ಕಾಶ್ಮೀರಿ ವಿದ್ಯಾರ್ಥಿಗಳ ಬಗ್ಗೆ ಹುಬ್ಬಳ್ಳಿ ವಕೀಲರ ಸಂಘದ ನಿರ್ಣಯ ಆತಂಕಕಾರಿ: ಕರ್ನಾಟಕ ಹೈಕೋರ್ಟ್

ನ್ಯಾಯವ್ಯವಸ್ಥೆಯ ಅಡಿ ಸಾಬೀತಾಗುವ ಮೊದಲೇ, ಮೂವರು ಆರೋಪಿತ ಕಾಶ್ಮೀರಿ ವಿದಾರ್ಥಿಗಳು ದೇಶದ್ರೋಹಿಗಳು ಮತ್ತು ಗಂಭೀರ ಅಪರಾಧ ಎಸಗಿದ್ದಾರೆ ಎಂದು ಹೊರಡಿಸಿರುವ ಹುಬ್ಬಳ್ಳಿ ವಕೀಲರ ಸಂಘದ ನಿರ್ಣಯ ಆತಂಕಕಾರಿಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿರುವುದಾಗಿ ದ ಹಿಂದೂ ಪತ್ರಿಕೆ ವರದಿ ಮಾಡಿದೆ.

ಈ ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆ ಇದೆ. ವಿಚಾರಣೆಗಳು ಕಾಂಗರೂ ಕೋರ್ಟ್ ಗಳಲ್ಲಿ ಇತ್ಯರ್ಥವಾಗುವುದಿಲ್ಲ ಎಂದು ಹೆಳಿರುವ ಕೋರ್ಟ್, ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ವಿದೇಶಿ ವ್ಯಕ್ತಿಗಳಿಗೂ ನಮ್ಮ ನ್ಯಾಯ ವ್ಯವಸ್ಥೆ ನಿಷ್ಪಕ್ಷಪಾತ ವಿಚಾರಣೆಗೆ ಅವಕಾಶ ನೀಡುತ್ತದೆ. ಆದುದರಿಂದ ವಕೀಲರ ಸಂಘ ಆರೋಪಿಗಳನ್ನು ವಿಚಾರಣೆ ಮುಗಿಯುವ ಮೊದಲೇ ಅಪರಾಧಿಗಳು ಎಂದದ್ದು ತಪ್ಪು ಎಂದಿದೆ.

ಬೆಂಗಳೂರಿನ 24 ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸುತ್ತಿದ್ದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿನಗಿ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿತ್ತು. ಪಾಕಿಸ್ತಾನ ಪರ ಘೋಷಣೆ ಕೂಗಿದರು ಎಂಬ ಆರೋಪ ಎದುರಿಸುತ್ತಿರುವ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಪರವಾಗಿ ತಮ್ಮ ಸಂಘದ ಯಾವ ಸದಸ್ಯನೂ ವಾದ ಮಾಡಬಾರದು ಎಂದು ತೆಗೆದುಕೊಂಡಿದ್ದ ಫೆಬ್ರವರಿ 15ನೇ ತಾರೀಕಿನ ನಿರ್ಣಯವನ್ನು ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

ಇದೇ ಸಂಬಂಧವಾಗಿ ಧಾರವಾಡದಲ್ಲಿ ವಿಚಾರಣೆ ನಡೆಯಬೇಕಿದ್ದ ಸಂದರ್ಭದಲ್ಲಿ ಕೋರ್ಟ್ ಆವರಣದಲ್ಲಿ ಗಲಭೆ ಎದ್ದಿತ್ತು. ಈ ನಿರ್ಣಯದ ನಂತರ ಸಂಘದ ಯಾವುದೇ ವಕೀಲ ಕಾಶ್ಮೀರಿ ವಿದ್ಯಾರ್ಥಿಗಳನ್ನು ಪ್ರತಿನಿಧಿಸಲು ಮುಂದೆ ಬಂದಿರಲಿಲ್ಲ. ನಂತರ ಬೆಂಗಳೂರಿನ ವಕೀಲರು ಈ ಪ್ರಕರಣವನ್ನು ಎತ್ತಿಕೊಂಡಿದ್ದರು.

ಈ ನಿರ್ಣಯವನ್ನು ಹಿಂಪಡೆದಿರುವುದರಿಂದ ಮತ್ತು ಬೆಂಗಳೂರು ವಕೀಲರು ಪ್ರಕರಣವನ್ನು ನಡೆಸುವುದಕ್ಕೆ ಯಾವುದೇ ಅಡ್ಡಿಪಡಿಸಿಲ್ಲವಾದ್ದರಿಂದ, ಧಾರವಾಡ ಕೋರ್ಟ್ ಆವರಣದಲ್ಲಿ ನಡೆದ ಗಲಭೆಯ ಪ್ರಶ್ನೆಯನ್ನು ಸದ್ಯಕ್ಕೆ ಕೈಬಿಡಲು ನ್ಯಾಯಪೀಠ ನಿರ್ಧರಿಸಿದೆ. ಆದರೆ ವಕೀಲರ ಸಂಘ ತೆಗೆದುಕೊಂಡಿದ್ದ ನಿರ್ಣಯ ಅಪರಾಧ ನ್ಯಾಯ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದಿರುವ ಕೋರ್ಟ್, ಮುಂದೆ ಯಾವ ವಕೀಲರ ಸಂಘವೂ ಹೈಕೋರ್ಟ್ ನಡುವೆ ಬರುವ ಸನ್ನಿವೇಶವನ್ನು ಸೃಷ್ಟಿಮಾಡದಂತೆ ನಡೆದುಕೊಳ್ಳಲು ಸೂಚಿಸಿದೆ. ಆರೋಪಿಗಳಿಗೆ ನಿಷ್ಪಕ್ಷಪಾತ ವಿಚಾರಣೆಗೆ ಸಹಕರಿಸುವುದು ವಕೀಲರ ಸಂಘದ ಎಲ್ಲ ಸದಸ್ಯರ ಕರ್ತವ್ಯ ಎಂದು ಕೋರ್ಟ್ ನೆನಪಿಸಿದೆ.

ಧಾರವಾಡ ಕೋರ್ಟ್ ನಲ್ಲಿ ನಡೆದ ಗಲಭೆಯ ಬಗ್ಗೆ ಹುಬ್ಬಳ್ಳಿ-ಧಾರವಾಢ ಪೊಲೀಸರು ಗಂಭೀರ ತನಿಖೆ ನಡೆಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿರುವ ಹೈಕೋರ್ಟ್, ಅಗತ್ಯ ಬಿದ್ದರೆ ಹೈಕೋರ್ಟ್ ಗೆ ಮತ್ತೆ ಮನವಿ ಸಲ್ಲಿಸುವಂತೆ ಅರ್ಜಿದಾರರಿಗೆ ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights