ಚೀನೀ ಆಮದು ನಿಲ್ಲಿಸಲು ಸಾಧ್ಯವಿಲ್ಲ; ಮಾರಾಟದ ಸರಕಿಗೆ ಉತ್ಪಾದನಾ ದೇಶದ ಟ್ಯಾಗ್ ಕಡ್ಡಾಯ: ಮೋದಿ ಸರ್ಕಾರ
ಭಾರತ ಮತ್ತು ಚೀನಾ ನಡುವೆ ಸಂಭವಿಸಿದ ಸಂಘರ್ಷದ ನಂತರ ಭಾರತವು ಚೀನಾದ 59 ಆ್ಯಪ್‌ಗಳನ್ನು ನಿರ್ಭಂದಿಸಿದೆ. ಇದರ ಬೆನ್ನಲ್ಲೇ ಈಗ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಉತ್ಪನ್ನಗಳಿಗೂ ಆ ಸರಕುಗಳು ತಯಾರಾದ ದೇಶದ ಟ್ಯಾಗ್‌ಗಳನ್ನು ಹಾಕುವುದು ಕಡ್ಡಾಯವೆಂದು ಕೇಂದ್ರ ಸರ್ಕಾರ ಘೋಷಿಸಿದೆ.
ಉತ್ಪನ್ನದ ಹೆಸರು, ಪ್ಯಾಕ್ನಲ್ಲಿರುವ ಉತ್ಪನ್ನದ ಪ್ರಮಾಣ, ಉತ್ಪಾದಿಸಿದ ದಿನಾಂಕ, ಉತ್ಪನ್ನ ಬಳಕೆಯ ಕೊನೆಯ ದಿನ (ಎಕ್ಸ್‌ಪೆರಿ ಡೇಟ್) ಮತ್ತು ದರಗಳನ್ನು ನಮೂದಿಸುವುದರ ಜೊತೆಗೆ ಯಾವ ದೇಶದಲ್ಲಿ ಉತ್ಪದಾನೆ ಮಾಡಲಾಗಿದೆ ಎಂಬುದನ್ನು ಪ್ರಕಟಿಸುವಂತೆ ಕೇಂದ್ರ ನಾಗರಿಕ ಪೂರೈಕೆ ಇಲಾಖೆ ಆದೇಶ ಹೊರಡಿಸಿದೆ.
ಉತ್ಪಾದನೆ ಮಾಡಿದ ದೇಶಗಳ ಮಾಹಿತಿ ಪ್ರಕಟಿಸುವಂತೆ ಉತ್ಪಾದನಾ ಕಂಪನಿಗಳಿಗೆ ಮತ್ತು ಈ-ಕಾಮರ್ಸ್ ಕಂಪನಿಗಳಿಗೆ ಸೂಚನೆ ನೀಡಿದ್ದು, ಆದೇಶ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಮತ್ತು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ತಿಳಿಸಲಾಗಿದೆ.
ನಿಯಮ ಪಾಲಿಸದಿದ್ದಲ್ಲಿ ಮೊದಲ ಎರಡು ಬಾರಿ ದಂಡ ವಿಧಿಸಲಾಗುತ್ತೆ. ಮೂರನೇ ಬಾರಿಗೆ ದಂಡ ವಿಧಿಸುವುದರ ಜೊತೆಗೆ ಅಂತಹ ಕಂಪನಿಗಳ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳಲಾಗುತ್ತದೆ. ಮೊದಲ ಸಲ ನಿಯಮ ಉಲ್ಲಂಘನೆ ಮಾಡಿದರೆ 25 ಸಾವಿರ, ಎರಡನೇ ಸಲ ನಿಯಮ ಉಲ್ಲಂಘಿಸಿದರೆ 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಮೂರನೇ ಸಲ ನಿಯಮ ಉಲ್ಲಂಘಿಸಿದರೆ 1.5 ಲಕ್ಷ ರೂಪಾಯಿ ದಂಡ ವಿಧಿಸುವುದರ ಜೊತೆಗೆ ಕಂಪನಿಗಳಿಗೆ ಒಂದು ವರ್ಷ ನಿಷೇಧ ಹೇರಲಾಗುತ್ತದೆ ಎಂದು ಕೇಂದ್ರ ನಾಗರಿಕ ಪೂರೈಕೆ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.
ಚೀನಾದ ಜೊತೆ ನಾವು ಸಾಕಷ್ಟು ಒಪ್ಪಂದ ಮಾಡಿಕೊಂಡಿದ್ದೇವೆ. ಹೀಗಾಗಿ ಚೀನಾದಿಂದು ಆಮದು ಮಾಡಿಕೊಳ್ಳುವುದನ್ನು ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ, ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಮೊದಲು ಯಾವ ದೇಶದ ಕಂಪನಿಯಲ್ಲಿ ಉತ್ಪಾದನೆ ಆಗಿದೆ ಎನ್ನುವ ಟ್ಯಾಗ್ ಅನ್ನು ಕಡ್ಡಾಯವಾಗಿ ಹಾಕಬೇಕು ಎನ್ನುವ ನಿಯಮ ಇರಲಿಲ್ಲ. ಹೀಗಾಗಿ, ಅನೇಕರು ಚೀನಾ ಪ್ರಾಡಕ್ಟ್ಗಳಿಗೆ ಈ ಟ್ಯಾಗ್ ಹಾಕುತ್ತಿರಲಿಲ್ಲ. ಇದರಿಂದ ಆ ವಸ್ತುಗಳು ಸುಲಭವಾಗಿ ನಮ್ಮ ದೇಶದಲ್ಲಿ ಮಾರಾಟವಾಗುತ್ತಿದ್ದವು. ಆದರೆ, ಈಗ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎನ್ನುವ ಆಂದೋಲ ಶುರುವಾಗಿದೆ. ಮೇಡ್ ಇನ್ ಚೀನಾ ಟ್ಯಾಗ್ ಕಂಡರೆ ಜನರು ಈ ರೀತಿಯ ಪ್ರಾಡಕ್ಟ್ಗಳನ್ನು ಕೊಂಡುಕೊಳ್ಳುವುದನ್ನು ನಿಲ್ಲಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಚೀನಾ ಆಪ್ ಬ್ಯಾನ್ ಮಾಡಿ; ೫೦ ಹೊಸ ಹೂಡಿಕೆಗೆ ಚೀನಾಗೆ ಅವಕಾಶ ಕೊಡಲು ಮುಂದಾದ ಮೋದಿ ಸರ್ಕಾರ