ಎಎಪಿ ವಿರುದ್ಧದ ಹೋರಾಟಕ್ಕೆ ಕೈಜೋಡಿಸಲು ಅಣ್ಣಾ ಹಜಾರೆಗೆ ಪತ್ರ ಬರೆದ ಬಿಜೆಪಿ
2011ರಲ್ಲಿಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ದೇಶದ ಗಮನವನ್ನು ಸೆಳೆದಿದ್ದಅಣ್ಣಾ ಹಜಾರೆ ಅವರನ್ನು ದೆಹಲಿಯಲ್ಲಿ ಅಧಿಕಾರದಲ್ಲಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರದ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಚಾರಗಳ ವಿರುದ್ಧ ಹೋರಾಟ ರೂಪಿಸಿದ್ದ ಅಣ್ಣಾ ಹಜಾರೆ ಅವರಿಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿತ್ತು. ಸರ್ಕಾರದ ವಿರುದ್ಧದ ಹೋರಾಟದಲ್ಲಿ ಅಣ್ಣಾ ಹಜಾರೆ ಮುಂಚೂಣಿ ನಾಯಕರಾಗಿ ಹೊರಹೊಮ್ಮಿದ್ದರು. ಹಾಗಾಗಿ, ಅವರನ್ನು ಎಎಪಿ ಸರ್ಕಾರದ ವಿರುದ್ಧ ಹೋರಾಟದಲ್ಲಿ ಬಳಸಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ.
ದೆಹಲಿಯಲ್ಲಿ ಎಎಪಿ ಸರ್ಕಾರದ ವಿರುದ್ಧ ಪ್ರತಿಭಟನಾ ಆದೋಂಲನ ನಡೆಸಲು ಯೋಜಿಸಿರುವ ಬಿಜೆಪಿ, ಅಣ್ಣಾ ಹಜಾರೆ ಅವರನ್ನು ಪ್ರತಿಭಟನೆಯಲ್ಲಿ ಜೊತೆಯಾಗುವಂತೆ ಪತ್ರ ಬರೆದಿದೆ. ರಾಜಕೀಯ ಪರಿಶುದ್ಧತೆಯನ್ನು ಆಮ್ ಆದ್ಮಿ ಪಕ್ಷ ನೆಲಸಮ ಮಾಡಿದೆ. ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದೆ ಹಿಂಸಾಚಾರದ ಹಿಂದೆ ಎಎಪಿ ಕೈವಾಡವಿದೆ. ಆಪ್ ಪಕ್ಷ ಆಯೋಜಿಸಿದ ಕೋಮುಗಲಭೆಯಲ್ಲಿ ದೆಹಲಿಯ ಜನರು ನೊಂದಿದ್ದಾರೆ. ಸ್ವಚ್ಛ ಹಾಗು ನ್ಯಾಯಸಮ್ಮತ ರಾಜಕಾರಣ ಮಾಡುವುದಾಗಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಾರ್ಟಿ ರಾಜಕೀಯ ಪರಿಶುದ್ಧತೆಯನ್ನು ಹಾಳು ಮಾಡಿದೆ. ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಹಾಗಾಗಿ ನಾವು ಅವರ ವಿರುದ್ಧ ಧ್ವನಿ ಎತ್ತಿದ್ದೇವೆ. ಅಣ್ಣಾ ಹಜಾರೆಯವರು ಎಎಪಿ ವಿರುದ್ಧದ ಹೋರಾಟದಲ್ಲಿ ಬಿಜೆಪಿ ಜೊತೆ ಕೈಜೋಡಿಸಬೇಕು ಎಂದು ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ ಪತ್ರ ಬರೆದಿದ್ದಾರೆ.
ಬಿಜೆಪಿ ಬರೆದಿರುವ ಪತ್ರಕ್ಕೆ ಅಣ್ಣಾ ಹಜಾರಿ ಈವರೆಗೂ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆ!

