ಸಧ್ಯಕ್ಕೆ ನಿಲ್ಲದು ಕೊರೊನಾ ಸಂಕಷ್ಟ; ಕಾಂಟ್ಯಾಕ್ಟ್ ಟ್ರೇಸಿಂಗ್ ಅಸಾಧ್ಯವೆಂದು ರಾಷ್ಟ್ರಗಳು ಜನರನ್ನು ಯಾಮಾರಿಸುತ್ತಿವೆ: WHO
ಕೊರೊನಾ ವೈರಸ್ ಹಾವಳಿ ಸದ್ಯಕ್ಕೆ ನಿಲ್ಲುವುದಿಲ್ಲ. ಕೊರೊನಾ ಸಂಕಷ್ಟ ಮತ್ತು ಅದನ್ನೆದುರಿಸುವ ಬಿಕ್ಕಟ್ಟು ಇನ್ನೂ ಹೆಚ್ಚಾಗಲಿದೆ. ಅತ್ಯಂತ ಸಂಕಷ್ಟದ ಪರಿಸ್ಥಿತಿಯನ್ನು ವಿವಿಧ ರಾಷ್ಟ್ರಗಳು ಎದುರಿಸಲಿವೆ. ಈ ಸಂಕಷ್ಟದಿಂದ ಹೊರಬರುವ ಕಾಲ ಬಹಳ ದೂರ ಉಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ( WHO ) ತಿಳಿಸಿದೆ.
ಕೊರೊನಾ ಸೋಂಕು ಗಮನಕ್ಕೆ ಬಂದು ಇವತ್ತಿಗೆ ಆರು ತಿಂಗಳಾಗಿದೆ. ಒಂದು ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. 5 ಲಕ್ಷದಷ್ಟು ಜನರನ್ನು ಬಲಿಪಡೆದುಕೊಂಡಿದೆ. ಅಮೆರಿಕ ಖಂಡಗಳಲ್ಲಿ ಸೋಂಕು ಇನ್ನೂ ಹೆಚ್ಚಾಗುತ್ತಲೇ ಇದೆ. ಇದು ಈಗಲೇ ನಿಯಂತ್ರಣಕ್ಕೆ ಬರುವ ಸಾಧ್ಯತೆ ಕಾಣುತ್ತಿಲ್ಲ ಎಂದು ಡಬ್ಲ್ಯೂಎಚ್ಒ ಮಹಾ ನಿರ್ದೇಶಕ ಟೆಡ್ರೋಸ್ ಅಧಾನೋಮ್ ಘೆಬ್ರೆಯೆಸೂಸ್ ಹೇಳಿದ್ದಾರೆ.
ಕೊರೋನಾ ವೈರಸ್ ಸೋಂಕು ಹರಡದಂತೆ ನಿಯಂತ್ರಿಸಲು ಕಾಂಟ್ಯಾಕ್ಟ್ ಟ್ರೇಸಿಂಗ್ ಬಹಳ ಮುಖ್ಯ ಕ್ರಮ. ಅಂದರೆ, ಸೋಂಕು ತಗುಲಿದವರ ಟ್ರಾವೆಲ್ ಹಿಸ್ಟರಿ ಸೇರಿದಂತೆ ಅವರು ಯಾರ್ಯಾರನ್ನ ಸಂಪರ್ಕಿಸಿದ್ದರು ಇತ್ಯಾದಿಯ ಜಾಡು ಹಿಡಿದು ಅವರನ್ನೆಲ್ಲಾ ಪತ್ತೆ ಹಚ್ಚುವ ಕಾರ್ಯವೇ ಕಾಂಟ್ಯಾಕ್ಟ್ ಟ್ರೇಸಿಂಗ್. ಆದರೆ, ಈಗ ಸೋಂಕು ಬಹಳ ವ್ಯಾಪಕವಾಗಿರುವುದರಿಂದ ಹಲವು ದೇಶಗಳು ಕಾಂಟ್ಯಾಕ್ಟ್ ಟ್ರೇಸಿಂಗ್ ಕಾರ್ಯ ತೀರಾ ಕಷ್ಟವಾಗಿದೆ ಎಂದು ಡಬ್ಲ್ಯೂಹೆಚ್ಒಗೆ ತಿಳಿಸಿವೆಯಂತೆ. ಈ ವಿಚಾರವನ್ನು ಪ್ರಸ್ತಾಪಿಸಿದ ಡಬ್ಲ್ಯೂಎಚ್ಒ ಮಹಾನಿರ್ದೇಶಕರು, ಅಂಥ ದೇಶಗಳನ್ನ ತರಾಟೆಗೆ ತೆಗೆದುಕೊಂಡರು. ಕಾಂಟ್ಯಾಕ್ಟ್ ಟ್ರೇಸಿಂಗ್ ಕಷ್ಟ ಎಂದು ಹೇಳುವುದು ಒಂದು ನೆವ ಮಾತ್ರವಾಗಿದೆ ಎಂದು ಟೀಕಿಸಿದರು.
ಅಪಾಯದಲ್ಲಿರುವವರನ್ನ ಗುರುತಿಸಿ ಪ್ರತ್ಯೇಕಿಸಲು ಪ್ರಬಲ ಕಾಂಟ್ಯಾಕ್ಟ್ ಟ್ರೇಸಿಂಗ್ ವ್ಯವಸ್ಥೆ ಅಗತ್ಯ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪದೇ ಪದೇ ಹೇಳುತ್ತಲೇ ಬಂದಿದೆ. ಆದರೆ, ಅಮೆರಿಕ, ಬ್ರಿಟನ್ ಮೊದಲಾದ ದೇಶಗಳು ತಮ್ಮಿಂದ ಕಾಂಟ್ಯಾಕ್ಟ್ ಟ್ರೇಸಿಂಗ್ ಕಾರ್ಯ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿವೆಯಂತೆ.
ಬ್ರಿಟನ್ ದೇಶದಲ್ಲಿ ಅತ್ಯುತ್ತಮ ಕಾಂಟ್ಯಾಕ್ಟ್ ಟ್ರೇಸಿಂಗ್ ವ್ಯವಸ್ಥೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ, ಶೇ. 25ಕ್ಕೂ ಹೆಚ್ಚು ಸೋಂಕಿತರನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗುತ್ತಿದ್ದೇವೆ. ಪತ್ತೆಯಾಗದ ಸೋಂಕಿತರಿಂದ ಇನ್ನಷ್ಟು ಜನರಿಗೆ ಹರಡುವ ಸಾಧ್ಯತೆ ಇದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಹೇಳಿಕೊಂಡಿದ್ಧಾರೆ.
ಕಾಂಟ್ಯಾಕ್ಟ್ ಟ್ರೇಸಿಂಗ್ ಬಹಳ ತ್ರಾಸದಾಯಕ ಕಾರ್ಯವಾದರೂ ಅದು ಬಹಳ ಅತ್ಯಗತ್ಯ ಎಂಬುದನ್ನು ಡಬ್ಲ್ಯೂಎಚ್ಒ ಮುಖ್ಯಸ್ಥರು ಒತ್ತಿ ಹೇಳುತ್ತಾ, ಇಬೋಲಾ ರೋಗದ ಉದಾಹರಣೆ ನೀಡಿದ್ದಾರೆ.
ಆಫ್ರಿಕಾದಲ್ಲಿ ಇಬೋಲಾ ರೋಗ ಹರಡುತ್ತಿತ್ತು. ಕಾಂಗೋ ದೇಶದಲ್ಲಿ ಇಬೋಲಾ ರೋಗ ಪತ್ತೆಗೆ ಹೋದ ಆರೋಗ್ಯ ಕಾರ್ಯಕರ್ತರ ಮೇಲೆ ಸಶಸ್ತ್ರ ಗುಂಪುಗಳು ದಾಳಿ ನಡೆಸಿ ಹತ್ಯೆ ಮಾಡಿದ್ದವು. ಅಂಥ ಸಂದರ್ಭದಲ್ಲಿ WHOನ ಈಗಿನ ಎಮರ್ಜೆನ್ಸಿ ಡೈರೆಕ್ಟರ್ ಡಾ. ಮೈಕೇಲ್ ರಯಾನ್ ಅವರು ಬುಲೆಟ್ ಪ್ರೂಫ್ ಹೆಲ್ಮೆಟ್ ಮತ್ತು ವಸ್ತ್ರವನ್ನು ಧರಿಸಿ ಅದೇ ಸ್ಥಳಗಳಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್ ಕಾರ್ಯಕ್ಕೆ ಹೋಗಿದ್ದರು. ಅಂಥ ಬದ್ಧತೆ ಇದ್ದರೆ ಮಾತ್ರ ಇಬೋಲಾವನ್ನು ನಿಯಂತ್ರಿಸಬಹುದು ಎಂಬುದು ಅವರ ನಂಬಿಕೆಯಾಗಿತ್ತು ಎಂದು ಡಬ್ಲ್ಯೂಎಚ್ಒ ಮುಖ್ಯಸ್ಥರು ಮೈಕೇಲ್ ರಯಾನ್ ಅವರ ಉದಾಹರಣೆ ನೀಡಿ ಶ್ಲಾಘಿಸಿದ್ಧಾರೆ.
“ಕಾಂಟ್ಯಾಕ್ಟ್ ಟ್ರೇಸಿಂಗ್ನಿಂದ ಗೆಲುವು ಸಾಧ್ಯವಾಗುತ್ತದೆ ಎಂದಾದರೆ ನಿಮ್ಮ ಜೀವ ಪಣಕ್ಕಿಟ್ಟಾದರೂ ಮಾಡಿ. ಕಾಂಟ್ಯಾಕ್ಟ್ ಟ್ರೇಸಿಂಗ್ ಕಷ್ಟ ಎಂದು ಯಾವದೇ ದೇಶ ಹೇಳಿದರೂ ಅದು ಕುಂಟು ನೆವ ಅಷ್ಟೇ” ಎಂದು ಟೆಡ್ರೋಸ್ ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಚೀನಾದಂಥ ದೇಶಗಳಲ್ಲಿನ ಕಾಂಟ್ಯಾಕ್ಟ್ ಟ್ರೇಸಿಂಗ್ ವ್ಯವಸ್ಥೆ ಬಗ್ಗೆ ಡಬ್ಲ್ಯೂಎಚ್ಒ ಈ ಮುಂಚೆ ಮೆಚ್ಚುಗೆ ವ್ಯಕ್ತಪಡಿಸಿತ್ತು.

