ಚೀನಾದೊಂದಿಗಿನ ವ್ಯಾಪಾರ ಉದ್ವಿಗ್ನ; ಸೌರಶಕ್ತಿಯಲ್ಲಿ ಸ್ವಾವಲಂಭನೆ ಸಾಧಿಸಲು ಮುಂದಾದ ಮೋದಿ ಸರ್ಕಾರ!

ಜಗತ್ತಿನಲ್ಲಿಯೇ ಅತಿ ಹೆಚ್ಚು ರಫ್ತುಮಾಡುವ ರಾಷ್ಟ್ರವಾದ ಚೀನಾದೊಂದಿಗಿನ ಭಾರತವು ವ್ಯಾಪಾರ ಉದ್ವಿಗ್ನತೆಯನ್ನು ಕಾಯ್ದುಕೊಂಡಿದೆ. ಹಾಗಾಗಿ ಭಾರತವು ಸೌರಶಕ್ತಿಯಲ್ಲಿ ಸ್ವಾವಲಂಭನೆ ಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂದು (ಶುಕ್ರವಾರ) ಮಧ್ಯಪ್ರದೇಶದಲ್ಲಿ 750 ಮೆಗಾವ್ಯಾಟ್ ಬೃಹತ್ ಸೌರ ವಿದ್ಯುತ್ ಸ್ಥಾವರವನ್ನು ವರ್ಚುವಲ್ಆಗಿ ಉದ್ಘಾಟಿಸಿದ ಮೋದಿ, “ಸೌರ ಫಲಕಗಳು ಮತ್ತು ಸಂಬಂಧಿತ ಸಾಧನಗಳ ಮೇಲಿನ ನಮ್ಮ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಇದಕ್ಕಾಗಿ ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಸೌರ ಮಾಡ್ಯೂಲ್‌ಗಳು ಮತ್ತು ಸೌರ ಬ್ಯಾಟರಿಗಳನ್ನು ಭಾರತದಲ್ಲಿ ತಯಾರಿಸಬೇಕು. ಸೌರ ವಿದ್ಯುತ್‌ ಕ್ಷೇತ್ರದಲ್ಲಿನ ಎಲ್ಲಾ ಕೆಲಸಗಳನ್ನು ನಾವು ವೇಗಗೊಳಿಸಬೇಕಾಗಿದೆ” ಎಂದು ಹೇಳಿದ್ದಾರೆ.

ಭಾರತ ಮತ್ತು ಚೀನಾ ಗಡಿಯ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಉದ್ವಿಗ್ನತೆ ಮತ್ತು ವ್ಯಾಪಾರದಲ್ಲಿನ ಪ್ರತಿದಾಳಿಗಳ ನಡುವೆ ಚೀನಾ ಮತ್ತು ಪಾಕಿಸ್ತಾನದಿಂದ ಸೌರ ಉಪಕರಣಗಳ ಆಮದನ್ನು ನಿಲ್ಲಿಸುವುದಾಗಿ ಭಾರತ ಕಳೆದ ವಾರ  ಘೋಷಿಸಿತ್ತು.

ಜುಲೈ 4 ರಂದು, ಕೇಂದ್ರ ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಅವರು ರಾಜ್ಯ ವಿದ್ಯುತ್ ಸಚಿವರೊಂದಿಗೆ ನಡೆಸಿದ ಸಭೆಯಲ್ಲಿ ಚೀನಾದ ಸಂಸ್ಥೆಗಳು ಭಾರತಕ್ಕೆ ಅಗ್ಗದ ದರದಲ್ಲಿ ಸೌರ ಉಪಕರಣಗಳನ್ನು ರಫ್ತು ಮಾಡುತ್ತಿವೆ. ಹಾಗಾಗಿ ಸೌರ ಮಾಡ್ಯೂಲ್‌ಗಳು ಮತ್ತು ಸೆಲ್‌ಗಳ ಮೇಲಿನ ಸುಂಕಗಳಲ್ಲಿ ಗಮನಾರ್ಹ ಹೆಚ್ಚಳಸಬೇಕು ಎಂದು ಸಭೆಯಲ್ಲಿ ನಿರ್ಧರಿಸಿದ್ದರು. ಅದೇ ದಿನ, ಚೀನಾ ಮತ್ತು ಪಾಕಿಸ್ತಾನದಿಂದ ವಿದ್ಯುತ್ ಉಪಕರಣಗಳನ್ನು ಇನ್ನು ಮುಂದೆ ಆಮದು ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು.

“ಚೀನಾವು ಸೌರ ಉಪಕರಣಗಳನ್ನು ಅಗ್ಗದ ಬೆಲೆಯಲ್ಲಿ ಭಾರತಕ್ಕೆ ಪೂರೈಸುತ್ತಿದೆ. ಅವರು ತಮ್ಮ ಸಂಸ್ಥೆಗಳಿಗೆ ಸಬ್ಸಿಡಿ ನೀಡುವ ಮೂಲಕ ಮತ್ತು ಉಪಕರಣಗಳನ್ನು ಅಗ್ಗವಾಗಿ ಮಾರಾಟ ಮಾಡುವ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಬಲಹೀನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಅವುಗಳನ್ನು ತಡೆಯಬೇಕಾಗಿದೆ. ಅದಕ್ಕಾಗಿ, ಮುಂದಿನ ವರ್ಷ ನಾವು ಸೌರ ಮಾಡ್ಯೂಲ್‌ಗಳ ಮೇಲೆ ಶೇ.40 ರಷ್ಟು ಮತ್ತು ಸೌರ ಸೆಲ್‌ಗಳ ಮೇಲೆ ಶೇ.25 ರಷ್ಟು ಮೂಲ ಕಸ್ಟಮ್ಸ್ ಸುಂಕವನ್ನು ವಿಧಿಸುತ್ತೇವೆ. ಅವುಗಳನ್ನು 2022 ರಲ್ಲಿ ಮತ್ತಷ್ಟು ಹೆಚ್ಚಿಸುತ್ತೇವೆ” ಎಂದು ಆರ್‌.ಕೆ.ಸಿಂಗ್ ಕಳೆದವಾರ ಹೇಳಿದ್ದರು.

2018-19ರಲ್ಲಿ ಭಾರತ 71,000 ಕೋಟಿ ರೂ.ಗಳ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಂಡಿದ್ದು, ಅದರಲ್ಲಿ 21,000 ಕೋಟಿ ರೂ.ಗಳು ಚೀನಾದ ಉಪಕರಣಗಳನ್ನು ಖರೀದಿಸಲು ವ್ಯಯಿಸಲಾಗಿದೆ ಎಂದು ಆರ್‌.ಕೆ.ಸಿಂಗ್ ಜುಲೈ 4 ರಂದು ತಿಳಿಸಿದ್ದರು.

ವಿಶಾಲವಾದ ನಗರ ರೈಲು ಜಾಲವನ್ನು ನಿರ್ವಹಿಸುತ್ತಿರುವ ದೆಹಲಿ ಮೆಟ್ರೋ ರೈಲು ನಿಗಮವು ವಿಶ್ವಾಸಾರ್ಹ ವಿದ್ಯುತ್ಚಕ್ತಿಯನ್ನು ಅವಲಂಬಿಸಿದೆ, ಇದಕ್ಕಾಗಿ ಈಶಾನ್ಯ ಮಧ್ಯಪ್ರದೇಶದ ರೇವಾದಲ್ಲಿನ ಸೌರ ಯೋಜನೆಗೆ ದೆಹಲಿ ಮೆಟ್ರೋ ಗ್ರಾಹಕರಾಗಿದ್ದಾರೆ. ಹಾಗಾಗಿ , ರೇವಾದಲ್ಲಿ 4,500 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಸೌರವಿದ್ಯುತ್‌ ಸ್ಥಾವರವನ್ನು ಆರಂಭಿಸಲಾಗಿದೆ.

500 ಹೆಕ್ಟೇರ್‌ನಲ್ಲಿ ತಲಾ 250 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಮೂರು ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿರುವ ಈ ಯೋಜನೆಯು, ಒಟ್ಟು 1,500 ಹೆಕ್ಟೇರ್‌ನಲ್ಲಿ 750 ಮೆಗಾವ್ಯಾಟ್‌ಗೆ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ರೇವಾ ಸೌರ ಸ್ಥಾವರದಿಂದ ಮಧ್ಯಪ್ರದೇಶಕ್ಕೆ ಶೇ.76 ಮತ್ತು ದೆಹಲಿ ಮೆಟ್ರೊಗೆ ಶೇ.24 ರಷ್ಟು ವಿದ್ಯುತ್ ಸಿಗಲಿದೆ.

ಈ ಯೋಜನೆಯ ವರ್ಚುವಲ್‌ ಉದ್ಘಾಟನೆಯಲ್ಲಿ ಮಧ್ಯಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಭಾಗಿಯಾಗಿದ್ದರು.


ಇದನ್ನೂ ಓದಿಚೀನಾ ಆಪ್ ಬ್ಯಾನ್ ಮಾಡಿ; ೫೦ ಹೊಸ ಹೂಡಿಕೆಗೆ ಚೀನಾಗೆ ಅವಕಾಶ ಕೊಡಲು ಮುಂದಾದ ಮೋದಿ ಸರ್ಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights