ಕಾಂಗ್ರೆಸ್‌ ಸರ್ಕಾರಕ್ಕೆ ಬಿಟಿಪಿ ಶಾಸಕರ ಬೆಂಬಲ; ಮುಂದಿನವಾರ ಗೆಹ್ಲೋಟ್ ವಿಶ್ವಾಸಮತ ಯಾಚನೆ?

ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನಲ್ಲಿ ಸರ್ಕಾರ ಬೀಳುವುದೋ, ಉಳಿಯುವುದೋ ಎಂಬ ಗೊಂದಲದ ನಡುವೆ, ಬಿಟಿಪಿ ಪಕ್ಷದ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದ್ದು, ಸದನದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮುಂದಿನ ವಾರ ವಿಧಾನಸಭೆ ಅಧಿವೇಶನ ಕರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡ ಪ್ರಾದೇಶಿಕ ಪಕ್ಷ ಬಿಟಿಪಿ (ಭಾರತೀಯ ಟ್ರೈಬಲ್‌ ಪಕ್ಷ)ಯ ಇಬ್ಬರು ಶಾಸಕರು ಆಡಳಿತ ಸರ್ಕಾರವನ್ನು ಬೆಂಬಲಿಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ಸಿಎಂ ಗೆಹ್ಲೋಟ್ ರಾಜ್ಯಪಾಲ ಕಾಳ್‌ರಾಜ್ ಮಿಶ್ರಾ ಅವರನ್ನು ಭೇಟಿಯಾಗಿದ್ದಾರೆ. ಮುಖ್ಯಮಂತ್ರಿಗಳು ಇದನ್ನು ಸೌಜನ್ಯ ಸಭೆ ಎಂದು ಕರೆದರೂ, ಮುಂದಿನ ವಾರ ವಿಧಾನಸಭೆ ಅಧಿವೇಶನ ಕರೆಯಲು ಇಚ್ಛಿಸಿರುವುದಾಗಿ ಅವರು ರಾಜ್ಯಪಾಲರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಭಾರತೀಯ ಟ್ರೈಬಲ್ ಪಕ್ಷ(ಬಿಟಿಪಿ)ದ ಇಬ್ಬರು ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ, ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಿಟಿಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗುಜರಾತ್ ಶಾಸಕ ಮಹೇಶ್ ವಾಸವ ಅವರು ತಮ್ಮ ಪಕ್ಷದ  ಇಬ್ಬರು ಶಾಸಕರಾದ ರಾಮಪ್ರಸಾದ್ ದಿಂಡೋರ್ ಮತ್ತು ರಾಜಕುಮಾರ್ ರೋಟ್ ಅವರಿಗೆ ವಿಪ್ ನೀಡಿ, ವಿಶ್ವಾಸಮತಯಾಚನೆ ವೇಳೆ ಗೈರು ಆಗುವಂತೆ ಮತ್ತು ಯಾರಿಗೂ ಬೆಂಬಲ ನೀಡಬೇಡಿ ಎಂದು ಸೂಚಿಸಲಾಗಿತ್ತು.

ಆದರೆ, ಬಿಟಿಪಿಯ ವಿಪ್‌ ಉಲ್ಲಂಘಿಸಿರುವ ಶಾಸಕರು ಗೊಹ್ಲೋಟ್‌ಗೆ ಬೆಂಬಲ ನೀಡುವುದಾಗಿ ಬೆಂಬಲ ಪತ್ರ ನೀಡಿದ್ದಾರೆ.

ಸ್ಪೀಕರ್ ಕಳುಹಿಸಿದ ಅನರ್ಹತೆ ನೋಟಿಸ್‌ ಅನ್ನು ಸಚಿನ್ ಪೈಲಟ್ ಬಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಕಾರಣ ಕೋರ್ಟ್ ನಾಲ್ಕು ದಿನಗಳ ರಕ್ಷಣೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದ ನಂತರವೇ ಕಾಂಗ್ರೆಸ್ ಈ ಬಗ್ಗೆ ವಿಚಾರಣೆ ನಡೆಸಲಿದೆ ಎನ್ನಲಾಗಿದೆ.

ರಾಜಸ್ಥಾನದಲ್ಲಿ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ ನಂತರ ಸಚಿನ್ ಪೈಲಟ್ ತಮ್ಮ ಮುಂದಿನ ನಡೆಗಳ ಕುರಿತು ಮಾತನಾಡಿಲ್ಲ. ಈ ಕುರಿತು ಅವರು ಕರೆದಿದ್ದ ಪತ್ರಿಕಾಗೊಷ್ಠಿಯನ್ನು ಸಹ ರದ್ದುಗೊಳಿಸಿದ್ದಾರೆ.

ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ಸೇರಿ ಸಂಚು ರೂಪಿಸಿದ ಆರೋಪದ ಮೇಲೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಇಬ್ಬರು ಬಂಡಾಯ ಶಾಸಕರಾದ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಅವರನ್ನು ಕಾಂಗ್ರೆಸ್ ಶುಕ್ರವಾರ ಅಮಾನತುಗೊಳಿಸಿದೆ. ಶಾಸಕರೊಂದಿಗೆ ಮಾತನಾಡಿರುವ ಆಡಿಯೋ ಕ್ಲಿಪ್‌ನಲ್ಲಿರುವ ಧ್ವನಿ ನನ್ನದಲ್ಲ ಮತ್ತು ಈ ಕುರಿತು ಯಾವುದೇ ತನಿಖೆಗೆ ಸಿದ್ಧ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಅಕ್ರಮ ಫೋನ್‌ ಕದ್ದಾಲಿಕೆ ನಡೆದಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ರಾಜಸ್ಥಾನದ ಮುಖ್ಯ ಕಾರ್ಯದರ್ಶಿಯಿಂದ ವರದಿ ಕೋರಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.


ಇದನ್ನೂ ಓದಿರಾಜಸ್ಥಾನದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿ: ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಆಗ್ರಹ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights