ಮತ್ತೆ ಪ್ರವಾಹ ಭೀತಿ : ಬಾಗಲಕೋಟೆ ಅಧಿಕಾರಿಗಳಿಗೆ ಮುಂಜಾಗೃತ ಕ್ರಮಕ್ಕೆ ಡಿಸಿಎಂ ಸೂಚನೆ

ಕಳೆದ ವರ್ಷ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಲೇ ಬಿಗ್ ಶಾಕ್ ನೀಡಿದ್ದ ಪ್ರವಾಹ ಈ ಬಾರಿಯೂ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗೃತ ದೃಷ್ಟಿಯಿಂದ ಅಧಿಕಾರಿಗಳು ಸನ್ನದ್ದರಾಗಬೇಕು ಎಂದು ಡಿಸಿಎಂ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚಿಸಿದ್ದಾರೆ.

ಪ್ರವಾಹ ನಿಯಂತ್ರಣ ಮತ್ತು ಕೋವಿಡ್ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಗ್ಗೆ ಎಚ್ಚರ ವಹಿಸಬೇಕು. ಮುಂದೆ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಸಿದ್ದರಾಗುವಂತೆ ಆಯಾ ತಾಲೂಕಿನ ತಹಶೀಲ್ದಾರರಿಗೆ ತಿಳಿಸಿದ್ದಾರೆ. ಕಳೆದ ಬಾರಿ ಅಧಿಕ ಮಳೆಯಿಂದಾಗಿ ರಾಜ್ಯದಲ್ಲಿ ಪ್ರವಾಹಕ್ಕೆ ಅಧಿಕ ಆಸ್ತಿ-ಪಾಸ್ತಿ ಹಾನಿಗೊಳಗಾಗಿ ಜನ ಬೀದಿ ಪಾಲಾಗಿದ್ದರು. ಆಗಷ್ಟೇ ಅಧಿಕಾರಕ್ಕೆ ಬಂದ ಬಿಜೆಪಿಗೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಈ ಬಾರಿಯೂ ಮಹಾರಾಷ್ಟ್ರದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ರಾಜ್ಯದ ಕೃಷ್ಣ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಿಂದ ಪ್ರವಾಹದ ಭೀತಿ ಎದುರಾಗಿದೆ.

ಪ್ರವಾಹ ಪರಿಸ್ಥಿತಿ ಎದುರಿಸಲು ಎನ್​ಡಿಆರ್​​ಎಫ್​, ಎಸ್‍ಡಿಆರ್​ಎಫ್​ನಲ್ಲಿ 7 ಕೋಟಿ ರೂ.ಗಳ ಅನುದಾನ ಲಭ್ಯವಿದೆ. 2 ಹೊಸ ರೆಸ್ಕೋ ಬೋಟ್‍ಗಳನ್ನು ಖರೀದಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಕಾರಜೋಳ ತಿಳಿಸಿದ್ದಾರೆ.

ಲೈಫ್ ಸೇವಿಂಗ್ ಜಾಕೆಟ್, ಟಾರ್ಚ್, ಹೆಲ್ಮೇಟ್ ಮುಂತಾದ ಅವಶ್ಯಕ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದ್ದು, ತಾಲೂಕುವಾರು ನುರಿತ ಈಜುಗಾರರ ಪಟ್ಟಿ ಮಾಡಲು ಸೂಚಿಸಿದ್ದಾರೆ. ಇದೇ ವೇಳೆ ಬೆಳೆ ಹಾನಿ ಸಮೀಕ್ಷೆಗೆ ತಂಡ ರಚನೆ, ಮನೆ ಹಾನಿ ಕುರಿತು ತಂಡ ರಚನೆ, ಮೇವು ಪೂರೈಕೆ, ಸಹಾಯವಾಣಿ ಕೇಂದ್ರ ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಸ್ಥಾಪಿಸಲು ಸೂಚಿಸಿದರು. ಜನರ ಆರೋಗ್ಯ, ಜಾನುವಾರು ಆರೋಗ್ಯಕ್ಕೆ ಅಗತ್ಯ ಔಷಧಿಗಳ ದಾಸ್ತಾನು, ಮೇವು ಹಾಗೂ ಮುಂತಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಕುಡಿಯುವ ನೀರು, ಮೂಲಭೂತ ಸೌಲಭ್ಯ, ಗಂಜಿ ಕೇಂದ್ರ, ಗೋಶಾಲೆ ಕುರಿತು ಕ್ರಮ ವಹಿಸಲು ತಿಳಿಸಿದರು.

ಒಟ್ಟಿನಲ್ಲಿ ಈ ಬಾರಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಸರ್ಕಾರ ಪ್ರವಾಹದ ಬಗ್ಗೆ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights