ ಅಧಿವೇಶನ ಕರೆಯಬೇಕು. ಸಂಸತ್ ಅಧಿವೇಶನವನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದಿದ್ದರೆ ವರ್ಚ್ಯುಯಲ್ ಅಧಿವೇಶನ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಸದ್ಯಕ್ಕೆ ತುರ್ತಾಗಿ ಚರ್ಚೆ ಮಾಡಬೇಕಾದ ಹಲವು ವಿಷಯಗಳಿವೆ. ಭಾರತ-ಚೀನಾ ಗಡಿ ಸಮಸ್ಯೆಯ ಬಗ್ಗೆ ಚರ್ಚಿಸಬೇಕಿದೆ. ಕೊರೋನಾ ರೋಗದ ಬಗ್ಗೆ ಸಮಾಲೋಚನೆ ಆಗಬೇಕಿದೆ. ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಆಗುತ್ತಿರುವ ಬಗ್ಗೆಯೂ ಚರ್ಚಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನ ಕರೆಯಬೇಕೆಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಒತ್ತಾಯಿಸಿದ್ದಾರೆ.
1962ರ ಭಾರತ-ಚೀನ ಯುದ್ಧದ ವೇಳೆ ಅಧಿವೇಶನ ನಡೆಸಲು ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅಂದಿನ ಕಾಂಗ್ರೆಸ್ ಸರ್ಕಾರದ ಮೇಲೆ ಭಾರಿ ಒತ್ತಡ ಹೇರಿದ್ದರು. ಬಿಜೆಪಿ ಒತ್ತಾಯವನ್ನು ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪುರಸ್ಕರಿಸಿತ್ತು. ಪ್ರತಿಪಕ್ಷಗಳ ಮನವಿಗೆ ಸ್ಪಂದಿಸಿ ಅಧಿವೇಶನ ನಡೆಸಿತ್ತು. ಈಗಲೂ ಅದೇ ರೀತಿ ಪ್ರತಿಪಕ್ಷಗಳ ಮಾತಿಗೆ ಸ್ಪಂದಿಸಿ ಸಂಸತ್ ಅಧಿವೇಶನ ಕರೆಯಬೇಕೆಂದು ಅವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಸಂಸದೀಯ ಸಮಿತಿಗಳ ಸಭೆಗಳು ಕೂಡ ನಡೆಯುತ್ತಿಲ್ಲ. ಸಂಸದೀಯ ಸಮಿತಿಗಳ ಸಭೆಗಳು ಏಕೆ ಸ್ಥಗಿತಗೊಂಡಿವೆ ಎಂದು ಕೇಂದ್ರ ಸರ್ಕಾರವನ್ನು ಪವನ್ ಖೇರಾ ಪ್ರಶ್ನಿಸಿದ್ದಾರೆ.
“ಸ್ಪೀಕರ್ ಸಂಸತ್ತನ್ನು ಮಟ್ಟಹಾಕಲು ಪ್ರಯತ್ನಿಸಬಾರದು. ಸಂಸತ್ ಅಧಿವೇಶನ ನಡೆಸದಿರುವುದು ದುರದೃಷ್ಟಕರ ಸಂಗತಿ. ವರ್ಚ್ಯಯಲ್ ಆಗಿ ರಷ್ಯಾ, ಭಾರತ, ಚೀನಾ ತ್ರಿಪಕ್ಷೀಯ ಶೃಂಗಸಭೆ ನಡೆಸಬಹುದಾದರೆ ಸಂಸತ್ ಅಧಿವೇಶನ ನಡೆಸಲು ಏಕೆ ಸಾಧ್ಯವಾಗುತ್ತಿಲ್ಲ” ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಪ್ರಶ್ನಿಸಿದ್ದಾರೆ.