ಸ್ಯಾಂಡಲ್‌ವುಡ್‌ ಸ್ಟಾರ್‌ ಶಿವರಾಜ್‌ಕುಮಾರ್‌ ಅವರ ಜನ್ಮದಿನದ ಪ್ರಯುಕ್ತ ವಿಶೇಷ ಬರಹ!

ಕರುನಾಡ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ಶಿವರಾಜ್‌ಕುಮಾರ್‌ ಇಂದು 58ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.  ಶಿವರಾಜ್ ಅವರ  ಹುಟ್ಟುಹಬ್ಬದ ಸಂದರ್ಭದಲ್ಲಿ ಹ್ಯಾಟ್ರಿಕ್‌ ಹೀರೋ ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಳ್ಳುವುದರ ಜೊತೆಗೆ ಅವರ ಆತ್ಮೀಯ ಸ್ನೇಹಿತರಾದ ನಟ-ನಿರ್ದೇಶಕ ಚಿ.ಗುರುದತ್  ಶುಭಾಶಯ ಕೋರಿದ್ದಾರೆ.

***

ಬಾಲ್ಯದಲ್ಲಿ ಒಟ್ಟಿಗೇ ಆಡಿಕೊಂಡು ಬೆಳೆದ ಶಿವಣ್ಣ ಮತ್ತು ನಾನು `ಆನಂದ್’ (1986) ಚಿತ್ರದೊಂದಿಗೆ ಒಟ್ಟಿಗೇ ಬಣ್ಣ ಹಚ್ಚಿದವರು. `ಆನಂದ್’ ಚಿತ್ರಕ್ಕಾಗಿ ನನಗೆ ಅವರೇ ಒಂದು ತಿಂಗಳು ಕಾರು ಡ್ರೈವಿಂಗ್ ಹೇಳಿಕೊಟ್ಟಿದ್ದರು. ಚಿತ್ರೀಕರಣದಲ್ಲಿ ಡ್ರೈವಿಂಗ್ ಕೈಕೊಟ್ಟಾಗ ಅಲ್ಲಿಯೂ ಶಿವಣ್ಣನ ನೆರವು ಬೇಕಾಗುತ್ತಿತ್ತು. ಮುಂದೆ ಕೂಡ ನನ್ನ ಸಿನಿಮಾ ಬದುಕಿನ ಪ್ರಮುಖ ಹಂತಗಳಲ್ಲಿ ಅವರ ನೆರವು ಒದಗಿಬಂದಿತು. ನನ್ನನ್ನು ನಿರ್ಮಾಪಕನನ್ನಾಗಿ (ಆನಂದಜ್ಯೋತಿ) ಮತ್ತು ನಿರ್ದೇಶಕನನ್ನಾಗಿ (ಸಮರ) ಮಾಡಿದ್ದು ಕೂಡ ಶಿವಣ್ಣನೇ.

ನಾನು, ಅವರು ಮತ್ತು ಬಾಲು (ಬಾಲರಾಜ್) ನಾಯಕರಾಗಿ ನಟಿಸಿದ `ಸಂಯುಕ್ತ’ ಆಗ ಕನ್ನಡದಲ್ಲೊಂದು ಉತ್ತಮ ಥ್ರಿಲ್ಲರ್ ಸಿನಿಮಾ. ಕಾಕೋಳು ಸರೋಜಾ ರಾವ್ ಅವರ ಕಾದಂಬರಿಯನ್ನು ಆಧರಿಸಿ ಮಾಡಿದ ಈ ಸಿನಿಮಾದ ನಿರ್ದೇಶಕರು ಚಂದ್ರಶೇಖರ ಶರ್ಮಾ. ಹಾಗೆ ನೋಡಿದರೆ ಇದು ನಾನು ಮತ್ತು ಬಾಲರಾಜ್ ನಟಿಸಬೇಕೆಂದಿದ್ದ ಸಿನಿಮಾ. ಅಂತಿಮ ಹಂತದಲ್ಲಿ ಶಿವರಾಜ್‌ಕುಮಾರ್ ತಂಡಕ್ಕೆ ಸೇರಿಕೊಂಡರು. ಆಗ ಹ್ಯಾಟ್ರಿಕ್ ಹೀರೋ (ಆನಂದ್, ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ) ಆಗಿದ್ದ ಶಿವರಾಜಕುಮಾರ್‌ಗೆ ಇದು ನಾಲ್ಕನೇ ಸಿನಿಮಾ. ದೊಡ್ಡ ಯಶಸ್ಸು ಕಂಡ ಹೀರೋ ಎನ್ನುವ ಯಾವುದೇ ಸಣ್ಣ ಹಿಂಜರಿಕೆಯೂ ಇಲ್ಲದೆ ಖುಷಿಯಿಂದ ನಮಗೆ ಜೊತೆಯಾದರು. ನಮ್ಮಿಬ್ಬರ ಸಿನಿಮಾ ಬದುಕಿಗೆ ನೆರವಾಗುತ್ತದೆ ಎನ್ನುವ ದೃಷ್ಟಿಯಿಂದ ಯೋಜನೆಗೆ ಕೈಜೋಡಿಸಿದರು. ಮೊದಲು ಚಿಕ್ಕ ಪ್ರಾಜೆಕ್ಟ್ ಎಂದುಕೊಂಡಿದ್ದ ಇದು ಶಿವರಾಜ್ ಸೇರ್ಪಡೆಯಿಂದ ದೊಡ್ಡ ಸಿನಿಮಾ ಆಗಿ ಯಶಸ್ಸು ಕಂಡಿತು.

ಸದಾ ಚಟುವಟಿಕೆಯಿಂದಿರುವ ಶಿವರಾಜ್ ಶೂಟಿಂಗ್ ಸೆಟ್‍ನಲ್ಲಿದ್ದರೆ ಒಂದು ರೀತಿ ಉತ್ಸಾಹ. ದಿನೇಶ್‍ಬಾಬು ನಿರ್ದೇಶನದ `ಇನ್‍ಸ್ಪೆಕ್ಟರ್ ವಿಕ್ರಂ’ ಶೂಟಿಂಗ್ ಸಂದರ್ಭವೊಂದು ನನಗೆ ನೆನಪಾಗುತ್ತದೆ. ಶಿವಣ್ಣ ಹೀರೋ ಆಗಿ ನಟಿಸಿದ್ದ ಚಿತ್ರದಲ್ಲಿ ನನಗೊಂದು ಪ್ರಮುಖ ಪಾತ್ರವಿತ್ತು. ಕೆಮ್ಮಣ್ಣುಗುಂಡಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ನಾವೆಲ್ಲರೂ ಪಾಲ್ಗೊಂಡಿದ್ದೆವು. ನಿರ್ದೇಶಕ ದಿನೇಶ್ ಬಾಬು ಅವರ ಆತ್ಮೀಯರೂ ಆಗಿದ್ದ ತಮಿಳು ನಟ ನಾರಾಯಣ್ ಚಿತ್ರದ ಖಳ ಪಾತ್ರದಲ್ಲಿ ನಟಿಸುತ್ತಿದ್ದರು. ಸನ್ನಿವೇಶವೊಂದರಲ್ಲಿ ನಾರಾಯಣ್ ವೇಗವಾಗಿ ಕಾರು ಓಡಿಸಿಕೊಂಡು ಬಂದು ಒಮ್ಮೆಗೇ ಬ್ರೇಕ್ ಹಾಕಿ ಕಾರನ್ನು ತಿರುಗಿಸಿ ನಿಲ್ಲಿಸಬೇಕಿತ್ತು. ನಾಲ್ಕೈದು ಟೇಕ್‍ಗಳಾದರೂ ಶಾಟ್ ಓಕೆಯಾಗಲಿಲ್ಲ. ಕೊನೆಗೆ ನಾರಾಯಣ್‍ಗೆ ತಾವು ಡ್ಯೂಪ್ ಆಗುವುದಾಗಿ ಶಿವಣ್ಣ ಎದ್ದುನಿಂತರು! ಅದು ರಿಸ್ಕೀ ಶಾಟ್ ಆದ್ದರಿಂದ ಎಲ್ಲರೂ ಬೇಡವೆಂದೆವು. ನಮ್ಮ ಮಾತು ಕೇಳದ ಶಿವಣ್ಣ, ನಾರಾಯಣ್‍ರ ಷರ್ಟ್ ಹಾಕಿಕೊಂಡು ಕಾರು ಹತ್ತಿದರು. ಡ್ರೈವಿಂಗ್ ಎಕ್ಸ್‌ಪರ್ಟ್ ಆಗಿದ್ದರಿಂದ ಅವರಿಗೊಂದಿಷ್ಟು ಟೆಕ್ನಿಕ್‍ಗಳು ಗೊತ್ತಿದ್ದವು. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಒಂದೇ ಟೇಕ್‍ಗೆ ರಿಸ್ಕೀ ಶಾಟ್ ಓಕೆ ಮಾಡಿದರು. ಕೊಂಚ ಎಡವಟ್ಟಾಗಿದ್ದರೂ ಕಾರು ಪಲ್ಟಿಯಾಗುವ ಸಾಧ್ಯತೆಗಳಿದ್ದವು. ಹೆದರದ ಶಿವಣ್ಣ ವಿಲನ್‍ಗೆ `ಡ್ಯೂಪ್’ ಆಗಿ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿದರು!

Shivarajkumar to go to London to treat injured shoulder | Kannada ...

ನಾಯಕನೇ ನೃತ್ಯ ಸಂಯೋಜಿಸಿದಾಗ…

ಶಿವರಾಜ್ ಪ್ರೋತ್ಸಾಹದ ಮೇರೆಗೆ `ಸಮರ’ ಚಿತ್ರದ ಮೂಲಕ ನಾನು ನಿರ್ದೇಶಕನ ಹ್ಯಾಟ್ ಧರಿಸುವಂತಾಯ್ತು. ಶಿವರಾಜಕುಮಾರ್ ಮತ್ತು ಸುಧಾರಾಣಿ ಚಿತ್ರದ ಹೀರೋ-ಹಿರೋಯಿನ್. ಸಿಂಗಾಪೂರದಲ್ಲಿ ಚಿತ್ರದ ಎರಡು ಹಾಡುಗಳನ್ನು ಚಿತ್ರಿಸುವುದೆಂದು ನಿರ್ಧರಿಸಿದ್ದೆವು. ಅಂದುಕೊಂಡಂತೆಯೇ ಬೆಂಗಳೂರಿನಿಂದ ನಮ್ಮದೊಂದು ಚಿಕ್ಕ ತಂಡದೊಂದಿಗೆ ಸಿಂಗಾಪೂರಕ್ಕೆ ಹೋದೆವು. ನೃತ್ಯ ನಿರ್ದೇಶಕ ಜಾನ್ ಬಾಲು ಚೆನ್ನೈನಿಂದ ಬಂದು ನಮ್ಮನ್ನು ಕೂಡಿಕೊಳ್ಳಬೇಕಿತ್ತು. ಕಾರಣಾಂತರಗಳಿಂದಾಗಿ ಅವರು ಚೆನ್ನೈನಲ್ಲೇ ಉಳಿಯುವಂತಾದಾಗ ನಾವು ಕಂಗಾಲಾದೆವು.

ನಮಗೆ ಅಲ್ಲಿ ಚಿತ್ರಿಸಲು ಅನುಮತಿ ಸಿಕ್ಕಿದ್ದು ನಾಲ್ಕು ದಿನವಷ್ಟೇ. ನಿರ್ದೇಶಕನಾದ ನಾನು ತಲೆ ಮೇಲೆ ಕೈಹೊತ್ತು ಕುಳಿತಿದ್ದರೆ, ಶಿವಣ್ಣ ತಾವೇ `ನೃತ್ಯ ನಿರ್ದೇಶಕ’ನಾಗುವುದಾಗಿ ಹೇಳಿದರು! ಸಂಪೂರ್ಣ ವಿಫಲವಾಗಬೇಕಿದ್ದ ಸಿಂಗಾಪೂರ್ ಟೂರ್‌ಗೆ ಮತ್ತೆ ಜೀವ ಬಂದಂತಾಯಿತು. ನಾನು ಮೇಕಪ್-ಟಚ್‍ಅಪ್, ಟ್ರ್ಯಾಲಿ ಹ್ಯಾಂಡ್ಲಿಂಗ್ ನೋಡಿಕೊಂಡರೆ ಹೀರೋ ಶಿವಣ್ಣ ನೃತ್ಯ ನಿರ್ದೇಶಕರಾದರು. ನೃತ್ಯದಲ್ಲಿ ಅಪಾರ ಪರಿಣತಿಯಿರುವ ಶಿವಣ್ಣ ಚಿತ್ರದ ಎರಡು ಹಾಡುಗಳಿಗೆ ನೃತ್ಯ ಸಂಯೋಜಿಸಿದರು. ತಮ್ಮ ನೃತ್ಯ ಸಂಯೋಜನೆಗೆ ತಾವೇ ಹೆಜ್ಜೆ ಹಾಕುತ್ತಾ ಸಿಂಗಾಪೂರ ಪ್ರವಾಸವನ್ನು ಯಶಸ್ವಿಗೊಳಿಸಿದರು.

  • ಚಿ.ಗುರುದತ್ 

(ನಿರೂಪಣೆ: ಶಶಿಧರ ಚಿತ್ರದುರ್ಗ)


ಇದನ್ನೂ ಓದಿಪುನೀತ್‌ ರಾಜ್‌ಕುಮಾರ್ ಅವರ PRK ಪ್ರೊಡಕ್ಷನ್‌ನ ಲಾ ಸಿನಿಮಾ ಜುಲೈ 17ಕ್ಕೆ ರಿಲೀಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights