‘ಮರ್ಡರ್’: ಪ್ರೀತಿ ಕೊಂದ ಜಾತಿಯ ಕ್ರೌರ್ಯ ಬಿಚ್ಚಿಡುತ್ತಾರಾ ಆರ್‌ಜಿಬಿ?
ರಾಮ್ ಗೋಪಾಲ್ ವರ್ಮ ಯಾವಾಗಲೂ ಸಮಾಜದಲ್ಲಿ ತಲ್ಲಣ ಸೃಷ್ಟಿಸಿದ ಮತ್ತು ಚರ್ಚೆಯಲ್ಲಿರುವ ವಿಚಾರಗಳನ್ನು ಇಟ್ಟುಕೊಂಡು ತನ್ನ ದೃಷ್ಟಿಯಲ್ಲಿ ಸಿನೆಮಾ ಮಾಡುತ್ತಾ ಹೋಗುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ಸಿನೆಮಾ ರಂಗ ಎಲ್ಲಾ ಸುಮ್ಮನೆ ಕೂತಿದ್ದರು ನಾನೇ ಸುಮ್ಮನೆ ಕೂರಲ್ಲ ಎಂದು ಕೋರೊನಾ ಬಗ್ಗೆ ಸಿನೆಮಾ ಮಾಡಿರುವುದಾಗಿ ಒಂದು ಟ್ರೈಲರ್ ಕೂಡ ಬಿಟ್ಟು ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು. Naked ಎಂಬ ಸಿನೆಮಾ ನಿರ್ಮಾಣಮಾಡಿ ತನ್ನ ವೆಬ್‌ಸೈಟನಲ್ಲಿ ಬಿಡುಗಡೆ ಮಾಡಿ ದುಡ್ಡು ಮಾಡಿಕೊಂಡರು.
ಈಗ ಅಂತರ್ಜಾತಿ ವಿವಾಹವಾದ ಕಾರಣ ಪ್ರಣಯ್ ಎಂಬ ಯುವಕನ ಕೊಲೆಯಾಗಿತ್ತು. ಈ ಘಟನೆ ದೇಶದಲ್ಲಿ ಸಂಚಲನ ಮೂಡಿಸಿತ್ತು. ಈ ಘಟನೆಯನ್ನು ಇಟ್ಟುಕೊಂಡು ರಾಮ್ ಗೋಪಲ ವರ್ಮ ಸಿನೆಮಾ ಮಾಡುವುದಾಗಿ ತನ್ನ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಸಿನೆಮಾಗೆ ಮರ್ಡರ್ ಎಂದು ಹೆಸರು ಇಟ್ಟಿದ್ದಾರೆ. ಈ ಸಿನೆಮಾವನ್ನು ವರ್ಮಾ ತಂಡದ ಆನಂದ್ ಚಂದ್ರ ನಿರ್ದೇಶಿಸಲಿದ್ದಾರೆ.

ತೆಲಂಗಾಣದ ಮಿರ್ಯಾಲಗೂಡದಲ್ಲಿ ಅಮೃತ ಮತ್ತು ಪ್ರಣಯ್ ಎಂಬ ಯುವ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ಹುಡುಗಿ ಮೇಲ್ಜಾತಿ ಆದ ಕಾರಣ ಆಕೆಯ ತಂದೆ ಈ ಮದುವೆಗೆ ಒಪ್ಪಲಿಲ್ಲ. ಪೋಷಕರನ್ನು ಹೆದುರಿಸಿ ಪ್ರಣಯ್‌ನನ್ನು ಮದುವೆಯಾಗಿದ್ದಳು. ಪ್ರಣಯ್ ಕೆಳಜಾತಿ ಎಂಬ ಕಾರಣಕ್ಕೆ ತಂದೆ ಮಾರುತಿರಾವ್ ಸುಫಾರಿ ನೀಡಿ ಪ್ರಣಯ್‌ನ ಕೊಲೆ ಮಾಡಿಸಿದ್ದ ಈ ಘಟನೆ ದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಗಂಡನ ಸಾವಿನಿಂದ ಧೃತಿಗೆಡದ ಅಮೃತಾಳು ತಂದೆ ಮತ್ತು ಕೊಲೆಗಡುಕರ ವಿರುಧ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುವ ಪಣ ತೊಟ್ಟಿದ್ದಳು. ಆದರೆ ಇತ್ತಿಚಿಗೆ ಮಾರುತಿರಾವ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ತಂದೆಗೆ ಅಂತಿಮ ನಮನ ಸಲ್ಲಿಸಲು ಸಹ ಅಮೃತಾಳಿಗೆ ಕುಟುಂಬಸ್ಥರು ಬಿಡಲಿಲ್ಲ.
ರಾಮ್ ಗೋಪಾಲ್ ವರ್ಮ, ತಂದೆ ಮಗಳ ಪ್ರೀತಿಯನ್ನು ಇಟ್ಟುಕೊಂಡು ಸಿನೆಮಾ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ನಿಜವಾಗಲೂ ಇಲ್ಲಿ ಪ್ರಣಯ್ ಕೊಲೆಗೆ ಕಾರಣವಾಗಿರುವುದು ಜಾತಿಯಾಗಿದೆ. ದೇಶದ ದೊಡ್ಡ ಸಮಸ್ಯೆಗಳಲ್ಲಿ ಈ ಜಾತಿ ಸಮಸ್ಯೆಯು ಪ್ರಮುಖವಾಗಿದೆ. ಜಾತಿಗಡುಕ ಮನಸ್ಥಿತಿಯ ಈ ಸಮಾಜದಲ್ಲಿ ಜಾತಿ ದೌರ್ಜನ್ಯವನ್ನು ಬಿಚ್ಚಿಡುವ ಸಿನಿಮಾ ಇದಾಗಿರಲಿದೆಯಾ ಕಾದು ನೋಡಬೇಕಿದೆ.

