ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಪರೀಕ್ಷೆಯನ್ನು ರದ್ದುಗೊಳಿಸಲು KVS ಆಗ್ರಹ!

ಯುಜಿಸಿಯ ಪರೀಕ್ಷಾ ಮಾರ್ಗಸೂಚಿಯ ಮೇರೆಗೆ ಕರ್ನಾಟಕದಲ್ಲಿ ಎಲ್ಲಾ ಪದವಿ ಮತ್ತು ವೃತ್ತಿಪರ ಕೋರ್ಸುಗಳ ಮಧ್ಯಂತರ ಸೆಮಿಸ್ಟರ್‌ ಪರೀಕ್ಷೆಯನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸ್ವಾಗತಿಸಿದೆ. ಅಲ್ಲದೆ, ಅಂತಿಮ ವರ್ಷದ ಅಥವಾ ಸೆಮಿಸ್ಟರ್‌ನ ಪರೀಕ್ಷೆಗಳನ್ನೂ ಅದೇ ರೀತಿಯಲ್ಲಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದೆ.

ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯದ ಒಳಿತನ್ನು ಗಮನದಲ್ಲಿಟ್ಟುಕೊಂಡುಎಲ್ಲಾ ಕೋರ್ಸ್‌ಗಳ ಮಧ್ಯಂತರ ಸೆಮಿಸ್ಟರ್ ಪರೀಕ್ಷೆ ನಡೆಸದೆ, ವಿದ್ಯಾರ್ಥಿಗಳನ್ನು ಸಮಗ್ರ ಮೌಲ್ಯಮಾಪನದ (Comprehensive Evaluation) ಮಾನದಂಡದ ಮೇಲೆ ತೇರ್ಗಡೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳ ಆರೋಗ್ಯವೂ ಬಹುಮುಖ್ಯವಾಗಿದ್ದು, ಇದೇ ಮಾನದಂಡದ ಆಧಾರದ ಮೇಲೆ ಅವರನ್ನೂ ತೇರ್ಗಡೆಗೊಳಸಬೇಕು. ಪರೀಕ್ಷೆಗಳನ್ನು ರದ್ದು ಮಾಡಬೇಕು ಎಂದು ಕೆವಿಎಸ್ ಒತ್ತಾಯಿಸಿದೆ.

ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಯುಜಿಸಿಯು ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆಗಳನ್ನು ನಡೆಸುವ ವಿಚಾರವಾಗಿ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ತಂಡವನ್ನು ಕೇಳಿತ್ತು. ವರದಿ ಸಲ್ಲಿಸಿದ್ದು ಸಮಿತಿಯು, ಪರೀಕ್ಷಗಳನ್ನು ನಡೆಸದೇ ಹಿಂದನ ಸೆಮಿಸ್ಟರ್‌ಗಳ ಪರೀಕ್ಷೆ ಮತ್ತು ಆಂತರಿಕ ಪರೀಕ್ಷೆಗಳ ಸರಾಸರಿಯನ್ನು ಆಧರಿಸಿ ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವಂತೆ ಶಿಫಾರಸ್ಸು ಮಾಡಿತ್ತು. ಆದರೆ, ಶಿಫಾರಸ್ಸು ಆಲಿಸಿದ್ದ ಯುಜಿಸಿ ಸೆಪ್ಟೆಂಬರ್ ತಿಂಗಳ ಒಳಗಾಗಿ ಎಲ್ಲಾ ಪರೀಕ್ಷೆಗಳನ್ನು ನಡೆಸಬಹುದು ಎಂದು ಜುಲೈ 6 ರಂದು ಮಾರ್ಗಸೂಚಿಯನ್ನು ಹೊರಡಿಸಿತ್ತು.

ತಜ್ಞರ ಶಿಫಾರಸ್ಸನ್ನು ಬದಿಗೊತ್ತಿ, ಪರೀಕ್ಷೆ ನಡೆಸುವುದಾಗಿ ಹೇಳಿದ್ದ ಯುಜಿಸಿ ನಡೆಯ ವಿರುದ್ಧ ಬಹುತೇಕ ವಿದ್ಯಾರ್ಥಿ ಸಂಘಟನೆಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದವು. ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಆರಂಭವಾಗುವ ಮೊದಲೇ ಕರ್ನಾಟಕದಲ್ಲಿ ಪರೀಕ್ಷೆಗಳನ್ನು ನಡೆಸದೇ ಆಂತರಿಕ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಆಧರಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು  ತೇರ್ಗಡೆ ಮಾಡುವಂತೆ ಕರ್ನಾಟಕ ವಿದ್ಯಾರ್ಥಿ ಸಂಘಟನೆಯು ಒತ್ತಾಯಿಸಿತ್ತು.

ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ರೀತಿಯಲ್ಲಿಯೇ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿರುವ ಕೆವಿಎಸ್‌, ಕೊರೊನಾ ಸೋಂಕು ದೇಶದಲ್ಲಿ ಅಪಾಯಕಾರಿ ವಾತಾವರಣವನ್ನು ಸೃಷ್ಟಿಸುತ್ತಿರುವ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಜೀವವನ್ನು ಅಪಾಯಕ್ಕೆ ದೂಡುವ ಕೇಂದ್ರವಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯ ವ್ಯಕ್ತಿಪಡಿಸಿದೆ.


ಇದನ್ನೂ ಓದಿUGC ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಘೋಷಿಸಿದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights