ಹರ್ಬಲ್ ಮೈಸೂರ್ ಪಾಕ್‌ ತಿಂದರೆ ಕೊರೊನಾ ಬರಲ್ಲ ಎಂದ ಮಾಲೀಕ: ಬೀಗ ಜಡಿದ ಸರ್ಕಾರ!

ಕೊರೊನಾ ವೈರಸ್‌ ಜಗತ್ತಿನಲ್ಲೆಡೆ ಆವರಿಸಿದ್ದು, ದಿನ ಕಳೆದಂತೆ ಸೋಂಕಿತರ ಸಂಖ್ಯೆ ಏರುತ್ತಿದೆ. ಅದೇ ಗತಿಯಲ್ಲಿ ಸಾವುಗಳೂ ಸಂಭವಿಸುತ್ತಿವೆ. ಕೊರೊನಾಗೆ ಲಸಿಕೆ ಅಭಿವೃದ್ಧಿಪಡಿಸಲು ವೈದ್ಯಕೀಯ ತಜ್ಞರು, ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಬೇಕರಿ ಮಾಲೀಕನೊಬ್ಬ ತಮ್ಮ ಅಂಗಡಿಯಲ್ಲಿ ಸಿಗುವ ಹರ್ಬಲ್‌ ಮೈಸೂರ್‌ ಪಾಕ್‌ ತಿಂದರೆ ಕೊರೊನಾ ವಾಸಿಯಾಗುತ್ತದೆ ಎಂದು ಬೋರ್ಡ್‌ ಹಾಕಿಕೊಂಡಿದ್ದು, ಆತನ ಬೇಕರಿಯನ್ನು ಸರ್ಕಾರ ಸೀಲ್‌ ಮಾಡಿ, ಬೀಗ ಜಡಿದಿದೆ.

ಮೊನ್ನೆಯಷ್ಟೇ ಪತಂಜಲಿ ಬ್ರಾಂಡ್‌ನ ಬಾಬಾ ರಾಮ್‌ದೇವ್‌ ಕೂಡ ಕೊರೊನಿಲ್‌ ಹೆಸರಿನ ಲಸಿಕೆಯನ್ನು ಬಿಡುಗಡೆ ಮಾಡಿ, ನಂತರ ಅದನ್ನು ಕೊರೊನಾಗಾಗಿ ಬಿಡುಗಡೆ ಮಾಡಿದ್ದಲ್ಲ ಎಂದು ಹೇಳಿದ್ದರು. ಅಲ್ಲದೆ, ಮನೆಮದ್ದುಗಳನ್ನು ಬಳಸುವುದರಿಂದ ಕೊರೋನಾ ಬಾರದಂತೆ ತಡೆಗಟ್ಟಹುದು ಎಂದು ಕೂಡ ಆಯುರ್ವೇದ ತಜ್ಞರು ಹೇಳುತ್ತಲೇ ಇದ್ದಾರೆ. ಇದೆಲ್ಲವನ್ನೂ ಜನ ನಂಬಿ ಖರೀದಿಸುವುದೂ ನಡೆಯುತ್ತಿದೆ. ಇದೆಲ್ಲದರ ಮಧ್ಯೆ, ಲಾಕ್‌ಡೌನ್‌ ಸಂದರ್ಭದಲ್ಲಿ ವ್ಯಾಪಾರ ಕುಸಿಯುತ್ತಿದ್ದು, ಬೇಕರಿ ಮಾಲೀಕ ಐಡಿಯಾ ಹುಡುಕಿದ್ದಾನೆ.

ಕೊಯಮತ್ತೂರಿನ 45 ವರ್ಷದ ಶ್ರೀರಾಮ್ ಎಂಬುವವರು 8 ಸ್ವೀಟ್​ ಸ್ಟಾಲ್​ಗಳನ್ನು ನಡೆಸುತ್ತಿದ್ದಾರೆ. ನೆಲ್ಲೈ ಲಾಲಾ ಸ್ವೀಟ್ಸ್​ ಎಂಬ ಹೆಸರಿನ ಸ್ವೀಟ್​ ಸ್ಟಾಲ್​ನಲ್ಲಿ ದೊರೆಯುವ ಹರ್ಬಲ್ ಮೈಸೂರ್ ಪಾಕ್​ಗಳನ್ನು ತಿಂದರೆ ಕೊರೊನಾ ಗುಣವಾಗುತ್ತದೆ ಎಂದು ಅವರು ಜಾಹೀರಾತುಗಳನ್ನು ನೀಡಿದ್ದರು.

ತಮಿಳುನಾಡಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರ ಅಂಗಡಿಯಲ್ಲಿನ ಹರ್ಬಲ್‌ ಮೈಸೂರ್ ಪಾಕ್​ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಅಂಗಡಿಯ ಮೈಸೂರ್ ಪಾಕ್​ಗೆ ಭಾರೀ ಬೇಡಿಕೆ ಬಂದಿತ್ತು.

ತಮ್ಮ ಅಂಗಡಿಯಲ್ಲಿ ಸಿಗುವ ಮೈಸೂರ್ ಪಾಕ್ ತಿಂದರೆ ಒಂದೇ ದಿನದಲ್ಲಿ ಕೊರೋನಾ ವಾಸಿಯಾಗುತ್ತದೆ. ಹರ್ಬಲ್ ವಸ್ತುಗಳಿಂದ ಮಾಡಿರುವ ಮೈಸೂರ್ ಪಾಕ್ ಕೊರೊನಾಗೆ ರಾಮಬಾಣವಿದ್ದಂತೆ. ಸೋಂಕಿತರು ಅಥವಾ ಸೋಂಕಿನ ಲಕ್ಷಣವುಳ್ಳವರು ತಮ್ಮ ಅಂಗಡಿಯ ಮೈಸೂರ್ ಪಾಕ್ ತಿಂದವರಿಗೆ ಕೊರೊನಾ ಗುಣವಾಗಿದೆ ಎಂದು ಅವರು ಹೇಳಿಕೊಂಡಿದ್ದರು. ಅಲ್ಲದೆ,  ಕೊರೋನಾ ವಾಸಿಯಾಗಬೇಕೆಂದರೆ ಮನೆಯಲ್ಲೇ ಕುಳಿತು ನಮ್ಮ ಅಂಗಡಿಯ ಮೈಸೂರ್ ಪಾಕ್ ಆರ್ಡರ್ ಮಾಡಿ, ಸ್ವೀಟ್ ಅನ್ನು ಹೋಂ ಡೆಲಿವರಿ ನೀಡುತ್ತೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದರು.

ಅಲ್ಲದೆ, ಈ ಮೈಸೂರ್ ಪಾಕ್​ನಿಂದ ಕೊರೋನಾ ವಾಸಿಯಾಗುವುದು ಖಚಿತ. ಹೀಗಾಗಿ, ಈ ಮೈಸೂರ್ ಪಾಕ್​ನ ಪೇಟೆಂಟ್ ಅನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆ ಮಾತನಾಡುತ್ತೇವೆ ಎಂದು ಕೂಡ ಹೇಳಿಕೊಂಡಿದ್ದರು. ಯಾವುದೇ ಆರೋಗ್ಯಾಧಿಕಾರಿಗಳ ಅನುಮತಿಯಿಲ್ಲದೆ ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದಕ್ಕೆ ಜಿಲ್ಲಾಡಳಿತ ನೋಟಿಸ್ ನೀಡಿದೆ. ಅಲ್ಲದೆ, ಈ ಸ್ವೀಟ್​ ಸಿದ್ಧಗೊಳ್ಳುತ್ತಿದ್ದ ಸ್ಥಳ, ಆ ಸ್ವೀಟ್​ಗೆ ಬಳಸುತ್ತಿದ್ದ ವಸ್ತುಗಳನ್ನು ಸೀಜ್ ಮಾಡಲಾಗಿದೆ.


ಇದನ್ನೂ ಓದಿ: ಕೊರೊನಾಗೆ ಔಷಧಿ ಕಂಡುಹಿಡಿದ ಬಾಬಾ ರಾಮ್‌ದೇವ್‌; ಪ್ರಚಾರ ನಿಲ್ಲಿಸಿ ಎಂದ ಕೇಂದ್ರ ಸರ್ಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights