ಕೊರೊನಾ ಲಸಿಕೆ COVAXIN ಮಾನವ ಪ್ರಯೋಗ ಆರಂಭ; ಸರ್ಕಾರದ ಆತುರ ಅಪಾಯಕ್ಕೆ ಕಾರಣಕ್ಕೆ ಎಂದ ವೈದ್ಯರು

ಭಾರತದಲ್ಲಿ ತಯಾರಾದ ಎರಡು COVID-19 ಲಸಿಕೆಳಾದ COVAXIN ಮತ್ತು ZyCov-D ಗಳನ್ನು ಮಾನವ ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

“ಆರು ಭಾರತೀಯ ಕಂಪನಿಗಳು COVID-19 ಲಸಿಕೆಗಾಗಿ ಕೆಲಸ ಮಾಡುತ್ತಿವೆ. ಅವುಗಳಲ್ಲಿ ಎರಡು ಭಾರತೀಯ ಲಸಿಕೆಗಳಾದ COVAXIN ಮತ್ತು ZyCov-D ಜೊತೆಗೆಗಳನ್ನು ಮಾನವ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ. ಪ್ರಯೋಗಕ್ಕಾಗಿ ಹಲವು ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾಗಿರುವ ಆಸ್ಪತ್ರೆಗಳ ಪಟ್ಟಿಯಲ್ಲಿ ಕರ್ನಾಟಕದ ಬೆಳಗಾವಿಯ ಜೀವನ್‌ ರೇಖಾ ಆಸ್ಪತ್ರೆಯು ಒಂದಾಗಿದೆ.

ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಲಾಗಿರುವ ವ್ಯಾಕ್ಸಿನ್ ಕ್ಯಾಂಡಿಟೇಟ್‌ನ (ಸಂಭಾವ್ಯ ಲಸಿಕೆ) ಕ್ಲಿನಿಕಲ್‌ ಟ್ರಯಲ್‌ಗೆ 4ರಿಂದ 5 ತಿಂಗಳು ಬೇಕಾಗಬಹುದು ಎಂದು ಬೆಳಗಾವಿಯ ಜೀವನ್‌ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಭಾತೆ ತಿಳಿಸಿದರು.

‘ಈ ಪ್ರಕ್ರಿಯೆಗೆ ನಮ್ಮ ಆಸ್ಪತ್ರೆಯು ಆಯ್ಕೆಯಾಗಿರುವ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌) ಈಚೆಗೆ ಅಧಿಕೃತವಾಗಿ ಪತ್ರ ಕಳುಹಿಸಿದೆ. ಹೈದರಾಬಾದ್ ಮೂಲದ ಭಾರತ್‌ ಬಯೊಟೆಕ್‌ ಸಹಯೋಗದಲ್ಲಿ ಐಸಿಎಂಆರ್‌ ‘ಕೋವ್ಯಾಕ್ಸಿನ್’ ಲಸಿಕೆ ಅಭಿವೃದ್ಧಿಪಡಿಸಿದ್ದು, ಒಟ್ಟು 2 ಹಂತಗಳಲ್ಲಿ ನಡೆಯುವ ಕ್ಲಿನಿಕಲ್‌ ಟ್ರಯಲ್‌ಗೆ 150ರಿಂದ 200 ಮಂದಿ ಆರೋಗ್ಯವಂತ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಯಾವುದೇ ವ್ಯಾಕ್ಸಿನ್‌ನ ಕ್ಲಿನಿಕಲ್‌ ಟ್ರಯಲ್‌ ಅನ್ನು ಗಡುವಿನೊಳಗೆ ಪೂರ್ಣಗೊಳಿಸಲು ಆಗುವುದಿಲ್ಲ’ ಎಂದು  ಅವರು ಮಾಹಿತಿ ನೀಡಿದ್ದಾರೆ.

‘ಮುಂದಿನ ವಾರ ನಮಗೆ ಲಸಿಕೆ ಪೂರೈಕೆ ಆಗಬಹುದು ಎಂದು ನಿರೀಕ್ಷಿಸುತ್ತಿದ್ದೇವೆ. ಬಂದ ನಂತರ ಪ್ರಕ್ರಿಯೆ ಆರಂಭಿಸಲಾಗುವುದು. ಈ ವಿಷಯದಲ್ಲಿ ಆತುರ ಮಾಡಲಾಗುವುದಿಲ್ಲ. ವೈದ್ಯಕೀಯ ಶಿಷ್ಟಾಚಾರ ಹಾಗೂ ಮಾರ್ಗಸೂಚಿಗಳ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ. ಮೊದಲು ಆರೋಗ್ಯವಂತ ವ್ಯಕ್ತಿಗಳನ್ನು ಗುರುತಿಸಬೇಕು. ಅವರನ್ನು ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಡಿಸಿ, ನೆಗೆಟಿವ್ ಇರುವುದನ್ನು ದೃಢಪಡಿಸಿಕೊಳ್ಳಬೇಕು. ಬಳಿಕ ಅವರ ಮೇಲೆ ವ್ಯಾಕ್ಸಿನ್‌ ಬಳಸಿ ಕ್ಲಿನಿಕಲ್‌ ಟ್ರಯಲ್ ಮಾಡಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆಯಗಳನ್ನು ಆದಷ್ಟು ತ್ವರಿತವಾಗಿ ನಡೆಸಲು ಪ್ರಯತ್ನಿಸುತ್ತೇವೆ. ಡೆಡ್‌ಲೈನ್‌ ಆಧರಿಸಿ ಮಾಡುವ ಕೆಲಸವಿದಲ್ಲ. ಐಸಿಎಂಆರ್‌ನಿಂದ ನಮಗೆ ಯಾವುದೇ ಗಡುವು ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪಾಲಿಸಬೇಕಾದ ಶಿಷ್ಟಾಚಾರ ಮತ್ತು ಮಾರ್ಗಸೂಚಿಗಳ ಬಗ್ಗೆ ಚರ್ಚಿಸಲು ಐಸಿಎಂಆರ್‌ ಅಧಿಕಾರಿಗಳೊಂದಿಗೆ ಮತ್ತೊಂದಷ್ಟು ಚರ್ಚೆ ನಡೆಸಬೇಕಾಗಿದೆ’ ಎಂದರು.

‘ಪರೀಕ್ಷೆಗೆ ಆಯ್ಕೆಯಾಗುವ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯ ಇರುವುದಿಲ್ಲ. ಆದರೆ, ಅವರಿಗೆ ಲಸಿಕೆ ನೀಡಿದ ನಂತರ ನಿರಂತರವಾಗಿ ನಿಗಾ ವಹಿಸಲಾಗುವುದು. ಲಸಿಕೆ ನೀಡಿದಂದೇ ರಕ್ತದ ಮಾದರಿ ಸಂಗ್ರಹಿಸಲಾಗುವುದು. ಕೋವಿಡ್-19 ಸೋಂಕಿತರನ್ನು ಈ ಪ್ರಕ್ರಿಯೆಗೆ ಒಳಪಡಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರವು ಆಗಸ್ಟ್‌ 15 ರೊಳಗೆ ಕೊರೊನಾಗೆ ಲಸಿಕೆಯನ್ನು ಬಿಡುಗಡೆ ಮಾಡಬೇಕು ಎಂದು ವೈದ್ಯಕೀಯ ಸಂಶೋಧಕರ ಮೇಲೆ ಒತ್ತಡ ಹೇರುತ್ತಿದೆ. ಇದು ಉತ್ತಮ ನಡೆಯಲ್ಲ, ಯಾವುದೇ ಔಷಧಿಯಲ್ಲಿ ಆತುರಕ್ಕೆ ಅಭಿವೃದ್ಧಿಪಡಿಸಲಾಗುವುದಿಲ್ಲ. ಆತುರವು ಅಪಾಯಕ್ಕೆ ಕಾರಣವಾಗುತ್ತದೆ. ಕೊರೊನಾ ಲಸಿಕೆ ಯಶಸ್ವಿಯಾಗಿ ದೊರೆಯಬೇಕಾದರೆ ಇನ್ನೂ ಹಲವು ತಿಂಗಳು ಕಾಯಬೇಕು ಎಂದು ವೈದ್ಯಕೀಯ ತಜ್ಷರು ಅಭಿಪ್ರಾಯ ಪಟ್ಟಿದ್ದಾರೆ.


ಇದನ್ನೂ ಓದಿ: ಕೊರೊನಾ ಲಸಿಕೆ ಸಂಶೋಧಿಸಿದ ಅಸ್ಟ್ರಾಜೆನೆಕಾ; ಪ್ರಯೋಗ ಯಶಸ್ವಿಯಾದರೆ ಕೊರೊನಾಗೆ ಮದ್ದು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights