ಖಾಸಿಂ ಸುಲೇಮಾನಿ ಹತ್ಯೆ ಪ್ರಕರಣ; ಟ್ರಂಪ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದ ಇರಾನ್!

ಬಾಗ್ದಾದ್ನಲ್ಲಿ ರಾಕೆಟ್ ದಾಳಿ ನಡೆಸುವ ಮೂಲಕ ಇರಾನ್ ಮೇಜರ್ ಜನರಲ್ ಖಾಸಿಂ ಸುಲೇಮಾನಿಯನ್ನು ಅಮೆರಿಕ ಹತ್ಯೆ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇರಾನ್ ಅಪಸ್ವರ ಎತ್ತುತ್ತಲೇ ಬರುತ್ತಿದೆ. ವಿಚಿತ್ರ ಎಂದರೆ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ವಿರುದ್ಧ ಇರಾನ್ ಅರೆಸ್ಟ್ ವಾರೆಂಟ್ ಹೊರಡಿಸಿದೆ!

ಜನವರಿ 3ರಂದು ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ರಾಕೆಟ್ ದಾಳಿ ನಡೆಸಿತ್ತು. ಈ ವೇಳೆ ಖಾಸಿಂ ಸುಲೇಮಾನಿ ಮೃತಪಟ್ಟಿದ್ದ. ಖಾಸಿಂನನ್ನು ಅಮೆರಿಕ ತನ್ನ ವೈರಿ ಎಂದೇ ಪರಿಗಣಿಸಿತ್ತು. ಈತ ಇರಾನ್ ಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ. ಅಲ್ಲದೆ, ಇರಾನ್ ಗುಪ್ತಚರ ಇಲಾಖೆಯ ಮುಖ್ಯಸ್ಥ ಕೂಡ ಹೌದು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಕತ್ತಿ ಮಸೆಯಲು ಆರಂಭಿಸಿತ್ತು. ಈಗ ಇರಾನ್ ಟ್ರಂಪ್ ಬಂಧನಕ್ಕೆ ಮುಂದಾಗಿದೆ.

ಈ ಬಗ್ಗೆ ಮಾತನಾಡಿರುವ ಇರಾನ್ ಅಧಿಕಾರಿಗಳು, 3 ರಾಕೆಟ್ ದಾಳಿ ನಡೆಸಿ ಸುಲೇಮಾನಿಯನ್ನು ಹತ್ಯೆ ಮಾಡಲಾಗಿದೆ. ಟ್ರಂಪ್ ಸೇರಿ 30 ಅಧಿಕಾರಿಗಳು ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕೊಲೆ ಮತ್ತು ಭಯೋತ್ಪಾದನೆ ಆರೋಪ ಹೊರಿಸಲಾಗಿದೆ. ಅವರ ಬಂಧನಕ್ಕೆ ಇಂಟರ್ಪೋಲ್ ಅಧಿಕಾರಿಗಳ ಸಹಾಯ ಕೋರಲಾಗಿದೆ ಎಂದು ತಿಳಿಸಿದ್ದಾರೆ.

ಟ್ರಂಪ್ ಅವರನ್ನು ನಾವು ಬಂಧಿಸದೇ ಬಿಡುವುದಿಲ್ಲ. ಒಂದೊಮ್ಮೆ ಅಧ್ಯಕ್ಷೀಯ ಅವಧಿ ಮುಗಿದರೂ ಅವರನ್ನು ಬಂಧಿಸಿಯೇ ತೀರುತ್ತೇವೆ ಎಂದು ಇರಾನ್ ಹೇಳಿದೆ. ಈ ಬಗ್ಗೆ ಇಂಟರ್ಪೋಲ್ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights