ಬೆಂಗಳೂರಷ್ಟೇ ಅಲ್ಲ 06 ಜಿಲ್ಲೆಗಳ ಲಾಕ್ಡೌನ್ಗೆ ಓಕೆ ಎಂದ ಯಡಿಯೂರಪ್ಪ! ಜಿಲ್ಲಾಧಿಕಾರಿಗಳ ನಿರ್ಧಾರ ಅಂತಿಮ!
ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು (ಮಂಗಳವಾರ) ರಾತ್ರಿಯಿಂದ ಲಾಕ್ಡೌನ್ ಜಾರಿಯಾಗಲಿದೆ. ಅಲ್ಲದೆ, ಅದೇ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಧಾರವಾಡ, ದಕ್ಷಿಣ ಕನ್ನಡ, ಗದಗ, ರಾಯಚೂರು, ಬೀದರ್, ಕಲ್ಬುರ್ಗಿ ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿ ಮಾಡಲು ಸಿಎಂ ಯಡಿಯೂರಪ್ಪ ಅವಕಾಶ ನೀಡಿದ್ದು, ಆಯಾ ಜಿಲ್ಲಾಧಿಕಾರಿಗಳ ವಿವೇಚನೆ ಮೇರಿಗೆ ಲಾಕ್ಡೌನ್ ಮಾಡಬಹುದು, ಜಿಲ್ಲಾಧಿಕಾರಿಗಳ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ.
ದಿನ ಕಳೆದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಆ ಕಾರಣದಿಂದಾಗಿ ಕೊರೊನಾ ನಿಯಂತ್ರಣಕ್ಕೆ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಮಾಡುವುದಾಗಿ ಘೋಷಿಸಿರುವ ಸರ್ಕಾರ, ಕೊರೊನಾ ಸೋಂಕಿತ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು ನಂತರದ ಸ್ಥಾನ ಪಡೆದುಕೊಂಡಿರುವ 06 ಜಿಲ್ಲೆಗಳನ್ನು ಲಾಕ್ಡೌನ್ ಮಾಡಬೇಕೆಂಬ ಸಲಹೆಯ ಮೇರೆಗೆ ಸಿಎಂ ಯಡಿಯೂರಪ್ಪ ಲಾಕ್ಡೌನ್ ಮಾಡುವ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವಿವೇಚನೆ ಬಿಟ್ಟಿದ್ದಾರೆ.
ರಾಜ್ಯ ಸರ್ಕಾರ ಲಾಕ್ಡೌನ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಬಿಟ್ಟು ಬೇರೆ ಜಿಲ್ಲೆಗಳಿಗೆ ಲಾಕ್ಡೌನ್ ಕುರಿತ ಯಾವುದೇ ಸೂಚನೆಯನ್ನು ಸರ್ಕಾರ ನೀಡಿಲ್ಲ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಯಡಿಯೂರಪ್ಪ, “ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿ ಕುರಿತು ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಬಿಡುಗಡೆ ಮಾಡಲಾಗುದಿಲ್ಲ. ಯಾವ ಯಾವ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಾಗಬೇಕು ಎಂಬ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೇ ನೀಡಲಾಗಿದೆ. ಹೀಗಾಗಿ ಲಾಕ್ ಡೌನ್ ಆಗುವ ಜಿಲ್ಲೆಗಳ ಜಿಲ್ಲಾಡಳಿತವೇ ಮಾರ್ಗಸೂಚಿ ಬಿಡುಗಡೆ ಮಾಡಬೇಕು ಎಂದು ಈಗಾಗಲೇ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದಿದ್ದಾರೆ.
ಹೀಗಾಗಿ ಸಿಎಂ ಸೂಚನೆ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲಾಡಳಿತಗಳು ಆಯಾ ಜಿಲ್ಲೆಗಳ ಲಾಕ್ಡೌನ್ ಮಾರ್ಗಸೂಚಿ ಬಿಡುಗಡೆಗೆ ಸಿದ್ದತೆ ನಡೆಸಿವೆ ಎಂದು ತಿಳಿದುಬಂದಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿಎಸ್ ವಿಜಯ್ ಭಾಸ್ಕರ್ ಈಗಾಗಲೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.
ಸೋಮವಾರ ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ ನಿನ್ನೆ ಒಂದೇ ದಿನ 2,738 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 40 ಸಾವಿರ ಗಡಿ ದಾಟಿದಂತಾಗಿದೆ.
ಕರ್ನಾಟಕದಲ್ಲಿ ಇದುವರೆಗೂ 41,581 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು. ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರ- 1315, ಮೈಸೂರು- 151, ಬಳ್ಳಾರಿ-106, ವಿಜಯಪುರ-86, ಶಿವಮೊಗ್ಗ-74, ಚಿಕ್ಕಬಳ್ಳಾಪುರ- 42, ದಕ್ಷಿಣ ಕನ್ನಡ- 131, ಉತ್ತರ ಕನ್ನಡ- 37, ಕಲಬುರಗಿ- 89, ದಾವಣಗೆರೆ- 45, ಉಡುಪಿ- 53, ಕೊಡಗು- 29, ಧಾರವಾಡ- 71 ಕೇಸುಗಳು ವರದಿಯಾಗಿವೆ.
ಒಟ್ಟು, 41,581 ಮಂದಿ ಪೈಕಿ 16,248 ಮಂದಿಗೆ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ಧಾರೆ. ಸದ್ಯ 24,572 ಸಕ್ರಿಯ ಕೇಸುಗಳು ಮಾತ್ರ ಬಾಕಿ ಇವೆ. ಈ ಮಾರಕ ಕೊರೋನಾಗೆ ನಿನ್ನೆ ಒಂದೇ ದಿನ 73 ಮಂದಿ ಅಸುನೀಗಿದ್ದಾರೆ. ಹೀಗಾಗಿ ರಾಜ್ಯದ ಕೋವಿಡ್-19 ಮೃತರ ಸಂಖ್ಯೆಯೂ 757ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಯಡಿಯೂರಪ್ಪ ಮತ್ತು ಜಿಲ್ಲಾಧಿಕಾರಿಗಳೊಂದಿಗಿನ ಸಭೆಯ ಮುಖ್ಯಾಂಶಗಳು!

