ವಲಸೆ ಕಾರ್ಮಿಕರಿಗೆ ಮೂರು ದಿನಗಳ ಕಾಲ ಉಚಿತ ಕೆಎಸ್‌ಆರ್‌ಟಿಸಿ ಸೇವೆ: ಯಡಿಯೂರಪ್ಪ

ಲಾಕ್‌ಡೌನ್‌ನಿಂದಾಗಿ ಬೆಂಗಳೂರು ನಗರದಲ್ಲೇ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮೂರಿಗೆ ಹೋಗಲು ಮೂರು ದಿನಗಳ ಕಾಲ ಉಚಿತ ಕೆಎಸ್‌ಆರ್‌ಟಿಸಿ ಸೇವೆ ಒದಗಿಸುವುದಾಗಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಿಸಿದ್ದಾರೆ.

ಕೂಲಿಯೂ ಇಲ್ಲದೆ, ತಿನ್ನಲು ಆಹಾರವೂ ಸಿಗದೆ, ಉಳಿಯಲು ವಸತಿಯೂ ಇಲ್ಲದೆ ಹಲವಾರು ವಲಸೆ ಕಾರ್ಮಿಕರು ಲಾಕ್‌ಡೌನ್‌ ಆದಾಗಿನಿಂದಲೂ ಕಷ್ಟದ ಜೀವನ ನಡೆಸುತ್ತಿದ್ದರು. ಕೆಲವು ಕಡೆಗಳಲ್ಲಿ ಸಿಆರ್‌ಪಿ, ಬಿಬಿಎಂಪಿ ಹಾಗೂ ಸ್ವಯಂ ಕಾರ್ಯಕರ್ತರು ಇಂತಹ ಜನರಿಗೆ ಆಹಾರ ಒದಗಿಸುತ್ತಿದ್ದರಾದರೂ, ಆ ಜನರಿಗೆ ಆರೋಗ್ಯದ ಆತಂಕ, ಕೊರೊನಾ ಭೀತಿ ಕಾಡುತ್ತಿತ್ತು. ಅಂತಹ ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳಲು ಮೇ 1ರಿಂದ ಕೆಎಸ್‌ಆರ್‌ಟಿಸಿ ಸೌಲಭ್ಯ ಒದಗಿಸಲಾಗಿತ್ತು.

ಮೇ 1 ರಂದು ಕೆಎಸ್‌ಆರ್‌ಟಿಸಿ ಸೇವೆ ಆರಂಭಿಸಿದ ಸಾರಿಕೆ ಸಂಸ್ಥೆಯು ಕಿ.ಮೀ.ಗೆ 39 ರೂಪಾಯಿಗಳಂತೆ ಸಾಮಾನ್ಯ ಪ್ರಯಾಣ ದರಕ್ಕಿಂತ ಮೂರು ಪಟ್ಟು ಪ್ರಯಾಣ ದರ ವಿಧಿಸಿ ಕಾರ್ಮಿಕರನ್ನು ಸುಲಿಗೆ ಮಾಡಲು ಆರಂಭಿಸಿತ್ತು. ಸರ್ಕಾರದ ಈ ನಡೆಯ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿತ್ತು. ಟೀಕೆಗೆ ಮಣಿದ ಸರ್ಕಾರ ಒಮ್ಮುಖ ಪ್ರಯಾಣದ ಸಾಮಾನ್ಯ ದರವನ್ನು ಪಡೆಯುವುದಾಗಿ ಘೋಷಿಸಿತ್ತು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ, ಕಾರ್ಮಿಕರ ಪರಿಸ್ಥಿತಿಯನ್ನು ಆಲಿಸಿದ್ದರು. ನಾನೇ ಭಿಕ್ಷೆ ಬೇಡಿಯಾದರೂ ಹಣ ನೀಡುತ್ತೇನೆ. ಕಾರ್ಮಿಕರು ಉಚಿತವಾಗಿ ತಮ್ಮೂರಿಗೆ ತೆರಳು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದ್ದರು. ಅಲ್ಲದೆ, ಕಾರ್ಮಿಕರ ಪ್ರಯಾಣದ ನೆರವಿಗೆ ಕಾಂಗ್ರೆಸ್‌ ಒಂದು ಕೋಟಿ ರೂ. ನೆರವು ಘೋಷಿಸಿತ್ತು.

ಇಂದು ಬೆಳಗ್ಗೆಯಿಂದ ಸಾರಿಗೆ ಬಸ್‌ಗಳಲ್ಲಿ ಊರಿಗೆ ಹೊರಟಿರುವ ಪ್ರಯಾಣಿಕರಿಂದ ಒಮ್ಮುಖ ಪ್ರಯಾಣದ ಸಾಮಾನ್ಯದರವನ್ನು ಪಡೆಯಲಾಗುತ್ತಿತ್ತು. 10 ಗಂಟೆಯ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರು ಉಚಿತ ಪ್ರಯಾಣಕ್ಕೆ ಮೂರು ದಿನಗಳ ಕಾಲ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ.  ಕಾರ್ಮಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡುತ್ತಿದೆ. ಇದೇ ವೇಳೆ ಕಾರ್ಮಿಕರ ಆರೋಗ್ಯವನ್ನು ತಪಾಸಣೆ ನಡೆಸಿ ಅವರ ಊರುಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ನಿಜವಾಗಿಯೂ ನಿರ್ಗತಿಕರಾಗಿದ್ದ, ಬೀದಿ ಬದಿಯಲ್ಲಿ ವಾಸಿಸುತ್ತಿದ್ದ ಕಾರ್ಮಿಕರು ಸಾರಿಗೆ ವ್ಯವಸ್ಥೆ ಕಲ್ಪಿಸಿದ ಮೇ 01 ರಂದೇ ತಮ್ಮಲ್ಲಿದ್ದ ಎಲ್ಲಾ ಹಣವನ್ನು ಸಂಗ್ರಹಸಿ ಟಿಕೆಟ್‌ ಖರೀದಿಸಿ ತಮ್ಮೂರಿಗೆ ತೆರಳಿದ್ದಾರೆ. ಇನ್ನೂ ಕೆಲವು ಕಾರ್ಮಿಕರು ಸಾಲ-ಸೂಲ ಮಾಡಿ ನೆನ್ನೆ ಊರುಗಳಿಗೆ ತೆರಳಿದ್ದಾರೆ. ಇಂದು ಬಸ್‌ ನಿಲ್ದಾಣದಲ್ಲಿ ತಮ್ಮೂರಿಗೆ ಹೋಗುತ್ತಿರುವ ಪ್ರಯಾಣಿಕರಲ್ಲಿ ಶೇ.10 ರಷ್ಟು ಮಾತ್ರ ಬಡ ವಲಸೆ ಕಾರ್ಮಿಕರು ಉಳಿದಿದ್ದಾರೆ.

ಸಾವಿರಾರು ವಲಸೆ ಕಾರ್ಮಿಕರಿಂದ ದುಪ್ಪಟ್ಟು ದರ ವಿಧಿಸಿ ಸುಲಿಗೆ ಮಾಡಿರುವ ಸರ್ಕಾರ ಈಗ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಕಳೆದ ಎರಡು ದಿನಗಳಲ್ಲಿ ಕಾರ್ಮಿಕರಿಂದ ಸುಲಿಗೆ ಮಾಡಿರುವ ಹಣವನ್ನು ಕಾರ್ಮಿಕರಿಗೆ ಹಿಂದಿರುಗಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ಏನೇ ಇರಲಿ, ಸರ್ಕಾರಕ್ಕೆ ಲಾಕ್‌ಡೌನ್‌ ಆದ ಸಂದರ್ಭದಿಂದಲೂ ಕಾರ್ಮಿಕರು, ಬಡವರ ಬವಣೆಗಳು ಇನ್ನೂ ಅರ್ಥ ಆಗದಿರುವುದು ದುರಾದೃಷ್ಟಕರವಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಇಂತಹ ನಿರ್ಗತಿಕರಿಗೆ, ಬಡ ಕಾರ್ಮಿಕರಿಗೆ ಲಾಕ್‌ಡೌನ್‌ ಮುಗಿಯುವವರೆಗೂ ಉಚಿತ ಆಹಾರ, ಆರೋಗ್ಯ ಸೇವೆಗಳನ್ನು ನೀಡಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights