ಕೊರೊನಾ ಸೋಂಕಿತರ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಡಿಕೆ ಸುರೇಶ್!

ಕೊರೊನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್, ಸೋಂಕಿತರ ಕುರಿತು ಜನರಲ್ಲಿರುವ ಅಪನಂಬಿಕೆ ಮತ್ತು ಭಯವನ್ನು ಹೋಗಲಾಡಿಸಲು ಮುಂದಾಗಿದ್ದಾರೆ.

ಕನಕಪುರದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ 73 ವರ್ಷದ ವ್ಯಕ್ತಿಯ  ಅಂತ್ಯಕ್ರಿಯೆಯಲ್ಲಿ ಡಿಕೆ ಸುರೇಶ್ ಅವರು ಇಂದು (ಭಾನುವಾರ) ಪಾಲ್ಗೊಂಡಿದ್ದಾರೆ.

ಮೃತರ ಅಂತ್ಯಸಂಸ್ಕಾರವನ್ನು ಎಲ್ಲಾ ವಿಧಿ-ವಿಧಾನಗಳ ಪ್ರಕಾರ ಗೌರವಯುತವಾಗಿ ನೆರವೇರಿಸಲು ಅವಕಾಶ ಮಾಡಿಕೊಟ್ಟಿದ್ದು,
ಅಂತ್ಯ ಸಂಸ್ಕಾರದಲ್ಲಿ ಪ್ರತಿಯೊಬ್ಬರೂ ಅಗತ್ಯ ಸುರಕ್ಷಾ ಪರಿಕರಗಳಾದ ಪಿಪಿಇ ಕಿಟ್ ಬಳಸಿ ಪಾಲ್ಗೊಂಡಿದ್ದರು.

ನಿನ್ನೆ (ಶನಿವಾರ) ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರನ್ನು ಗೌರವಯುತವಾಗಿ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಿ, ಜನರಲ್ಲಿ ಭಯ ಹುಟ್ಟಿಸಬೇಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದ ಡಿಕೆ ಸುರೇಶ್, ಇಂದು ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.

‘ಕೊರೊನ ಸೋಂಕಿನಿಂದ ಮರಣ ಹೊಂದಿದ ವ್ಯಕ್ತಿಗಳಿಂದ ಸಮಾಜಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಈ ವಿಷಯದಲ್ಲಿ ಬರೀ ಊಹಾಪೋಹಗಳನ್ನು ಹಬ್ಬಿಸಲಾಗಿದೆ. ಹೀಗಾಗಿ ಶವ ಸಂಸ್ಕಾರಕ್ಕೆ ಪ್ರತಿರೋಧ ಒಡ್ಡುವುದಾಗಲಿ, ಅಡ್ಡಿಪಡಿಸುವುದಾಗಲಿ ನಮ್ಮ ಸಂಸ್ಕೃತಿಯೂ ಅಲ್ಲ, ಸದಾಚಾರವೂ ಅಲ್ಲ. ಆದ್ದರಿಂದ ಆಯಾ ಪ್ರದೇಶಗಳಲ್ಲಿ ಕೋವಿಡ್ಚ ನಿಂದ ಮರಣ ಹೊಂದಿದ ವ್ಯಕ್ತಿಗಳ ಬಂಧುಗಳು ಹಾಗೂ ಗ್ರಾಮಸ್ಥರು ನಿರಾತಂಕವಾಗಿ, ಮೃತ ವ್ಯಕ್ತಿಗೆ ಗೌರವಯುತ ಅಂತಿಮ ಸಂಸ್ಕಾರ ನೆರವೇರಲು ಅವಕಾಶ ಮಾಡಿಕೊಡಬೇಕು. ಆ ಮೂಲಕ ಮಾನವೀಯತೆ ಮತ್ತು ಸೌಹಾರ್ದತೆ ಮೆರೆಯಬೇಕು’ ಎಂದು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದರು.

ಸಾವನ್ನಪ್ಪಿದ ಸೋಂಕಿತ ವ್ಯಕ್ತಿಯ ಅಂತ್ಯ ಸಂಸ್ಕಾರದ ನಂತರ ಮಾತನಾಡಿದ ಸುರೇಶ್ ಅವರು, ‘ನರಸಿಂಹ ಶೆಟ್ಟಿಯವರು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಜೀವ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ವರ್ಗದವರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಮತ್ತು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights