ರಸ್ತೆಗಿಳಿದ BMTC-KSRTC ಬಸ್ಗಳು – ಕಾವೇರದ ಭಾರತ್​ ಬಂದ್ ​: ಯಥಾಸ್ಥಿತಿ ಜನ ಜೀವನ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್​ ಬಂದ್​ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಎಂದಿನಂತೆ ಕೆೆಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ಬಸ್ ಗಳು ಓಡಾಡುತ್ತಿವೆ. ಪ್ರಮುಖ ರಸ್ತೆಗಳಲ್ಲಿ ಮಾತ್ರ ಭಾರತ್ ಬಂದ್ ಕರೆ ನೀಡಿದ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ಮಾಡಿದ್ದು ಕಂಡು ಬಂತು. ಇನ್ನೂ ಯಾವ ಜಿಲ್ಲೆಗಳಲ್ಲಿ ಭಾರತ್ ಬಂದ್ ಗೆ ನೈತಿಕ ಬೆಂಬಲ ನೀಡಲಾಗಿದೆ ಎನ್ನುವದನ್ನ ನೋಡೋಣ.

ಬಂದ್​ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರತಿಭಟನೆ ಆರಂಭವಾಗಿದೆ. ಆದರೆ, ಸಾಮಾನ್ಯ ದಿನಗಳಂತೆಯೇ ಸಂಚಾರ ವ್ಯವಸ್ಥೆ ಆರಂಭವಾಗಿದ್ದು, ಜನ ಜೀವನವು ಕೂಡ ಎಂದಿನಂತಿದೆ. ಇಲ್ಲಿ ಬಂದ್​ ಬಿಸಿ ಅಷ್ಟಾಗಿ ಕಾಣಿಸುತ್ತಿಲ್ಲ. ಆದರೆ, ನಂಜನಗೂಡು ಕೈಗಾರಿಕಾ ಪ್ರದೇಶದ ನೂರಾರು ಕಾರ್ಮಿಕರು ರಸ್ತೆಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಕುಮಾರಸ್ವಾಮಿ ಸ್ವಕ್ಷೇತ್ರವಾದ ರಾಮನಗರಕ್ಕೆ ಭಾರತ್ ಬಂದ್ ಬಿಸಿ ತಟ್ಟಿಲ್ಲ. ಚನ್ನಪಟ್ಟಣ ಸರ್ಕಾರಿ ಬಸ್​ ನಿಲ್ದಾಣಕ್ಕೆ ಎಂದಿನಂತೆ ಬಸ್​ಗಳು ಬರುತ್ತಿವೆ. ಗ್ರಾಮಾಂತರ ಭಾಗಕ್ಕೂ ಬಸ್​ಗಳು ಸಂಚಾರ ಬೆಳೆಸಿವೆ. ಖಾಸಗಿ ಬಸ್​ಗಳ ಸಂಚಾರವೂ ಪ್ರಾರಂಭವಾಗಿದೆ.

ಭಾರತ್​ ಬಂದ್​ ಬಿಸಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ತಟ್ಟಿದೆ. ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಕಳಸಾ ಬಂಡೋರಿ ಹೋರಾಟ ಸಮಿತಿ ಹಾಗೂ ಆಟೋ ಚಾಲಕರ ಮತ್ತು ಮಾಲೀಕರ ಸಂಘಟನೆಯು ಬೆಂಬಲ ನೀಡಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಖಾಸಗಿ ಬಸ್ ಸೇವೆ ಸ್ತಬ್ಧವಾಗಿದೆ. ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ದೋಸ್ತಿ ಸರ್ಕಾರದ ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ. ಬ್ಯಾಂಕ್ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಂದ್​ಗೆ ಬೆಂಬಲ ನೀಡುವ ಕುರಿತು ಹೋಟೆಲ್ ಮಾಲೀಕರ ಸಂಘದ ನಿರ್ಧಾರ ಸ್ಪಷ್ಟವಿಲ್ಲ. ಆದರೆ, ಜನ, ಸಂಚಾರ ವ್ಯವಸ್ಥೆ ಹಾಗೂ ಪರಸ್ಥಿತಿ‌ ನೋಡಿಕೊಂಡು ಹೋಟೆಲ್ ತೆರೆಯಲು ಚಿಂತನೆ ನಡೆಸಿದ್ದಾರೆ. ಆಸ್ಪತ್ರೆಗಳು, ಮೆಡಿಕಲ್ ಶಾಪ್ ಹಾಗೂ ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಬಂದ್​ ಅನ್ನು ತಮ್ಮ ಲಾಭಕ್ಕೆ ಬಳಸಿಕೊಂಡಿರುವ ಹುಬ್ಬಳ್ಳಿಯ ಆಟೋ ಚಾಲಕರು ಪ್ರಯಾಣಿಕರಿಂದ ಹಣದ ಸುಲಿಗೆ ಮಾಡುತ್ತಿದ್ದಾರೆ. ಯಾವುದೇ ಸ್ಥಳಕ್ಕೆ ಹೋಗುವುದಾದರೆ ತಲಾ ನೂರು ರೂಪಾಯಿ ಕೇಳುತ್ತಿದ್ದಾರೆ. ನವನಗರ, ಧಾರವಾಡ ಸೇರಿದಂತೆ ಹಲವೆಡೆಗೆ ತಲಾ ನೂರು ರೂಪಾಯಿ ಫಿಕ್ಸ್ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ 40-50 ರೂಪಾಯಿಗೆ ಆಟೋಗಳು ಬರುತ್ತಿದ್ದವು.

ಹಾವೇರಿಯಲ್ಲಿ ಎಂದಿನಂತೆ ಜನ-ಜೀವನ ಆರಂಭವಾಗಿದೆ. ಸಾರಿಗೆ ಮತ್ತು ಆಟೋ ಸಂಚಾರ ಸುಗಮವಾಗಿದೆ. ಅಂಗಡಿ-ಮುಂಗಟ್ಟುಗಳು ತೆರೆದಿವೆ. 10 ಗಂಟೆಗೆ ಬಂದ್ ಬೆಂಬಲಿಸಿ ಕೆಲವು ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಆದರೆ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಲ್ಲ.

ಹಾಸನದ ಕಾರ್ಮಿಕ ಒಕ್ಕೂಟ ಕರೆದಿರುವ ಬಂದ್​ ಮಿಶ್ರ ಪ್ರತಿಕ್ರಿಯೆ ಇದೆ. ಕೆಲ ಅಂಗಡಿ-ಮುಂಗಟ್ಟು ತೆರೆದಿವೆ. ಹೋಟೆಲ್​ಗಳಿಂದಲೂ ಮಿಶ್ರ ಪ್ರತಿಕ್ರಿಯೆ ಉಂಟಾಗಿದೆ. ಟ್ಯಾಕ್ಸಿ ಆಟೋಗಳಿಂದಲೂ ಬಂದ್​ಗೆ ಬೆಂಬಲ ವ್ಯಕ್ತವಾಗಿಲ್ಲ. ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ನೀಡದಿರುವುದರಿಂದ ಎಂದಿನಂತೆ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿದ್ದಾರೆ.

ಬಂದ್​ ಹಿನ್ನೆಲೆಯಲ್ಲಿ ಯಾದಗಿರಿಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರೂ, ಅದನ್ನರಿಯದೇ ಚಳಿಯನ್ನು ಲೆಕ್ಕಿಸದೆ ನೂರಾರು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದಾರೆ. ಕಾರವಾರದಲ್ಲಿ ಪ್ರತಿಭಟನಾಕಾರರು ಬಸ್ ತಡೆದಜ್ಞದು ಪ್ರತಿಭಟಿಸಿದರ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಹಾಗೂ ಕೆ.ಎಸ್​.ಆರ್​.ಟಿ.ಸಿ. ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಳ್ಳಾರಿಯಲ್ಲೂ ಬಂದ್​ ಬಿಸಿ ಕೊಂಚ ತಟ್ಟಿದೆ. ಪ್ರತಿಭಟನಕಾರರು ವಾಹನಗಳನ್ನು ತಡೆದು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಚಾಮರಾಜನಗರ, ಉಡುಪಿ, ಮಂಡ್ಯ, ಉತ್ತರ ಕನ್ನಡ, ಮಂಗಳೂರು, ಸೇರಿಂದತೆ ರಾಜ್ಯದ ಹಲೆವೆಡೆ ಬಂದ್​ಗೆ ಉತ್ತಮ ಬೆಂಬಲ ವ್ಯಕ್ತವಾಗಿಲ್ಲ. ಎಂದಿನಂತೆ ಜನ ಜೀವನ ಆರಂಭವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights