Fact Check: ಹರ್ಬಲ್‌ ಮೈಸೂರ್ ಪಾಕ್‌ನಿಂದ ವಾಸಿಯಾಗುತ್ತಾ ಕೊರೊನಾ?

“ಹರ್ಬಲ್ ಮೈಸೂರ್ ಪಾಕ್ ಮೂಲಕ  ಕೊರೊನಾ ರೋಗಿಗಳು ಒಂದೇ ದಿನದಲ್ಲಿ ಗುಣಮುಖರಾಗುತ್ತಾರೆ. ಹೌದು, ಇದು ಒಂದು ಪವಾಡ! ಚಿನ್ನಿಯಂಪಾಳಯಂ ಮತ್ತು ವೆಳ್ಳಲೂರಿನಲ್ಲಿ ಇಂತಹ ಘಟನೆ ಸಂಭವಿಸಿದೆ” ಎಂದು ಹೇಳುವ ತಮಿಳು ಕರಪತ್ರವೊಂದು ವೈರಲ್ ಆಗಿದೆ.

ಕೊಯಮತ್ತೂರಿನಲ್ಲಿರುವ ಸಿಹಿತಿನಿಸು ಅಂಗಡಿಯೊಂದರ ಮಾಲೀಕರು ಮುದ್ರಿಸಿರುವ ತಮಿಳು ಭಾಷೆಯ ಕರಪತ್ರದಲ್ಲಿ “ತನ್ನ ಅಂಗಡಿಯಲ್ಲಿ ತಯಾರಿಸಿದ ಹರ್ಬಲ್ ಮೈಸೂರ್ ಪಾಕ್ ತಿನ್ನುವುದರಿಂದ (ದಕ್ಷಿಣ ಭಾರತದ ಸಿಹಿತಿನಿಸು) ಕೇವಲ ಒಂದು ದಿನದಲ್ಲಿ ಕೊರೊನಾ ಸೋಂಕನ್ನು ಗುಣಪಡಿಸಬಹುದು. ತನ್ನ ಅಜ್ಜ ಸಿದ್ಧೌ‍‍ಷದ ತಜ್ಞ ಹೇಳಿಕೊಟ್ಟ ಪಾಕವಿಧಾನದ ಪ್ರಕಾರ ಈ ಸಿಹಿತಿಂಡಿ ತಯಾರಿಸಲ್ಪಟ್ಟಿದೆ” ಎಂದು ಬರೆಯಲಾಗಿದೆ.

 

ಮೈಸೂರ್ ಪಾಕ್‌ನಲ್ಲಿ 19 ಬಗೆಯ ವಿವಿಧ ಗಿಡಮೂಲಿಕೆಗಳಿವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೊರೊನಾ ವೈರಸ್ ಅನ್ನು ಕೊಲ್ಲುತ್ತದೆ. ಸೋಂಕನ್ನು ತೊಡೆದು ಹಾಕಲು ಒಂದು ದಿನದಲ್ಲಿ ಮೈಸೂರ್ ಪಾಕಿನ ನಾಲ್ಕು ತುಂಡುಗಳನ್ನು ತಿನ್ನಬೇಕು ಎಂದು ಕರಪತ್ರ ಹೇಳಿದೆ.

ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಕರಪತ್ರವನ್ನು ಅಂಗಡಿಯ ವಿಳಾಸ ಮತ್ತು ವಿವರಗಳೊಂದಿಗೆ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್ ಚೆಕ್:

“ಹರ್ಬಲ್ ಮೈಸೂರ್‌ ಪಾಕ್ ಕೊರೊನಾ ವೈರಸ್ ಸೋಂಕನ್ನು ಗುಣಪಡಿಸುತ್ತದೆ” ಎಂಬ ಕೀ ಪದಗಳಿಂದ ಹುಡುಕಿದಾಗ ಹಲವು ಪತ್ರಿಕಾ ವರದಿಗಳು ಕಾಣಸಿಗುತ್ತವೆ. Outlook.comನ ವರದಿಯ ಪ್ರಕಾರ, ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಕೂಡಲೇ ಕೊಯಮತ್ತೂರಿನ ಚಿನ್ನಿಯಂಪಾಲಯಂನ ಅಂಗಡಿಯ ಮೇಲೆ ದಾಳಿ ನಡೆಸಿದೆ. ನಿಯೋಜಿತ ಅಧಿಕಾರಿ ಉತ್ಪನ್ನವನ್ನು FSSAI ಪ್ರಮಾಣೀಕರಿಸಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಇದು ಕೊರೊನಾವನ್ನು ಗುಣಪಡಿಸುತ್ತದೆ ಎಂಬುದು ಅಪ್ಪಟ ಸುಳ್ಳು ಎಂದು ತಿಳಿಸಿದ್ದಾರೆ.

“ಈ ಕರಪತ್ರದ ವಿಚಾರ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ತಲುಪಿ, ಆರೋಗ್ಯ ಸೇವೆಗಳ ಉಪನಿರ್ದೇಶಕ ಜಿ. ರಮೇಶ್ ಕುಮಾರ್ ಇದು ಸಾಂಕ್ರಾಮಿಕ ರೋಗ ಕಾಯ್ದೆ, 1897ರ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಹೇಳಿದ್ದಾರೆ. ಹರ್ಬಲ್ ಮೈಸೂರು ಪಾಕ್, ಕೊರೊನಾ ಸೋಂಕಿತ ರೋಗಿಗಳನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕಂದು ಬಣ್ಣದ ಮೈಸೂರ್‌ ಪಾಕ್‌ನ ಪ್ರತಿ 50 ಗ್ರಾಂ ತುಂಡನ್ನು 50 ರೂಗೆ ಮತ್ತು ಒಂದು ಕೆಜಿಗೆ 800 ರೂ.ಗೆ ಮಾರಾಟ ಮಾಡಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ 120 ಕೆಜಿ ಹರ್ಬಲ್ ಮೈಸೂರ್‌ ಪಾಕ್‌ಅನ್ನು ವಶಪಡಿಸಿಕೊಂಡು ಅಂಗಡಿಯನ್ನು ಸೀಲ್ ಮಾಡಿ ಅವರ ಪರವಾನಗಿಯನ್ನು ರದ್ದುಗೊಳಿಸಿದ್ದಾರೆ. ಅಲ್ಲದೇ ಆಹಾರ ಸುರಕ್ಷತಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ.

ಆದ್ದರಿಂದ, ಹರ್ಬಲ್ ಮೈಸೂರ್‌ ಪಾಕ್ ಕೊರೊನಾ ಸೋಂಕನ್ನು ಗುಣಪಡಿಸುತ್ತದೆ ಎಂಬ ಹೇಳಿಕೆ ಸುಳ್ಳಾಗಿದೆ.


ಇದನ್ನೂ ಓದಿ:

ಹರ್ಬಲ್ ಮೈಸೂರ್ ಪಾಕ್‌ ತಿಂದರೆ ಕೊರೊನಾ ಬರಲ್ಲ ಎಂದ ಮಾಲೀಕ: ಬೀಗ ಜಡಿದ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights