ಪತಂಜಲಿಯ ಕೊರೊನಿಲ್ ಮಾರಾಟಕ್ಕೆ ಭೂತಾನ್‌ನಲ್ಲಿ‌ ಅವಕಾಶವಿಲ್ಲ! ಡಿಆರ್‌ಎ ಅನುಮೋದಿಸುವುದಿಲ್ಲ!

ಪತಂಜಲಿ ಕಂಪನಿಯ ಸ್ಥಾಪಕ ರಾಮ್‌ದೇವ್ ಅವರು ಕೊರೊನಾಗೆ ಲಸಿಕೆಯೆಂದು ಹೇಳಿರುವ ಪತಂಜಲಿ ಬ್ರಾಂಡ್‌ನ ಕೊರೊನಿಲ್ ಅನ್ನು ದೇಶದಲ್ಲಿ ಮಾರಾಟ ಮಾಡಲಾಗುವುದಿಲ್ಲ ಎಂದು ಭೂತಾನ್‌ನ ಔಷಧ ನಿಯಂತ್ರಣ ಸಂಸ್ಥೆ ಹೇಳಿದೆ.

ದೇಶದಲ್ಲಿ ಔಷಧಿಗಳ ಆಮದು ಮತ್ತು ಮಾರಾಟದ ಮೇಲ್ವಿಚಾರಣೆಯನ್ನು ನಡೆಸುವ ಭೂತಾನ್‌ನ ಡ್ರಗ್ ರೆಗ್ಯುಲೇಟರಿ ಅಥಾರಿಟಿ (ಡಿಆರ್‌ಎ) ಕಳೆದವಾರ ಪತಂಜಲಿಯ ಕೊರೊನಿಲ್‌ಅನ್ನು ಅನುಮೋದಿಸಿಲ್ಲ ಎಂದು ಹೇಳಿದೆ.

ಭೂತಾನ್‌ನಲ್ಲಿ ಮಾರಾಟವಾಗುವ ಔಷಧಿಗಳ ಸುರಕ್ಷತೆ, ಪರಿಣಾಮಕಾರಿ ಮತ್ತು ಗುಣಮಟ್ಟವನ್ನು  ಪರಿಶೀಲಿಸುವ ಡಿಆರ್‌ಎ “ಕೊರೊನಾಗೆ ಚಿಕಿತ್ಸೆ ನೀಡಲು ಇನ್ನೂ ಅನುಮೋದಿತ ಔಷಧಿಗಳಿಲ್ಲ.” ಕೊರೊನಾಗೆ ಲಸಿಕೆ ಎಂದು ಪ್ರತಿಪಾದಿಸಲಾಗುತ್ತಿರುವ ಉತ್ಪನ್ನಗಳನ್ನು ಮಾರಾಟ ಮಾಡಲು ಔಷಧಾಲಯಗಳಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ.

ಡಿಆರ್‌ಎಯ ತಪಾಸಣಾ ವಿಭಾಗದ ಮುಖ್ಯಸ್ಥ ಕುನ್ಜಾಂಗ್ ಡೋರ್ಜಿ, ಥಿಂಪುವಿನಲ್ಲಿ ಪತಂಜಲಿ ಔಟ್‌ಲೆಟ್ ಅನ್ನು ಪರಿಶೀಲಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಅದರಲ್ಲಿ ಕೊರೊನಿಲ್ ಇರಲಿಲ್ಲ ಎಂದು ತಿಳಿಸಿದ್ದಾರೆ.

ಭೂತಾನ್‌ನಲ್ಲಿ ಇದುವರೆಗೆ 77 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 44 ಚೇತರಿಕೆ ಮತ್ತು ಶೂನ್ಯ ಸಾವುಗಳು ದಾಖಲಾಗಿವೆ.

ಯೂ-ಟರ್ನ್‌ ಹೊಡೆದ ಪತಂಜಲಿ ಬ್ರಾಂಡ್‌:

ಪತಂಜಲಿ ಕಂಪನಿಯು ಕಳೆದ ವಾರ ಕೊರೊನಿಲ್ ಬಿಡುಗಡೆ ಮಾಡಿದ್ದು, ಕೊರೊನಾ ವೈರಸ್‌ಗೆ ಔಷಧವೆಂದೂ, ಇದು ವೈರಸ್‌ ಅನ್ನು ಗುಣಪಡಿಸುತ್ತದೆ ಎಂದು ಹೇಳಿಕೊಂಡಿತ್ತು. ಇದರಿಂದಾಗಿ ಸಾಕಷ್ಟು ವಿವಾದಗಳು ಇದರ ಸುತ್ತ ಎದ್ದಿದ್ದವು.

ತೀರಾ ಇತ್ತೀಚೆಗೆ, ಕೊರೊನಿಲ್‌ ಪರಿಣಾಮಕಾರಿತ್ವವನ್ನು ತನಿಖೆ ಮಾಡಲು ರಚಿಸಲಾದ 17 ಸದಸ್ಯರ ವೈದ್ಯಕೀಯ ವಿಜ್ಞಾನಿಗಳ ತಂಡ, ಆಯುಷ್ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಿತ್ತು, ಕೊರೊನಿಲ್‌ ಅನ್ನು ಕೊರೊನಾ ವೈರಸ್ ಚಿಕಿತ್ಸೆಯಾಗಿ ಬಳಸಲು ಯೋಗ್ಯವಲ್ಲ, ಅದನ್ನು ಬಳಸಬಾರದು  ಎಂದು ವರದಿಯಲ್ಲಿ ತಿಳಿಸಿದೆ.

ಕೇವಲ ಒಂದು ವಾರದ ಹಿಂದೆ ಕೊರೊನಿಲ್‌ ಅನ್ನು ಕೊರೊನಾ ಚಿಕಿತ್ಸೆಗಾಗಿ ತಯಾರಿಸಲಾಗಿದೆ ಎಂದು ಹೇಳಿಕೊಂಡಿದ್ದ ಪತಂಜಲಿ ಆಯುರ್ವೇದ ಸಿಇಒ ಆಚಾರ್ಯ ಬಾಲ್ಕೃಷ್ಣ, ಮಂಗಳವಾರ ತಮ್ಮ ಹೇಳಿಯನ್ನೇ ಯು- ಟರ್ನ್‌ ತಿರುಗಿಸಿದ್ದಾರೆ. ಕರೋನಿಲ್ ಅನ್ನು ಕೊರೊನಾ ವೈರಸ್‌ನ ಗುಣಪಡಿಸುವ ಚಿಕಿತ್ಸೆಗಾಗಿ ತಯಾರಿಸಿಲ್ಲ ಎಂದು ಹೇಳಿದ್ದಾರೆ.

“ನಾವು ಔಷಧಿಯಿಂದ (ಕೊರೊನಿಲ್) ಕೊರೊನಾ ವೈರಸ್ ಅನ್ನು ಗುಣಪಡಿಸಬಹುದು ಅಥವಾ ನಿಯಂತ್ರಿಸಬಹುದು ಎಂದು ಹೇಳಲಿಲ್ಲ. ನಾವು ಔಷಧಿಗಳನ್ನು ತಯಾರಿಸಿದ್ದೇವೆ ಮತ್ತು ಅವುಗಳನ್ನು ಕೊರೊನಾ ರೋಗಿಗಳನ್ನು ಗುಣಪಡಿಸುವ ಕ್ಲಿನಿಕಲ್ ನಿಯಂತ್ರಿತ ಪ್ರಯೋಗಗಳಲ್ಲಿ ಬಳಸಿದ್ದೇವೆ ಎಂದಷ್ಟೇ ಹೇಳಿದ್ದೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ” ಎಂದು ಪತಂಜಲಿ ಆಯುರ್ವೇದ ಸಿಇಒ ಆಚಾರ್ಯ ಬಾಲ್ಕೃಷ್ಣ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದರು.

ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ರಾಮ್‌ದೇವ್ ಅವರು “ಕೊರೊನಾ ಸೋಂಕಿತ ರೋಗಿಗಳ ಮೇಲಿನ ಕ್ಲಿನಿಕಲ್ ಪ್ರಯೋಗಗಳ ಸಮಯದಲ್ಲಿ ಆಯುರ್ವೇದ ಮೂಲದ ಕೊರೊನಿಲ್‌ ಔಷಧಿಗಳು ಶೇಕಡಾ 100 ರಷ್ಟು ಅನುಕೂಲಕರ ಫಲಿತಾಂಶಗಳನ್ನು ತೋರಿಸಿದೆ” ಎಂದು ಹೇಳಿದ್ದರು.


ಇದನ್ನೂ ಓದಿ: ಕೊರೊನಾಗೆ ಔಷಧಿ ಕಂಡುಹಿಡಿದ ಬಾಬಾ ರಾಮ್‌ದೇವ್‌; ಪ್ರಚಾರ ನಿಲ್ಲಿಸಿ: ಕೇಂದ್ರ ಸರ್ಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights