ಬೆಂಗಳೂರಷ್ಟೇ ಸಾಲದು, ರಾಜ್ಯಾದ್ಯಂತ ಲಾಕ್‌ಡೌನ್‌ ಮಾಡಿ: ದೇವೇಗೌಡ, ಈಶ್ವರ ಖಂಡ್ರೆ ಆಗ್ರಹ

ರಾಜ್ಯದಲ್ಲಿ ಕೊರೊನಾ ಸೋಂಕಿನ ಹಾವಳಿ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಊಹೆಗೂ ಮೀರಿದ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿ ಬೆಂಗಳೂರಿನಲ್ಲಿ ಮಂಗಳವಾರದಿಂದ ಒಂದು ವಾರಗಳ ಕಾಲ ಲಾಕ್‌ಡೌನ್‌ ಮಾಡುವುದಾಗಿ ಸರ್ಕಾರ ಘೋಷಿಸಿದೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಾತ್ರ ಲಾಕ್‌ಡೌನ್‌ ವಿಧಿಸಲಾಗುತ್ತಿದ್ದು, ಇದಷ್ಟೆ ಸಾಲದು, ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿಯೂ ಲಾಕ್‌ಡೌನ್‌ ಮಾಡಬೇಕು ಎಂದು ಜೆಡಿಎಸ್‌ ವರಿಷ್ಟ ಎಚ್‌.ಡಿ.ದೇವೇಗೌಡ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

ಕೊರೊನಾ ಸೋಂಕಿನ ತಡೆಗೆ ನಾನಾ ರೀತಿಯಲ್ಲಿ ಪ್ರಯತ್ನ ನಡೆಸುತ್ತಿರುವ ಸರ್ಕಾರ ಹಲವು ಪ್ಯಾಕೇಜ್‌ಗಳನ್ನು ಘೋಷಿಸಿದೆ. ಆ ಪ್ಯಾಕೇಜ್‌ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಹಲವಾರು ರಾಜಕೀಯ ನಾಯಕರು ಆರೋಪಿಸಿದ್ದಾರೆ. ಇದರ ಬಗ್ಗೆ ಮುಂದೆ ಬರಲಿರುವ ಅಧಿವೇಶನದಲ್ಲಿ ಚರ್ಚೆ ಮಾಡಬೇಕೇ ಹೊರತು ಕೊರೊನಾ ಸಂಕಷ್ಟದ ಕಾಲದಲ್ಲಿ ಕೆಸರೆರಚಾಟ ಮಾಡುವುದು ಒಳ್ಳೆಯದಲ್ಲ.

ಅರೋಪ ಪ್ರತ್ಯಾಪರೋಪಗಳನ್ನು ಬಿಟ್ಟು ಜನತೆಯ ಆರೋಗ್ಯದ ಕಡೆ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸರ್ಕಾರದ ಜೊತೆ ಕೈಜೋಡಿಸಿ ಕೆಲಸ ಮಾಡಬೇಕು. ಜನತೆಯ ಆರೋಗ್ಯದ ಜೊತೆ ಚೆಲ್ಲಾಟವಾಡಬಾರದು ಎಂದಿರುವ ದೇವೇಗೌಡರು ಕಾಂಗ್ರೆಸ್‌ ನಡೆಸುತ್ತಿರುವ #ಲೆಕ್ಕಕೊಡಿ ಅಭಿಯಾನದ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಕೇವಲ‌‌ ಬೆಂಗಳೂರು ಅಷ್ಟೇ ಅಲ್ಲ ಇಡೀ ರಾಜ್ಯಾದ್ಯಂತ ಕನಿಷ್ಠ 15 ದಿನಗಳ ಕಾಲ ಮತ್ತೊಮ್ಮೆ ಕಠಿಣ ಲಾಕ್‌ಡೌನ್‌ ಮಾಡಬೇಕು ಇಲ್ಲವಾದಲ್ಲಿ ಕೊರೊನಾ ನಿಯಂತ್ರಣ ಕಷ್ಟಸಾಧ್ಯ. ರಾಜ್ಯದ ಗಡಿಭಾಗಗಳಲ್ಲಿಯೂ ವಿಪರೀತ ಸೋಂಕು, ಸಾವು ಹೆಚ್ಚಾಗಿವೆ‌. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ರಾಜ್ಯಾದ್ಯಂತ ಲಾಕ್ ಡೌನ್ ವಿಧಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ  ಆಗ್ರಹಿಸಿದ್ದಾರೆ.

ಸರ್ಕಾರ ಈ ಲಾಕ್ ಡೌನ್ ಅವಧಿಯಲ್ಲಾದರು ಹಿಂದಿನ ಲೋಪದೋಷ ಸರಿಪಡಿಸಿಕೊಂಡು ಮುಂದೆ ಸಮರ್ಥವಾಗಿ ಸೋಂಕು ಎದುರಿಸಲು ಅಗತ್ಯವಿರುವ ಎಲ್ಲಾ ರೀತಿಯ ಅಗತ್ಯತೆಗಳನ್ನು ಹಾಗೂ ತಯಾರಿಗಳನ್ನು ಸಿದ್ದಪಡಿಸಿಕೊಳ್ಳಲಿ ಎಂದು ಖಂಡ್ರೆ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights