ರಾಮನ ಅಯೋಧ್ಯೆ ನೇಪಾಳದಲ್ಲಿದೆ; ಶ್ರೀರಾಮ ನೇಪಾಳಿಯವ: ನೇಪಾಳ ಪ್ರಧಾನಿ ಕೆ.ಪಿ. ಒಲಿ

ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ, ಭಗವಾನ್ ರಾಮ ನೇಪಾಳಿ ಎಂದು ಹೇಳುವ ಮೂಲಕ ನೇಪಾಳದ ಪ್ರಧಾನಿ ಕೆ.ಪಿ ಶರ್ಮಾ ಒಲಿ ವಿವಾದ ಹುಟ್ಟುಹಾಕಿದ್ದಾರೆ.

ಸೋಮವಾರ ಮಾತನಾಡಿದ ಅವರು ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ, ಭಾರತದಲ್ಲಿ ಅಲ್ಲ. ಭಗವಾನ್ ರಾಮ್ ದಕ್ಷಿಣ ನೇಪಾಳದ ಥೋರಿಯಲ್ಲಿ ಜನಿಸಿದರು ಎಂದು ಹೇಳಿದ್ದಾರೆ.

ಕಠ್ಮಂಡುವಿನ ಪ್ರಧಾನ ಮಂತ್ರಿಯ ನಿವಾಸದಲ್ಲಿ ನೇಪಾಳದ ಕವಿ ಭಾನುಭಕ್ತ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಒಲಿ, ನೇಪಾಳವು “ಸಾಂಸ್ಕೃತಿಕ ಅತಿಕ್ರಮಣಕ್ಕೆ ಬಲಿಯಾಗಿದೆ ಮತ್ತು ಅದರ ಇತಿಹಾಸವನ್ನು ಬುದ್ಧಿವಂತಿಕೆಯಿಂದ ಬದಲಾಯಿಸಲಾಗಿದೆ” ಎಂದು ಹೇಳಿದರು.

ಭಾನುಭಕ್ತನು 1814 ರಲ್ಲಿ ಪಶ್ಚಿಮ ನೇಪಾಳದ ತನ್ಹು ಎಂಬಲ್ಲಿ ಜನಿಸಿದರು. ವಾಲ್ಮೀಕಿಯ ರಾಮಾಯಣವನ್ನು ನೇಪಾಳಿ ಭಾಷೆಗೆ ಅನುವಾದಿಸಿದ ಕೀರ್ತಿಗೆ ಪಾತ್ರನಾಗಿದ್ದಾರೆ. ಅವರು 1868 ರಲ್ಲಿ ನಿಧನರಾದರು.

“ನಿಜವಾದ ಅಯೋಧ್ಯೆ ಬಿರ್ಗುಂಜ್ ನ ಪಶ್ಚಿಮದಲ್ಲಿರುವ ಥೋರಿಯಲ್ಲಿದ್ದರೂ, ಭಾರತವು ತನ್ನ ಸ್ಥಳವನ್ನು ಭಗವಾನ್ ರಾಮ ಅವರ ಜನ್ಮಸ್ಥಳವೆಂದು ಹೇಳಿಕೊಂಡಿದೆ” ಎಂದು ಒಲಿ ಹೇಳಿದರು.

“ಬಿರ್ಗುಂಜ್ ಬಳಿಯ ಥೋರಿ ಎಂಬ ಸ್ಥಳವು ಭಗವಾನ್ ರಾಮ್ ಜನಿಸಿದ ನಿಜವಾದ ಅಯೋಧ್ಯೆ. ಭಾರತದಲ್ಲಿ ಅಯೋಧ್ಯೆಯ ಬಗ್ಗೆ ದೊಡ್ಡ ವಿವಾದವಿದೆ. ಆದರೆ, ನಮ್ಮ ಅಯೋಧ್ಯೆಯಲ್ಲಿ ಯಾವುದೇ ವಿವಾದಗಳಿಲ್ಲ” ಎಂದು ಪ್ರಧಾನಿ ಒಲಿ ಹೇಳಿದರೆಂದು ಪತ್ರಿಕಾ ಸಲಹೆಗಾರರಾದ ಸೂರ್ಯ ಥಾಪಾ ಹೇಳಿದ್ದಾರೆ.

“ವಾಲ್ಮೀಕಿ ಆಶ್ರಮವೂ ನೇಪಾಳದಲ್ಲಿದೆ. ಮಗನನ್ನು ಪಡೆಯಲು ರಾಜ ದಶರಥ್ ವಿಧಿಗಳನ್ನು ನೆರವೇರಿಸಿದ ಪವಿತ್ರ ಸ್ಥಳ ನೇಪಾಳದಲ್ಲಿರುವ ರಿಡಿಯಲ್ಲಿದೆ” ಎಂದು ಅವರು ಹೇಳಿದರು.

ದಶರಥ್ ನೇಪಾಳದ ಆಡಳಿತಗಾರನಾಗಿದ್ದರಿಂದ, ಅವನ ಮಗ ರಾಮ್ ಕೂಡ ನೇಪಾಳದಲ್ಲಿ ಜನಿಸಿದ್ದು ಸಹಜ ಎಂದು ಒಲಿ ವಾದಿಸಿ, ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ ಎಂದು ಹೇಳಿದ್ದಾರೆ.

ಅನೇಕ ವೈಜ್ಞಾನಿಕ ಆವಿಷ್ಕಾರಗಳು ಮತ್ತು ಜ್ಞಾನವು ನೇಪಾಳದಲ್ಲಿ ಹುಟ್ಟಿಕೊಂಡಿತು, ಆದರೆ ದುರದೃಷ್ಟವಶಾತ್ ಅಂತಹ ಶ್ರೀಮಂತ ಸಂಪ್ರದಾಯವನ್ನು ನಂತರ ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದೂ ಹೇಳಿದ್ದಾರೆ.

ಒಲಿ ಅವರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಬಿಜಯ್ ಸೋಂಕರ್ ಶಾಸ್ತ್ರಿ, ಭಾರತದಲ್ಲಿಯೂ ಸಹ ಎಡಪಕ್ಷಗಳು ಜನರ ನಂಬಿಕೆಯೊಂದಿಗೆ ಆಟ ಆಡಿದವು. ನೇಪಾಳದ ಕಮ್ಯುನಿಸ್ಟರನ್ನು ಅಲ್ಲಿನ ಜನಸಾಮಾನ್ಯರು ಇಲ್ಲಿನ ರೀತಿಯಲ್ಲಿಯೇ ತಿರಸ್ಕರಿಸುತ್ತಾರೆ ಎಂದು ಹೇಳಿದ್ದಾರೆ. “ಭಗವಾನ್ ರಾಮ ನಮಗೆ ನಂಬಿಕೆಯ ವಿಷಯ. ಇದರೊಂದಿಗೆ ಆಟವಾಡಲು ಜನರು ಯಾರಿಗೂ ಅವಕಾಶ ನೀಡುವುದಿಲ್ಲ. ಅದು  ನೇಪಾಳದ ಪ್ರಧಾನ ಮಂತ್ರಿಯಾಗಲಿ ಅಥವಾ ಯಾರೇ ಆಗಲಿ” ಎಂದು ಅವರು ನವದೆಹಲಿಯಲ್ಲಿ ಹೇಳಿದ್ದಾರೆ.

ಒಲಿ ಆರೋಪಗಳನ್ನು ನೇಪಾಳದ ಮಾಜಿ ಪ್ರಧಾನಿ ‘ಪ್ರಚಂಡ’ ಸೇರಿದಂತೆ ಹಿರಿಯ ಎನ್‌ಸಿಪಿ ನಾಯಕರು ಟೀಕಿಸಿದ್ದಾರೆ. ಅವರ ಇತ್ತೀಚಿನ ಭಾರತ ವಿರೋಧಿ ಹೇಳಿಕೆಗಳು “ರಾಜಕೀಯವಾಗಿ ಸರಿಯಾಗಿಲ್ಲ” ಎಂದು ವಿರೋಧ ಪಕ್ಷಗಳು ಹೇಳಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೇ 8 ರಂದು ಉತ್ತರಾಖಂಡದ ಧಾರ್ಚುಲಾದೊಂದಿಗೆ ಲಿಪುಲೆಖ್ ಪಾಸ್ ಅನ್ನು ಸಂಪರ್ಕಿಸುವ 80 ಕಿ.ಮೀ ಉದ್ದದ ಕಾರ್ಯತಂತ್ರದ ನಿರ್ಣಾಯಕ ರಸ್ತೆಯನ್ನು ಉದ್ಘಾಟಿಸಿದ ನಂತರ ಭಾರತ-ನೇಪಾಳ ದ್ವಿಪಕ್ಷೀಯ ಸಂಬಂಧಗಳು ಬಿಗಡಾಯಿಸಿವೆ.


ಇದನ್ನೂ ಓದಿಶ್ರೀರಾಮನ ವಂಶಸ್ಥರಿಗೆ ಅಯೋಧ್ಯೆ ರಾಮಮಂದಿರದ ಮಾಹಿತಿ ನೀಡಲು ನಿರಾಕರಿಸಿದ ಅಮಿತ್‌‌ ಶಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights